ನಟ ದರ್ಶನ್ ಇರುವ ಪೊಲೀಸ್ ಠಾಣೆ ಸುತ್ತ ಶಾಮಿಯಾನದ ಪರದೆ, 144 ಸೆಕ್ಷನ್ ಬಳಕೆ: ವಿಪಕ್ಷಗಳ ಆಕ್ಷೇಪ

ಗುರುವಾರದಿಂದ ಸೋಮವಾರದವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಎಲ್ಲಾ ಆರೋಪಿಗಳ ಪೊಲೀಸ್ ಕಸ್ಟಡಿ ಸೋಮವಾರ ಕೊನೆಗೊಳ್ಳಲಿದೆ. ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಬುಧವಾರ ಠಾಣೆಗೆ ಭೇಟಿ ನೀಡಿದ್ದರು.
ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆ
ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ಮತ್ತಿತರ 12 ಆರೋಪಿಗಳ ತನಿಖೆ ನಡೆಸುತ್ತಿರುವ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ನಟ ಕಾಣದಂತೆ ಶಾಮಿಯಾನದ ಪರದೆ ಹಾಕಿರುವುದು ಮತ್ತು ಠಾಣೆಯ 200 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ.

ಗುರುವಾರದಿಂದ ಸೋಮವಾರದವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಎಲ್ಲಾ ಆರೋಪಿಗಳ ಪೊಲೀಸ್ ಕಸ್ಟಡಿ ಸೋಮವಾರ ಕೊನೆಗೊಳ್ಳಲಿದೆ. ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಬುಧವಾರ ಠಾಣೆಗೆ ಭೇಟಿ ನೀಡಿದ್ದರು. ದರ್ಶನ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ, ಘೋಷಣೆ ಕೂಗಿದ್ದರಿಂದ ತನಿಖೆಯ ಮೇಲೆ ಪರಿಣಾಮ ಬೀರಿತ್ತು. ಅಲ್ಲದೇ ಠಾಣೆಗೆ ಭೇಟಿ ನೀಡುವ ಇತರ ಸಾರ್ವಜನಿಕರಿಗೂ ಸಹ ತೊಂದರೆಯಾಗಿತ್ತು. ಈ ಹಿನ್ನೆಲೆಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ ಎನ್ನಲಾಗುತ್ತಿದೆ.

ಈ ಮಧ್ಯೆ 14ನೇ ಆರೋಪಿ ಪ್ರದುಶ್ ರಾಷ್ಟ್ರೀಯ ಪಕ್ಷವೊಂದರ ಐಟಿ ಸೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ. ಅವರು ಮಾಜಿ ಸಚಿವರೊಬ್ಬರ ಆಪ್ತ ಸಹಾಯಕರೂ ಆಗಿದ್ದರು. ಅವರಿಗಿದ್ದ ಸೈಬರ್ ಪರಿಣತಿಯಿಂದ ರೇಣುಕಾಸ್ವಾಮಿಯ ಬಗ್ಗೆ ಮಾಹಿತಿ ಕಲೆ ಹಾಕಿದ್ದರು ಎಂದು ತಿಳಿದುಬಂದಿದೆ.

ಪೊಲೀಸ್ ಠಾಣೆ ಸುತ್ತ ಶಾಮಿಯಾನದ ಪರದೆ ಹಾಕಿರುವುದು ಮತ್ತು ಠಾಣೆಯ 200 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಿರುವುದಕ್ಕೆ ಪ್ರತಿಪಕ್ಷ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಪೊಲೀಸ್ ಠಾಣೆಗೆ 144 ಸೆಕ್ಷನ್ ಹಾಕುವುದು ಎಂದರೆ ಪೊಲೀಸ್ ಠಾಣೆ ರಕ್ಷಿಸಲು ಇನ್ನೊಬ್ಬ ಖಾಸಗಿಯವರಿಗೆ ಕೊಟ್ಟಂತೆ. ಅಂದರೆ, ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಹೋಗಿದೆ ಎಂಬುದಕ್ಕೆ ನಿದರ್ಶನ. ಮಾಧ್ಯಮದವರನ್ನು ದೂರ ಇಡುವ ಉದ್ದೇಶ, ಇನ್ನೊಬ್ಬರನ್ನು ದೂರವಿಡಲು ಮತ್ತು ಠಾಣೆಯಲ್ಲಿ ತಮ್ಮ ವೈಯಕ್ತಿಕ ಹಿತಾಸಕ್ತಿಯ ಚಟುವಟಿಕೆ ಮಾಡುವುದಕ್ಕಾಗಿ ಅಥವಾ ಯಾರನ್ನೋ ಓಲೈಕೆಗೆ 144ನೇ ಸೆಕ್ಷನ್ ಬಳಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆ
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ತನಿಖಾಧಿಕಾರಿ ಬದಲಾವಣೆ!

