
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ವ್ಯಕ್ತಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಪೊಲೀಸರ ಅತಿಥಿಯಾಗಿದ್ದಾರೆ. ಪ್ರಕರಣದಲ್ಲಿ ದರ್ಶನ್, ಅವರ ಆಪ್ತ ಗೆಳತಿ ಪವಿತ್ರಾ ಗೌಡ ಸೇರಿದಂತೆ 13 ಮಂದಿ ಅರೆಸ್ಟ್ ಆಗಿದ್ದಾರೆ. ಪವಿತ್ರಾ ಈ ಪ್ರಕಣದಲ್ಲಿ ಎ1 ಅಪರಾಧಿ ಎನಿಸಿಕೊಂಡಿದ್ದು, ದರ್ಶನ್ ಎ2 ಅಪರಾಧಿ ಆಗಿದ್ದಾರೆ. ಸದ್ಯ ಕೊಲೆ ವಿಚಾರದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಿನ್ನೆ ಬೆಳಗ್ಗೆ ಮೈಸೂರಿನ ಬ್ಲೂ ರ್ಯಾಡಿಸನ್ ಹೊಟೇಲ್ ನ ಜಿಮ್ ನಲ್ಲಿ ಬೆಳ್ಳಂಬೆಳಗ್ಗೆ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದ ದರ್ಶನ್ ಅವರನ್ನು ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸರು ಹೋಗಿ ಬಂಧಿಸಿ ಕರೆತಂದು ವಿಚಾರಣೆ ನಡೆಸಿ 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೊಪ್ಪಿಸಲಾಗಿದೆ.
ನಿದ್ದೆಯಿಲ್ಲದೆ ರಾತ್ರಿ ಕಳೆದ ನಟ: ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆಯ ಲಾಕಪ್ನಲ್ಲಿ ದರ್ಶನ್ ಹಾಗೂ ಸಹಚರರು ಇದ್ದಾರೆ. ರಾತ್ರಿ ದರ್ಶನ್ ಅವರಿಗೆ ಹೋಟೆಲ್ನಿಂದ ದೊನ್ನೆ ಬಿರಿಯಾನಿ ತರಿಸಲಾಗಿದೆ. ಆದರೆ ಬೇಸರದಲ್ಲಿಯೇ ಇದ್ದ ದರ್ಶನ್ ಬಿರಿಯಾನಿ ತಿನ್ನದೆ ಒಂದು ಗ್ಲಾಸ್ ಮಜ್ಜಿಗೆ ಕುಡಿದು, ಬಿಸ್ಕೆಟ್ ಮತ್ತು ಪೊಲೀಸರು ಕೊಟ್ಟ ಚಾಕಲೇಟ್ ತಿಂದು ರಾತ್ರಿಯೆಲ್ಲ ನಿದ್ದೆಯಿಲ್ಲದೆ ಕಳೆದಿದ್ದಾರೆ. ಲಾಕಪ್ನಲ್ಲಿ ಎಚ್ಚರಗೊಂಡು ಕುಳಿತಿದ್ದಾರೆ. ಬಂಧನದ ಬಳಿಕ ಅವರು ಚಿಂತೆಗೊಳಗಾಗಿದ್ದರು ಎಂದು ತಿಳಿದುಬಂದಿದೆ. ಭದ್ರತೆ ದೃಷ್ಟಿಯಿಂದ ಅನ್ನಪೂರ್ಣೇಶ್ವರಿ ನಗರ ಠಾಣೆ ಬಳಿ ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗಿದೆ.
ಆರು ದಿನಗಳ ಕಾಲ ದರ್ಶನ್ ವಿಚಾರಣೆ ನಡೆಯಲಿದೆ. ಇಂದಿನಿಂದ ಸಾಕ್ಷ್ಯ ಕಲೆ ಹಾಕಲು ಸ್ಥಳ ಮಹಜರು ಸೇರಿದಂತೆ ಮುಂದಿನ ಕೆಲಸ ಆರಂಭ ಆಗಲಿದೆ. ಕಿಡ್ನಾಪ್ ಮಾಡಿ ಕರೆದೊಯ್ದ ಜಾಗಗಳ ಮಹಜರನ್ನು ಪೊಲೀಸರು ನಡೆಸಲಿದ್ದಾರೆ. ರೇಣುಕಾಸ್ವಾಮಿ ಕೂಡಿ ಹಾಕಿ ಹಲ್ಲೆ ಮಾಡಿದ ಜಾಗ, ಶವ ಎಸೆದ ಜಾಗದಲ್ಲಿ ಮಹಜರು ನಡೆಯಲಿದೆ.
ಸಾಂತ್ವನ ಕೇಂದ್ರದಲ್ಲಿ ರಾತ್ರಿ ಕಳೆದ ಪವಿತ್ರಾ ಗೌಡ: ಇನ್ನು ನಿನ್ನೆ ವಿಚಾರಣೆ ನಡೆಸಿ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ ನಂತರ ಪವಿತ್ರಾ ಗೌಡರನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಿ ಅವರು ಅಲ್ಲಿ ರಾತ್ರಿಯನ್ನು ಕಳೆದಿದ್ದರು. ಇಂದು ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯ ಕಸ್ಟಡಿಗೆ ಒಪ್ಪಿಸಲಾಗಿದೆ.
ನ್ಯಾಯಾಧೀಶ ವಿಶ್ವನಾಥ್ ಸಿ ಗೌದಾರ್ ಅವರು ನಿನ್ನೆ ನ್ಯಾಯಾಲಯದಲ್ಲಿ ಪವಿತ್ರಾ, ದರ್ಶನ್ ಮತ್ತು ಇತರ ಆರೋಪಿಗಳನ್ನು ವಿಚಾರಿಸಿದಾಗ ದರ್ಶನ ನಿರಂತರವಾಗಿ ಅಳುತ್ತಿದ್ದರು. ಪವಿತ್ರ ಕೂಡ ವಿಚಾರಣೆ ವೇಳೆ ಕಣ್ಣೀರಾದರು.
ದರ್ಶನ್ ತನಿಖೆಗೆ ಸಹಕರಿಸುತ್ತಿದ್ದಾರೆ. ಅವರ ಮೊಬೈಲ್ ಫೋನ್‌ಗಳನ್ನು ಈಗಾಗಲೇ ವಶಪಡಿಸಿಕೊಳ್ಳಲಾಗಿದೆ ನ್ಯಾಯಾಧೀಶರು ಜೂನ್ 17 ರವರೆಗೆ ಪೊಲೀಸ್ ಕಸ್ಟಡಿಗೊಪ್ಪಿಸಿ ಆದೇಶ ನೀಡಿದ್ದಾರೆ.
ಚಿತ್ರದುರ್ಗದಲ್ಲಿ ಪ್ರತಿಭಟನೆ: ವೈಯಕ್ತಿಕ ಕಾರಣಕ್ಕೆ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ಅಮಾಯಕ ವ್ಯಕ್ತಿ ರೇಣುಕಾ ಸ್ವಾಮಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ನಟ ದರ್ಶನ್ ಮತ್ತು ಅವರ ಗ್ಯಾಂಗ್ ಗೆ ತಕ್ಕ ಶಿಕ್ಷೆಯಾಗಬೇಕೆಂದು ಚಿತ್ರದುರ್ಗ ನಗರದಲ್ಲಿ ವಿವಿಧ ಸಂಘಟನೆಗಳು ಇಂದು ಪ್ರತಿಭಟನೆ ನಡೆಸುತ್ತಿವೆ.
Advertisement