
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿದಂತೆ 13ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಅಲ್ಲದೆ ಈ ವಿಚಾರ ರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಚರ್ಚೆಗೂ ಗ್ರಾಸವಾಗಿದೆ.
ಈ ಮಧ್ಯೆ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸುದೀಪ್ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಬಾಳಿ ಬದುಕಬೇಕಿದ್ದ ರೇಣುಕಾಸ್ವಾಮಿ ಕೊಲೆಯಾಗಿದ್ದಾನೆ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ. ಸತ್ಯ ಹೊರತರಲು ಮಾಧ್ಯಮ ಮತ್ತು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ತನಿಖೆ ನಿಸ್ಪಕ್ಷಪಾತವಾಗಿ ನಡೆಯಲಿ. ಕಾನೂನಿನ ಮೇಲೆ ಜನರಿಗೆ ನಂಬಿಕೆ ಬರುವಂತೆ ಆಗಲಿ ಎಂದು ಹೇಳಿದರು.
ಚಿತ್ರರಂಗದಿಂದ ದರ್ಶನ್ ಬ್ಯಾನ್ ಕುರಿತಂತೆ ಪ್ರತಿಕ್ರಿಯಿಸಿದ ಸುದೀಪ್, ಚಿತ್ರರಂಗದ ಮೇಲೆ ಕಪ್ಪು ಚುಕ್ಕೆ ಬರುವುದು ನಮಗೂ ಇಷ್ಟವಿಲ್ಲ. ಹಿರಿಯರು ಕಟ್ಟಿ ಬೆಳಿಸಿದ ಚಿತ್ರರಂಗ ಯಾರೋ ಒಬ್ಬರಿಂದ ಹಾಳಾಗಬಾರದು. ಆರೋಪದಿಂದ ಮುಕ್ತವಾಗಿ ಹೊರಬಂದ ಮೇಲೆ ಬ್ಯಾನ್ ಮಾಡಿದರೆ ಪ್ರಯೋಜನವೇನು? ಬ್ಯಾನ್ ಮಾಡುವುದಕ್ಕಿಂತ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು, ನಾನು ಯಾರ ಪರವೂ ಇಲ್ಲ. ವಿರುದ್ಧವೂ ಇಲ್ಲ. ನಾನು ನ್ಯಾಯದ ಪರ ಇದ್ದೇನೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ರೇಣುಕಾಸ್ವಾಮಿ ಕುಟುಂಬದ ಕುರಿತಂತೆ ಎಲ್ಲರ ಹೃದಯ ಮಿಡಿಯುತ್ತಿದೆ. ವಾತಾವರಣ ಏನೋ ಸರಿ ಕಾಣಿಸುತ್ತಿಲ್ಲ. ಚಿತ್ರರಂಗಕ್ಕೆ ನ್ಯಾಯ ಸಿಗಬೇಕು. ಎಲ್ಲ ಕಾರಣಕ್ಕೂ ಚಿತ್ರರಂಗದ ಮೇಲೆ ಆರೋಪ ಬರುತ್ತದೆ. ಚಿತ್ರರಂಗಕ್ಕೆ ಒಂದು ಕ್ಲೀನ್ಚಿಟ್ ಬೇಕಾಗಿದೆ. ಚಿತ್ರರಂಗ ಎಂದರೆ ಒಬ್ಬರು-ಇಬ್ಬರು ಅಲ್ಲ. ನೂರಾರು ಕಲಾವಿದರಿದ್ದಾರೆ. ಅಪರಾಧಿಗೆ ಶಿಕ್ಷೆಯಾದರೆ ಚಿತ್ರರಂಗ ಖುಷಿಪಡುತ್ತದೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
Advertisement