ನಟ ದರ್ಶನ್ ಕಟ್ಟಾ ಅಭಿಮಾನಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದರ್ಶನ್, ಪವಿತ್ರಾ ಗೌಡ ಸೇರಿದಂತೆ 13 ಮಂದಿಯನ್ನು ಬಂಧಿಸಿದ್ದಾರೆ. ಪವಿತ್ರಾ ಗೌಡಗೆ ಅಶ್ಲೀಲ ಫೋಟೋ ಕಳಿಸಿ ಮೆಸೇಜ್ ಮಾಡಿದ್ದ ಕಾರಣಕ್ಕೆ ರೇಣುಕಾಸ್ವಾಮಿಯನ್ನು ಜೂನ್ 8ರಂದು ಕಾಮಾಕ್ಷಿಪಾಳ್ಯದ ಶೆಡ್ ಒಂದಕ್ಕೆ ದರ್ಶನ್ ಗ್ಯಾಂಗ್ ಕರೆಸಿಕೊಂಡು ಹಲ್ಲೆ ಮಾಡಿ ಕೊಲೆ ಮಾಡಿ ಮೃತದೇಹವನ್ನು ಚರಂಡಿಗೆ ಎಸೆದಿದ್ದಾರೆ. ನಂತರ ಜೂನ್ 9ರಂದು ಬೆಳಗ್ಗೆ ರೇಣುಕಾಸ್ವಾಮಿ ಶವ ಸುಮನಹಳ್ಳಿಯ ಸತ್ವ ಅಪಾರ್ಟ್ ಮೆಂಟ್ ಬಳಿಯಿರುವ ಮೋರಿಯಲ್ಲಿ ಪತ್ತೆಯಾಗಿತ್ತು. ಕೊಲೆ ಪ್ರಕರಣದ ಜಾಡು ಹಿಡಿದ ಪೊಲೀಸರು ದರ್ಶನ್, ಪವಿತ್ರಾಗೌಡ, ವಿನಯ್, ಆರ್. ನಾಗರಾಜು, ಎಂ. ಲಕ್ಷ್ಮಣ್, ಎಸ್. ಪ್ರದೋಶ್, ಕೆ. ಪವನ್, ದೀಪಕ್ ಕುಮಾರ್, ನಂದೀಶ್, ಕಾರ್ತಿಕ್, ನಿಖಿಲ್ ನಾಯಕ್, ಕೇಶವಮೂರ್ತಿ ಹಾಗೂ ರಾಘವೇಂದ್ರ ಅಲಿಯಾಸ್ ರಾಘು ಎಂಬುವರನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದರು.
ರೇಣುಕಾಸ್ವಾಮಿ ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಎ1 ಆರೋಪಿಯಾಗಿದ್ದರೆ ದರ್ಶನ್ ಎ2 ಆರೋಪಿಯಾಗಿದ್ದಾರೆ. ಸದ್ಯ ಬಂಧಿತ 13 ಆರೋಪಿಗಳಿಗೆ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ ಪೊಲೀಸರು ನಂತರ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರುಪಡಿಸಿದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಶ್ವನಾಥ್ ಗೌಡರ್, ನಟ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳನ್ನು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಹರಣ ಮಾಡಿದ ಸ್ಥಳ, ಕೊಲೆಯಾದ ಸ್ಥಳ, ಶವ ಎಸೆದ ಜಾಗಗಳಲ್ಲಿ ಸ್ಥಳ ಮಹಜರು ನಡೆಸಬೇಕಿದ್ದು ಹೀಗಾಗಿ 14 ದಿನ ಕಸ್ಟಡಿಗೆ ನೀಡುವಂತೆ ಪೊಲೀಸರು ಕೇಳಿದ್ದರು. ಇದಕ್ಕೆ ದರ್ಶನ್ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದು ಪೊಲೀಸ್ ಕಸ್ಟಡಿಗೆ ನೀಡುವ ಅಗತ್ಯವಿಲ್ಲ ಎಂದು ವಾದಿಸಿದ್ದರು.
