
ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪೊಲೀಸ್ ಲಾಕಪ್ ನಲ್ಲಿರುನ ನಟ ದರ್ಶನ್, ಅವರ ಆಪ್ತ ಗೆಳತಿ ಪವಿತ್ರಾ ಗೌಡ ಸೇರಿದಂತೆ ಇತರ 11 ಮಂದಿ ಆರೋಪಿಗಳ ವಿರುದ್ಧ ಯಾವುದೇ ಕಾರಣಕ್ಕೂ ಸಾಫ್ಟ್ ಕಾರ್ನರ್ ತೋರಿಸಬೇಡಿ ಎಂದು ಸಿಎಂ ಸಿದ್ದರಾಮಯ್ಯ ಪೊಲೀಸರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇದೊಂದು ಕೊಲೆ ಪ್ರಕರಣವಾಗಿರುವುದರಿಂದ ಕೂಲಂಕಷ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಿ, ಉಪ್ಪು ತಿಂದವರು ನೀರು ಕುಡಿಯಲೇಬೇಕು, ದರ್ಶನ್ ವಿಚಾರದಲ್ಲಿ ಸಾಫ್ಟ್ ಆಗಬೇಡಿ ಎಂದು ಸಿಎಂ ಸಿದ್ದರಾಮಯ್ಯ ಗೃಹ ಸಚಿವ ಪರಮೇಶ್ವರ್ ಅವರಿಗೆ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಹತ್ಯೆಗೀಡಾಗಿರುವ ರೇಣುಕಾ ಸ್ವಾಮಿ ಕುಟುಂಬಕ್ಕೆ ಪರಿಹಾರ ಕೊಡಿಸುವ ಬಗ್ಗೆ ಸಿಎಂ ಸಿದ್ದರಾಮಯ್ಯ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡುವ ವೇಳೆ ಪರಮೇಶ್ವರ್ ಹೇಳಿದರು. ಕಾನೂನು ಎಲ್ಲರಿಗೂ ಒಂದೇ. ಯಾರೇ ತಪ್ಪು ಮಾಡಿದ್ದರೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ದರ್ಶನ್ ಕೊಲೆ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆ ನಡೆಯುತ್ತಿದೆ. ಕಾನೂನನ್ನು ಯಾರೂ ಕೈಗೆತ್ತಿಕೊಳ್ಳಬಾರದು ಎಂದು ಹೇಳಿದರು.
ದರ್ಶನ್ ಗೆಳತಿ ಬಗ್ಗೆ ರೇಣುಕಾ ಸ್ವಾಮಿ ಪೋಸ್ಟ್ ಮಾಡಿದ್ದ ಎಂಬ ಆರೋಪವಿದೆ. ಹಾಗೆ ಮಾಡಿದ್ದರೆ ಪೊಲೀಸರಿಗೆ ದೂರು ನೀಡಬಹುದಿತ್ತು. ದೂರು ನೀಡಿದ್ದರೆ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದರು. ರೇಣುಕಾಸ್ವಾಮಿಯನ್ನು ಕರೆತಂದು ಕೊಲೆ ಮಾಡಿದ ಬಗ್ಗೆ ಆರೋಪ ಇದೆ. ಹೀಗಾಗಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಎಲ್ಲಾ ಪ್ರಕರಣಗಳನ್ನು ಸಿಬಿಐಗೆ ನೀಡಲು ಆಗುವುದಿಲ್ಲ. ಪ್ರಕರಣದ ವಿಚಾರವಾಗಿ ಸರ್ಕಾರ ಮಧ್ಯಪ್ರವೇಶ ಮಾಡಲ್ಲ. ತನಿಖೆ ನಡೆಸಲು ಪೊಲೀಸರಿಗೆ ಮುಕ್ತ ಅವಕಾಶ ನೀಡಲಾಗಿದೆ. ಕಾನೂನಿನ ಪ್ರಕಾರ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದರು.
ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅವರ ತನಿಖಾ ವರದಿ ಕೈಸೇರಿದ ನಂತರ ಮುಂದಿನ ಕ್ರಮದ ಬಗ್ಗೆ ತೀರ್ಮಾನಿಸುತ್ತೇವೆ ಎಂದು ಹೇಳಿದರು.
Advertisement