ಕಾನೂನು ಎಲ್ಲರಿಗೂ ಸಮಾನ. ಎಲ್ಲರನ್ನೂ ಸಮಾನ ದೃಷ್ಟಿಯಿಂದ ನೋಡುವುದೇ ಕಾನೂನು. ನಮ್ಮ ಸಂವಿಧಾನದಂತೆ ಕಾನೂನಿನಡಿ ಎಲ್ಲರೂ ಸಮಾನರು. ಆದರೆ, ವಿಐಪಿಯನ್ನು ಕರೆದುಕೊಂಡು ಬಂದ ತಕ್ಷಣ ಶಾಮಿಯಾನ ಹಾಕಿ, ಮಾಧ್ಯಮದವರ ಮೇಲೆ ಹಲ್ಲೆ ಮಾಡಿ, ಮಾಧ್ಯಮದವರನ್ನು ಪೊಲೀಸ್ ಠಾಣೆ ಆವರಣಕ್ಕೆ ಬಿಡಲಾರದಂತೆ ವರ್ತಿಸುತ್ತಿದ್ದು, ಇದು ಸರಕಾರ ಯಾವ ರೀತಿ ಆಡಳಿತ ನಡೆಸುತ್ತಿದೆ ಎಂಬುದಕ್ಕೆ ಸಾಕ್ಷಿ ಎಂದು ವಿವರಿಸಿದರು.

ಕೊಲೆ ಮಾಡಿದವನು, ಕೊಲೆಗೆ ಸಂಚು ಮಾಡಿದವನು, ಕೊಲೆಗೆ ದುಷ್ಪ್ರೇರಣೆ ನೀಡಿದವನು, ಕೊಲೆ ಪ್ರಕರಣದ ಸಾಕ್ಷಿ ನಾಶ ಮಾಡುವವನು, ಕೊಲೆಯ ಸಾಕ್ಷ್ಯದ ದಿಕ್ಕು ತಪ್ಪಿಸುವವನು- ಈ ಎಲ್ಲ ಚಟುವಟಿಕೆಗಳು ಕೊಲೆಯ ಒಳಸಂಚಿನ ಭಾಗವೇ ಆಗುತ್ತದೆ. ಅದು ಒಬ್ಬ ಕೊಲೆಗಾರನ ಹೊಣೆಗಾರಿಕೆಯಷ್ಟೇ ಪ್ರಮುಖ ಅವರು, ಜನರಿಗೆ ತನಿಖಾ ಸಂಸ್ಥೆ, ಪೊಲೀಸ್ ಇಲಾಖೆ ಬಗ್ಗೆ ವಿಶ್ವಾಸ ಕಡಿಮೆ ಆಗಬಾರದು. ಇದು ಪೊಲೀಸ್ ಇಲಾಖೆಯ ಗುರುತರವಾದ ಜವಾಬ್ದಾರಿ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು. ಆ ನಿಟ್ಟಿನಲ್ಲಿ ಎಸ್‍ಐಟಿ, ಪೊಲೀಸ್ ಠಾಣೆಗಳ ನಡವಳಿಕೆ ಜನರಲ್ಲಿ ವಿಶ್ವಾಸ ಮೂಡಿಸುವಂತೆ ಇರಬೇಕು ಎಂದು ಆಶಿಸಿದರು.

ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆ
ರೇಣುಕಾಸ್ವಾಮಿ ಕೊಲೆ ಪ್ರಕರಣ: ತಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ಅಧಿಕಾರಿಗಳು ಪ್ರಾಮಾಣಿಕ ತನಿಖೆ ನಡೆಸಬೇಕು- ಬಸವರಾಜ ಬೊಮ್ಮಾಯಿ

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಹೋಗಿದೆ. ಅಮಾಯಕರ ಕೊಲೆಗಳು ನಡೆಯುತ್ತಿವೆ. ಈಗಿನ ಸರಕಾರದಲ್ಲಿ ನಾವು ಏನು ಮಾಡಿದರೂ ದಕ್ಕಿಸಿಕೊಳ್ಳಬಹುದು, ನಮ್ಮ ಪ್ರಭಾವದಿಂದ ನಾವು ಬಚಾವ್ ಆಗಬಹುದು ಎಂಬ ಭಾವನೆಯಿಂದ ಕ್ಷುಲ್ಲಕ ಕಾರಣಕ್ಕೆ ಕೊಲೆಗಳು ನಡೆಯುತ್ತಿವೆ ಎಂದು ಆರೋಪಿಸಿದ ಅವರು ರಾಜ್ಯ ಸರ್ಕಾರ ಕಾನೂನು- ಸುವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸಬೇಕು. ಪ್ರತಿಯೊಬ್ಬರ ಮಾನ- ಪ್ರಾಣಕ್ಕೆ ಬಹಳ ದೊಡ್ಡ ಘನತೆ ಇದೆ. ಅಮಾಯಕರ ಪ್ರಾಣಹಾನಿಗೆ ಕಾರಣ ಆದವರ ವಿರುದ್ಧ ಕಾನೂನಿನಡಿ ನಿಷ್ಪಕ್ಷಪಾತವಾಗಿ ತನಿಖೆ ಮಾಡಬೇಕು. ಇನ್ನು ಮುಂದೆ ಅಮಾಯಕರ ಪ್ರಾಣಹಾನಿ ಆಗದಂತೆ ಗೃಹ ಸಚಿವರು ಮತ್ತು ಪೊಲೀಸ್ ಇಲಾಖೆ ತನ್ನ ಕರ್ತವ್ಯ ನಿರ್ವಹಿಸಲಿ ಎಂದು ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com