ಮೈಸೂರು ದಸರಾ ಆನೆ ಅರ್ಜುನ ಸಾವಿನ ಆಘಾತದ ಬೆನ್ನಲ್ಲೇ ಮತ್ತೊಂದು ದಸರಾ ಆನೆ ಅಶ್ವತ್ಥಾಮ ವಿದ್ಯುತ್ ತಗುಲಿ ಸಾವನ್ನಪ್ಪಿದೆ. ದಸರಾ ಮಹೋತ್ಸವದಲ್ಲಿ ಎರಡು ಬಾರಿ ಪಾಲ್ಗೊಂಡಿದ್ದ 38 ವರ್ಷದ 'ಅಶ್ವತ್ಥಾಮ' ಆನೆ ಸೋಲಾರ್ ಬೇಲಿಯ ವಿದ್ಯುತ್ ಪ್ರವಹಿಸಿ ಮೃತಪಟ್ಟಿದೆ. ಮೈಸೂರಿನ ನಾಗರಹೊಳೆ ಹುಲಿಸಂರಕ್ಷಿತ ಪ್ರದೇಶ ವ್ಯಾಪ್ತಿಯ ಭೀಮನಕಟ್ಟೆ ಆನೆ ಶಿಬಿರದ ಅಶ್ವತ್ಥಾಮ ಆನೆ ಆಹಾರ ಅರಸಿ ಕಾಡಿಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಅರಣ್ಯ ಇಲಾಖೆ ಮೂಲಗಳಿಂದ ತಿಳಿದುಬಂದಿದೆ. 2017ರಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನಲ್ಲಿ ಈ ಅಶ್ವತ್ಥಾಮ ಆನೆಯನ್ನು ಸೆರೆ ಹಿಡಿಯಲಾಗಿತ್ತು. ಶಾಂತ ಹಾಗೂ ಗಾಂಭೀರ್ಯ ಸ್ವಭಾವಕ್ಕೆ ಹೆಸರಾಗಿದ್ದ ಅದನ್ನು 2021ರ ದಸರಾಗೆ ಕರೆತರಲಾಗಿತ್ತು.
BBMPಗೆ ಸೇರಿದ ಎಲ್ಲಾ ಪಾರ್ಕ್ ಗಳು ಇನ್ನು ಮುಂದೆ ಬೆಳಗಿನ ಜಾವ 5 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ತೆರೆದಿರುತ್ತದೆ. ಈ ಸಂಬಂಧ ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಆದೇಶ ಹೊರಡಿಸಿದ್ದು ಉದ್ಯಾನವನದಲ್ಲಿ ಹೆಚ್ಚಿನ ಭದ್ರತೆಗೆ ಪಾಲಿಕೆ ವತಿಯಿಂದ ಸಿಬ್ಬಂದಿ ನಿಯೋಜಿಸಲಾಗುವುದು ಎಂದರು. ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಡಿ ಅರಣ್ಯ, ಪರಿಸರ ಹಾಗೂ ಹವಾಮಾನ ವೈಪರೀತ್ಯ ನಿರ್ವಹಣೆ ಇಲಾಖೆ ಹಾಗೂ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಜೊತೆ ಡಿಸಿಎಂ ಸಭೆ ನಡೆಸಿದರು. ಬೆಂಗಳೂರಿನ ಎಲ್ಲಾ 1,200 ಪಾಕ್ ಗಳು ಇನ್ನುಂದೆ ಬೆಳಿಗ್ಗೆ 5ರಿಂದ ರಾತ್ರಿ 10ರವರೆಗೆ ಸಾರ್ವಜನಿಕರಿಗೆ ತೆರೆದಿರಲಿದೆ ಎಂದು ತಿಳಿಸಿದರು. ಈ ಹಿಂದೆ ಬೆಂಗಳೂರು ನಗರ ವ್ಯಾಪ್ತಿಯ ಉದ್ಯಾನವನಗಳು ಸಂಜೆ 6 ಗಂಟೆ ನಂತರ ಮುಚ್ಚಲಾಗುತ್ತಿತ್ತು.
ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಿಎನ್ ಮಂಜುನಾಥ್ ವಿರುದ್ಧ ಕಾಂಗ್ರೆಸ್ ಡಿಕೆ ಸುರೇಶ್ ಗೆಲ್ಲುತ್ತಾರೆ ಎಂದು 50 ಲಕ್ಷ ರೂ. ಬೆಟ್ಟಿಂಗ್ ಕಟ್ಟಿದ್ದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ದುಡ್ಡು ಕಳೆದುಕೊಂಡು ಸಾಲದ ಸುಳಿಗೆ ಸಿಲುಕಿದ್ದ ರಾಮನಗರ ಜಿಲ್ಲೆಯ ಕೆಂಚನಕುಪ್ಪೆ ನಿವಾಸಿ 44 ವರ್ಷದ ಶಿವರಾಜು ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾನೆ. 2024ರ ಲೋಕಸಭೆ ಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿಯಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿಎನ್ ಮಂಜುನಾಥ್ ಅವರು ಬರೋಬ್ಬರಿ 1.9 ಲಕ್ಷ ಮತಗಳ ಅಂತರದಿಂದ ಡಿಕೆ ಸುರೇಶ್ ರನ್ನು ಸೋಲಿಸಿದ್ದರು.
Advertisement