RenukaSwamyCase: Darshan ಸೇರಿ 13 ಆರೋಪಿಗಳ ಕರೆತಂದು ಸ್ಥಳ ಮಹಜರು; KuwaitFire: 40 ಭಾರತೀಯರು ಸಜೀವ ದಹನ! ಇವು ಇಂದಿನ ಪ್ರಮುಖ ಸುದ್ದಿಗಳು 12-06-24

RenukaSwamyCase: Darshan ಸೇರಿ 13 ಆರೋಪಿಗಳ ಕರೆತಂದು ಸ್ಥಳ ಮಹಜರು; KuwaitFire: 40 ಭಾರತೀಯರು ಸಜೀವ ದಹನ! ಇವು ಇಂದಿನ ಪ್ರಮುಖ ಸುದ್ದಿಗಳು 12-06-24

1. RenukaSwamyCase: Darshan ಸೇರಿ 13 ಆರೋಪಿಗಳನ್ನು ಕರೆತಂದು ಸ್ಥಳ ಮಹಜರು

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ನಟ ದರ್ಶನ್ ತೂಗುದೀಪ, ಪವಿತ್ರಾಗೌಡ ಸೇರಿದಂತೆ ಎಲ್ಲಾ 13 ಆರೋಪಿಗಳನ್ನು ಬೆಂಗಳೂರಿನ ಪಟ್ಟಣಗೆರೆಯ ಶೆಡ್ ಗೆ ಕರೆದೊಯ್ದ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ಚಿತ್ರದುರ್ಗದಿಂದ ಅಪಹರಿಸಿಕೊಂಡು ಬಂದಿದ್ದ ರೇಣುಕಾಸ್ವಾಮಿಯನ್ನು ಇದೇ ಶೆಡ್ ಗೆ ಕರೆದೊಯ್ದು ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿತ್ತು. ಹೀಗಾಗಿ ಅಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸಲು ಎಫ್ಎಸ್ಎಲ್ ತಂಡ ಹಾಗೂ ಪೊಲೀಸರು ಮುಂದಾಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಬಳಿಕ ನಾಲ್ವರು ಶವವನ್ನು ಸುಮನಹಳ್ಳಿಯ ಬಳಿ ರಾಜಕಾಲುವೆಗೆ ಎಸೆದು ಪರಾರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಪಟ್ಟಣಗೆರೆ ಶೆಡ್ ಸ್ಥಳ ಮಹಜರಿಗೂ ಮುನ್ನ ಆರೋಪಿಗಳನ್ನು ಶವ ಎಸೆದ ಜಾಗದಲ್ಲೂ ಸ್ಥಳ ಮಹಜರು ನಡೆಸಿದರು.

2. ದರ್ಶನ್ ನನ್ನು ಚಿತ್ರರಂಗದಿಂದ ಬ್ಯಾನ್ ಮಾಡಿ, ಆತನಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಿ: ಮೃತ ರೇಣುಕಾಸ್ವಾಮಿ ತಾಯಿ

