![ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತಿತರರು](http://media.assettype.com/kannadaprabha%2F2024-06%2F7580298e-9c88-486e-9dd5-771793ef4f7e%2FPralhad_Joshi.jpg?w=480&auto=format%2Ccompress&fit=max)
ಹುಬ್ಬಳ್ಳಿ: ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಾಭಿಪ್ರಾಯವಿದ್ದು, ಗ್ಯಾರಂಟಿ ಕುರಿತು ಪಕ್ಷದ ನಾಯಕರ ಹೇಳಿಕೆಗಳೇ ಅದಕ್ಕೆ ಸಾಕ್ಷಿಯಾಗಿವೆ ಎಂದು ಕೇಂದ್ರ ಆಹಾರ, ಗ್ರಾಹಕ ವ್ಯವಹಾರಗಳು ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಜೋಶಿ, ಹಲವು ಫಲಾನುಭವಿಗಳಿಗೆ ಗ್ಯಾರಂಟಿಗಳು ತಲುಪಿಲ್ಲ, ಕೇವಲ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ ಎಂದರು.
ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಭಾಗಿ ಕುರಿತು ಪ್ರತಿಕ್ರಿಯಿಸಿದ ಜೋಶಿ, ಈ ಬಗ್ಗೆ ಸಂಪೂರ್ಣ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಅಪರಾಧಿಗಳಿಗೆ ಶಿಕ್ಷೆಯಾಗಬೇಕು, ಕೆಲ ಸಚಿವರು ಹಾಗೂ ಕಾಂಗ್ರೆಸ್ ಶಾಸಕರ ವರ್ತನೆ ನೋಡಿದರೆ ತನಿಖೆ ನಡೆಯುವ ಮುನ್ನವೇ ನಟನನ್ನು ಆರೋಪದಿಂದ ಮುಕ್ತಗೊಳಿಸಲು ಸಂಚು ರೂಪಿಸುತ್ತಿದ್ದಾರೆ ಎಂಬ ಅನುಮಾನ ಮೂಡುತ್ತಿದೆ, ಇದು ಸರಿಯಲ್ಲ ಎಂದರು.
ತಮ್ಮಗೆ ನೀಡಲಾದ ಖಾತೆಗಳ ಕುರಿತು ವಿವರಿಸಿದ ಅವರು, ಪ್ರಧಾನಿಯವರು ನವೀಕರಿಸಬಹುದಾದ ಇಂಧನ ಸಚಿವಾಲಯವನ್ನು ತಮಗೆ ವಹಿಸಿದ್ದಾರೆ. ಇದರಿಂದ ಭವಿಷ್ಯದಲ್ಲಿ ಇಂಧನ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಬಹುದು. ಜೊತೆಗೆ, ಆಹಾರ ಸಚಿವಾಲಯದ ಜವಾಬ್ದಾರಿ ನೀಡಿದ್ದಾರೆ. ಕಳೆದ 4-5 ವರ್ಷಗಳಿಂದ ನಮ್ಮ ಸರ್ಕಾರವು ನಾಗರಿಕರಿಗೆ ಆಹಾರ ಭದ್ರತೆಯನ್ನು ಒದಗಿಸಿದೆ. ಇದು ವಿಶ್ವದಲ್ಲೇ ಶ್ರೇಷ್ಠ ಆಹಾರ ಭದ್ರತಾ ಯೋಜನೆಯಾಗಿದೆ. "ಎಲ್ ನಿನೊ ಪರಿಣಾಮದ ಪರಿಣಾಮವಾಗಿ, ಪ್ರಪಂಚದ ಕೆಲವು ಭಾಗಗಳು ತೀವ್ರ ಬರ ಮತ್ತು ಆಹಾರದ ಕೊರತೆಯನ್ನು ಕಾಣುತ್ತಿವೆ. ಆದರೆ ನಮ್ಮ ದೇಶದಲ್ಲಿ ಇದರ ಪರಿಣಾಮ ಕಡಿಮೆಯಾಗಿದೆ. ಈ ಎಲ್ಲವನ್ನು ಕೂಲಂಕುಷವಾಗಿ ಅಧ್ಯಯನ ಮಾಡಿ ವಿವಿಧ ರಾಜ್ಯಗಳ ಬೇಡಿಕೆಯಂತೆ ಅಕ್ಕಿ ವಿತರಣೆಗೆ ಸರಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದರು.
ಯುಪಿಎ ಆಡಳಿತಾವಧಿಯಲ್ಲಿ ಹುಬ್ಬಳ್ಳಿಯನ್ನು ಸೋಲಾರ್ ಸಿಟಿ ಮಾಡುವ ಪ್ರಸ್ತಾವನೆ ಇತ್ತು. ಈ ಬಗ್ಗೆ ಗಂಭೀರವಾಗಿ ಗಮನ ಹರಿಸಲಾಗುವುದು ಎಂದು ತಿಳಿಸಿದ ಸಚಿವರು, ಭಾರತ ಸೌರಶಕ್ತಿ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. 2014 ರಲ್ಲಿ ಉತ್ಪಾದನೆ ಕೇವಲ 74 ಗಿಗಾವ್ಯಾಟ್ ಆಗಿತ್ತು. ಈಗ ಅದು 293 ಗಿಗಾವ್ಯಾಟ್‌ಗೆ ಏರಿಕೆಯಾಗಿದೆ. ಕೇಂದ್ರವು ಈ ಕ್ಷೇತ್ರಕ್ಕೆ ರಿಯಾಯಿತಿ ನೀಡುತ್ತಿದೆ. ಈ ಯೋಜನೆಗಳನ್ನು ಆದ್ಯತೆಯ ಆಧಾರದ ಮೇಲೆ ಕರ್ನಾಟಕಕ್ಕೆ ನೀಡಲಾಗುವುದು ಎಂದು ಅವರು ಹೇಳಿದರು.
Advertisement