
ಬೆಂಗಳೂರು: ಬೆಂಗಳೂರಿನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಇದೀಗ ಪವಿತ್ರಾಗೌಡ ಎ1 ಆರೋಪಿಯಾಗಿದ್ದರೆ ನಟ ದರ್ಶನ್ ಎ2 ಆರೋಪಿಯಾಗಿದ್ದು 6 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ದರ್ಶನ್ ಕಟ್ಟಾ ಅಭಿಮಾನಿಯಾಗಿದ್ದ ರೇಣುಕಾಸ್ವಾಮಿ, ದರ್ಶನ್-ವಿಜಯಲಕ್ಷ್ಮೀ ದಾಂಪತ್ಯದಲ್ಲಿ ಹುಳಿ ಹಿಂಡಬೇಡ ಎಂಬ ಅರ್ಥದಲ್ಲಿ ಪವಿತ್ರಾ ಗೌಡಗೆ ಅಶ್ಲೀಲ ಫೋಟೋ ಕಳಿಸಿ ಮೆಸೇಜ್ ಮಾಡಿದ್ದ ಕಾರಣಕ್ಕೆ ರೇಣುಕಾಸ್ವಾಮಿಯನ್ನು ಜೂನ್ 8ರಂದು ಕಾಮಾಕ್ಷಿಪಾಳ್ಯದ ಶೆಡ್ ಒಂದಕ್ಕೆ ದರ್ಶನ್ ಗ್ಯಾಂಗ್ ಕರೆಸಿಕೊಂಡು ಕೊಲೆ ಮಾಡಿ ಮೃತದೇಹವನ್ನು ಚರಂಡಿಗೆ ಎಸೆದಿದ್ದರು. ನಂತರ ಜೂನ್ 9ರಂದು ಬೆಳಗ್ಗೆ ರೇಣುಕಾಸ್ವಾಮಿ ಶವ ಸುಮನಹಳ್ಳಿಯ ಸತ್ವ ಅಪಾರ್ಟ್ ಮೆಂಟ್ ಬಳಿಯಿರುವ ಮೋರಿಯಲ್ಲಿ ಪತ್ತೆಯಾಗಿತ್ತು. ಕೊಲೆ ಪ್ರಕರಣದ ಜಾಡು ಹಿಡಿದ ಪೊಲೀಸರು ದರ್ಶನ್, ಪವಿತ್ರಾಗೌಡ, ವಿನಯ್, ಆರ್. ನಾಗರಾಜು, ಎಂ. ಲಕ್ಷ್ಮಣ್, ಎಸ್. ಪ್ರದೋಶ್, ಕೆ. ಪವನ್, ದೀಪಕ್ ಕುಮಾರ್, ನಂದೀಶ್, ಕಾರ್ತಿಕ್, ನಿಖಿಲ್ ನಾಯಕ್, ಕೇಶವಮೂರ್ತಿ ಹಾಗೂ ರಾಘವೇಂದ್ರ ಅಲಿಯಾಸ್ ರಾಘು ಎಂಬುವರನ್ನು ಬಂಧಿಸಿದ್ದರು.
ದರ್ಶನ್ ಹಾಗೂ ವಿಜಯಲಕ್ಷ್ಮಿ ದಂಪತಿ ಕಳೆದ ಮೇ 19ರಂದು ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಿತ್ತು. ಇದಕ್ಕೆ ಅವರ ಅಭಿಮಾನಿಗಳು ಶುಭಾಶಯ ತಿಳಿಸಿದ್ದರು. ಆದರೆ ದರ್ಶನ್ ಆಪ್ತ ಗೆಳತಿ ಪವಿತ್ರಾ ಗೌಡ ಮಾತ್ರ 'ಕರ್ಮ' ಎಂದು ಕಮೆಂಟ್ ಮಾಡಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರು 2003ರ ಮೇ 19ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕಳೆದ ಮೇ 19ಕ್ಕೆ 21 ವರ್ಷವಾಗಿದ್ದು ದುಬೈಗೆ ತೆರಳಿ ಇಬ್ಬರು ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಈ ಮಧ್ಯೆ ನಟಿ ಪವಿತ್ರಾ ಗೌಡ ಅವರು ನಿಗೂಡಾರ್ಥದಲ್ಲಿ ಪೋಸ್ಟ್ ಒಂದನ್ನು ಮಾಡಿದ್ದರು.
ದರ್ಶನ್ ವಿಚಾರವಾಗಿ ಪವಿತ್ರಾ ಗೌಡ ಹಾಗೂ ವಿಜಯಲಕ್ಷ್ಮಿ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಕಿತ್ತಾಟ ನಡೆದಿತ್ತು. ದರ್ಶನ್ ಜೊತೆಗೆ ಇರುವ ಫೋಟೋಗಳನ್ನು ಪೋಸ್ಟ್ ಮಾಡಿದ್ದ ಪವಿತ್ರಾ ಗೌಡ 'ಒಂದು ದಶಕ ಕಳೆಯಿತು' ನಮ್ಮ ಸಂಬಂಧಕ್ಕೆ 10 ವರ್ಷ ಎಂದು ಬರೆದುಕೊಂಡಿದ್ದರು. ಇದು ವಿಜಯಲಕ್ಷ್ಮೀ ಕೆರಳುವಂತೆ ಮಾಡಿತ್ತು. ಅಲ್ಲದೆ ಇದಕ್ಕೆ ಬಹಿರಂಗವಾಗಿಯೇ ತಿರುಗೇಟು ಕೊಟ್ಟಿದ್ದರು.
ವಿಜಯಲಕ್ಷ್ಮೀ ಮತ್ತು ಪವಿತ್ರಾಗೌಡ ನಡುವಿನ ಕಿತ್ತಾಟ ಕುರಿತಂತೆ ನಟ ದರ್ಶನ್ ಈ ಹಿಂದೆ ಹೇಳಿಕೆಯೊಂದನ್ನು ನೀಡಿ ತೀವ್ರ ಟೀಕೆಗೆ ಗುರಿಯಾಗಿದ್ದರು. ಶ್ರೀರಂಗಪಟ್ಟಣದಲ್ಲಿ ನಡೆದಿದ್ದ 25ನೇ ವರ್ಷದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಾರ್ವಜನಿಕ ಸಭೆಯಲ್ಲಿ ಹೆಣ್ಣುಮಕ್ಕಳ ಬಗ್ಗೆ ಕೀಳು ಬಾವನೆಯಿ೦ದ ಒಬ್ಬಳು ಹೋಗುತ್ತಾಳೆ, ಒಬ್ಬಳು ಬರುತ್ತಾಳೆ, ನಾನು ಯಾರ ಬಗ್ಗೆಯೂ ತಲೆ ಕೆಡಿಸಿಕೊಳ್ಳಲ್ಲ. ನಾನು ನನ್ನ ಕೆಲಸ ಮಾಡಿಕೊಂಡು ಹೋಗ್ತೀನಿ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿತ್ತು.
Advertisement