ನಟ ದರ್ಶನ್ ನನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕು, ಆತನಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಿ ಎಂದು ಮೃತ ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಆಕ್ರೋಶ ಹೊರಹಾಕಿದ್ದರೆ, ದರ್ಶನ್ ಮೇಲೆ ಆರೋಪ ಬಂದಿರುವಾಗ ನ್ಯಾಯ ಕೊಡಿಸಲು ಜನ ಇದ್ದಾರೆ, ಆದರೆ ನಮ್ಮಂತವರ ಗತಿಯೇನು. ನಮಗೆ ನ್ಯಾಯ ಕೊಡಿಸಿ ಎಂದು ಮೃತ ರೇಣುಕಾಸ್ವಾಮಿ ಪತ್ನಿ ಸಹನಾ ಕಣ್ಣೀರಿಟ್ಟಿದ್ದಾರೆ. ಈ ಮಧ್ಯೆ, ರೇಣುಕಾಸ್ವಾಮಿ ಬರ್ಬರ ಹತ್ಯೆ ಖಂಡಿಸಿ ವಿವಿಧ ಸಂಘಟನೆಗಳು ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ನಟ ದರ್ಶನ್ ಗೆ ಜೀವಾವಧಿ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ, ನಟ ದರ್ಶನ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮೈಸೂರಿನ ಟಿ ನರಸೀಪುರದಲ್ಲಿರುವ ತಮ್ಮ ಫಾರ್ಮ್ ಹೌಸ್‌ನಲ್ಲಿ ನಾಲ್ಕು ವಿಶಿಷ್ಟ ಪ್ರಭೇದದ ಬಾತುಕೋಳಿಗಳನ್ನು ಸಾಕಿದ್ದ ಹಿನ್ನೆಲೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ದರ್ಶನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ. ದರ್ಶನ್, ಅವರ ಪತ್ನಿ ವಿಜಯಲಕ್ಷ್ಮಿ ಮತ್ತು ಪ್ರಾಪರ್ಟಿ ಮ್ಯಾನೇಜರ್ ನಾಗರಾಜ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ.

3. ಪೋಕ್ಸೋ ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ಹೈಕೋರ್ಟ್ ಗೆ BSY ಅರ್ಜಿ

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಮ್ಮ ವಿರುದ್ಧ ದಾಖಲಾಗಿದ್ದ ಪೋಕ್ಸೋ ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ತಾವು ಯಾವುದೇ ಕಾನೂನುಬಾಹಿರ ಕೃತ್ಯ ಎಸಗಿಲ್ಲ. ಫಿರ್ಯಾದಿ ಮಹಿಳೆಗೆ ದೂರು ನೀಡುವುದೇ ಹವ್ಯಾಸವಾಗಿತ್ತು. ಎಫ್ಐಆರ್ ದಾಖಲಾದ ನಂತರ ಏಪ್ರಿಲ್​​​ 12ರಂದು ಪೊಲೀಸರ ವಿಚಾರಣೆಗೆ ಹಾಜರಾಗಿದ್ದೆ. ಪೊಲೀಸರು ಹೇಳಿಕೆ ದಾಖಲಿಸಿಕೊಳ್ಳದೇ ಧ್ವನಿ ಮಾದರಿ ಸಂಗ್ರಹಿಸಿದ್ದರು ಎಂದು ಯಡಿಯೂರಪ್ಪ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಬಿಎಸ್ ಯಡಿಯೂರಪ್ಪ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ. ಮತ್ತೊಂಡೆದೆ ಯಡಿಯೂರಪ್ಪ ವಿರುದ್ಧ ದೂರು ದಾಖಲಿಸಿದ್ದ ಮಹಿಳೆ ಕಳೆದ ತಿಂಗಳು ಮೃತಪಟ್ಟಿದ್ದರು. ಇದೀಗ ಅವರ ಸಹೋದರ ಹೈಕೋರ್ಟ್ ಗೆ ಮೆಟ್ಟಿಲೇರಿದ್ದು ಯಡಿಯೂರಪ್ಪ ಅವರನ್ನು ಬಂಧಿಸುವಂತೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಈಮಧ್ಯೆ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಅಶೋಕ್ ಎನ್ ನಾಯಕ್ ಅವರನ್ನು ವಿಶೇಷ ಅಭಿಯೋಜಕರನ್ನಾಗಿ ನೇಮಕ ಮಾಡಿದೆ.

4. ಬೆಳಗಾವಿಯಲ್ಲಿ ಪಾಕ್ ಪರ ಘೋಷಣೆ: ಕೈದಿಗೆ ಥಳಿತ

ಬೆಳಗಾವಿ ನ್ಯಾಯಾಲಯ ಆವರಣದಲ್ಲಿ ವಿಚಾರಣಾಧೀನ ಕೈದಿಯೊಬ್ಬ ಪಾಕಿಸ್ತಾನ ಪರ ಘೋಷಣೆ ಕೂಗಿದ್ದು ಇದರಿಂದ ಕೆರಳಿದ ಸಾರ್ವಜನಿಕರು ಹಾಗೂ ವಕೀಲರು ಆತನಿಗೆ ಥಳಿಸಿದ್ದಾರೆ. ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಗೆ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿದ್ದುಕೊಂಡೆ ಜೀವ ಬೆದರಿಕೆ ಒಡ್ಡಿದ ಪ್ರಕರಣ ಸಂಬಂಧ ವಿಚಾರಣೆಗೆ ಕರೆತಂದಿದ್ದಾಗ ಕೈದಿ ಜಯೇಶ್ ಪೂಜಾರಿ ಈ ಘೋಷಣೆ ಕೂಗಿದ್ದಾನೆ. ನ್ಯಾಯಾಲಯದಲ್ಲಿ ನನ್ನ ಅಹವಾಲು ಸ್ವೀಕರಿಸುತ್ತಿಲ್ಲ ಎಂದು ಪಾಕಿಸ್ತಾನ ಪರ ಘೋಷಣೆ ಕೂಗಿದ್ದು, ಸದ್ಯ ಕೈದಿಯನ್ನು ರಕ್ಷಿಸಿದ ಪೊಲೀಸರು ಎಪಿಎಂಸಿ ಠಾಣೆಗೆ ಕರೆದೊಯ್ದಿದ್ದಾರೆ. ಜಯೇಶ್ ಪೂಜಾರಿ ಈ ಹಿಂದೆ ಜೈಲಿನಲ್ಲಿ ಇದ್ದುಕೊಂಡೇ, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೂ ಬೆದರಿಕೆ ಕರೆ ಹಾಕಿದ್ದ‌ನು.

5. ಕುವೈತ್ ಅಗ್ನಿ ಅವಘಡ: 40 ಭಾರತೀಯರು ಸಜೀವ ದಹನ

ಕುವೈತ್‌ನ ದಕ್ಷಿಣ ನಗರವಾದ ಮಂಗಾಫ್‌ನ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಸುಮಾರು 43 ಮಂದಿ ಸಜೀವ ದಹನವಾಗಿದ್ದಾರೆ. ಈ ಅಗ್ನಿ ದುರಂತದಲ್ಲಿ ಮೃತಪಟ್ಟವರಲ್ಲಿ ಬಹುತೇಕರು ಭಾರತೀಯರು ಎಂದು ಹೇಳಲಾಗುತ್ತಿದೆ. ಭಾರತೀಯ ಕಾರ್ಮಿಕರಿದ್ದ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಘಟನೆಯಲ್ಲಿ ಹಲವರಿಗೆ ಸುಟ್ಟು ಗಾಯಗಳಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಕಾರ್ಮಿಕ ಶಿಬಿರದ ಅಡುಗೆಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ನಂತರ ಇಡೀ ಕಟ್ಟಡಕ್ಕೆ ಆವರಿಸಿತ್ತು. ಈ ವೇಳೆ ಕೆಲವರು ಕಟ್ಟಡದಿಂದ ಕೆಳಗೆ ಹಾರಿ ಮೃತಪಟ್ಟಿದ್ದರೆ ಇನ್ನು ಕೆಲವರು ಸಜೀವ ದಹನವಾಗಿದ್ದಾರೆ. ಅಗ್ನಿ ದುರಂತಕ್ಕೆ ಆಘಾತ ವ್ಯಕ್ತಪಡಿಸಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು, ಘಟನೆಯಲ್ಲಿ 43 ಮಂದಿ ಭಾರತೀಯರು ಸಾವನ್ನಪ್ಪಿದ್ದಾರೆ. ಇನ್ನು ಗಾಯಗೊಂಡಿರುವವರಿಗೆ ನಮ್ಮ ರಾಯಭಾರಿ ಕಚೇರಿಯಿಂದ ಸಂಪೂರ್ಣ ಸಹಾಯ ಸಿಗಲಿದೆ ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com