ಇಂಧನ ಬೆಲೆ ಏರಿಕೆ ವಿರುದ್ಧ ವಿಪಕ್ಷಗಳಿಂದ ಹಾಗೂ ಸಾರ್ವಜನಿಕವಾಗಿ ತೀವ್ರ ಟೀಕೆ ವ್ಯಕ್ತವಾಗುತ್ತಿದ್ದಂತೆ ರಾಜ್ಯ ಸರ್ಕಾರದ ನಿರ್ಧಾರವನ್ನು ಸಿಎಂ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ದೇಶದ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ವ್ಯಾಟ್ ಹೆಚ್ಚಳ ಕಡಿಮೆ ಇದೆ ಎಂದರು. ಇನ್ನು ವ್ಯಾಟ್ ಹೆಚ್ಚಳದಿಂದ ಸಂಗ್ರಹವಾಗುವ ಹಣವನ್ನು ಮೂಲಭೂತ ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಬಳಸುತ್ತೇವೆ ಎಂಬ ಗ್ಯಾರಂಟಿಯನ್ನು ನಾನು ನೀಡುತ್ತೇನೆ. ನಾವು ಸರ್ವರ ಹಿತಕಾಯಲು ಮತ್ತು ಜವಾಬ್ದಾರಿಯುತ ಸರ್ಕಾರವಾಗಿ ಮುನ್ನಡೆಯಲು ಬದ್ಧರಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ, ಈ ಹಿಂದಿನ ರಾಜ್ಯ ಬಿಜೆಪಿ ಸರ್ಕಾರ ಸತತವಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಇಳಿಸಿದರೆ, ಕೇಂದ್ರ ಸರ್ಕಾರ ಮಾತ್ರ ಏಕಕಾಲದಲ್ಲಿ ತೆರಿಗೆಗಳನ್ನು ಹೆಚ್ಚಿಸಿತ್ತು. ಇದರಿಂದ ಕರ್ನಾಟಕಕ್ಕೆ ಆದಾಯ ಕಡಿಮೆಯಾಗಿದ್ದರೆ ಕೇಂದ್ರ ಸರ್ಕಾರದ ಆದಾಯ ದುಟ್ಟಪಟ್ಟಾಗಿತ್ತು ಎಂದು ಹೇಳಿದರು. ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿರುವ ಕಾಂಗ್ರೆಸ್ ಸರ್ಕಾರದ ನಡೆಯನ್ನು ವಿರೋಧಿಸಿ ಜೂನ್ 17 ರಂದು ಕರ್ನಾಟಕದಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸಲಿದೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪವಿತ್ರಾ ಗೌಡ ಮನೆಯಲ್ಲಿ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ಬೆಂಗಳೂರಿನ ಆರ್.ಆರ್. ನಗರದಲ್ಲಿರುವ ಪವಿತ್ರಾ ಗೌಡ ನಿವಾಸಕ್ಕೆ ಆರೋಪಿಗಳಾದ ಪವಿತ್ರಾ ಗೌಡ ಹಾಗೂ ಪವನ್‌ನನ್ನು ಕರೆತರಲಾಗಿತ್ತು. ಈ ವೇಳೆ ಪವಿತ್ರಾ ಬಳಸುತ್ತಿದ್ದ ಚಪ್ಪಲಿ, ಶೂ, ಬಟ್ಟೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಮಧ್ಯೆ ರೇಣುಕಾಸ್ವಾಮಿ ಕೊಲೆ ಪ್ರಕಣದಲ್ಲಿ ಮತ್ತೊಬ್ಬ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾಗೌಡರ ಮ್ಯಾನೇಜರ್ ದೇವರಾಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ರೇಣುಕಾಸ್ವಾಮಿ ಕೊಲೆಯಾದ ಶೆಡ್‌ಗೆ ಪವಿತ್ರಾ ಜತೆಗೆ ದೇವರಾಜ್ ಕೂಡ ಹೋಗಿದ್ದ ಎನ್ನಲಾಗಿದ್ದು, ಇದೇ ಕಾರಣಕ್ಕೆ ದೇವರಾಜ್‌ನನ್ನು ಪೊಲೀಸರು ವಶ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ.
ಭೀಮಾ ತೀರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಸಿದೆ. ವಿಜಯಪುರದ ಚಡಚಣ ಪಟ್ಟಣದ ನೀವರಗಿ ರಸ್ತೆಯಲ್ಲಿ ರೌಡಿಶೀಟರ್ ಅಶೋಕ ಮಲ್ಲಪ್ಪ ಗಂಟಗಲ್ಲಿ ಎಂಬಾತನನ್ನು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಅಶೋಕ್ ಮಲ್ಲಪ್ಪ ಮನೆಯಿಂದ ಚಡಚಣ ಪಟ್ಟಣಕ್ಕೆ ಹೋಗುತ್ತಿದ್ದಾಗ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಗುಂಡಿನ ದಾಳಿಯಲ್ಲಿ ಅಶೋಕ‌್ ಬೆನ್ನಿಗೆ ಮೂರಕ್ಕೂ ಅಧಿಕ ಗುಂಡಿಗಳು ತಾಗಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕೊಲೆ ಹಾಗೂ ಇತರೆ ಪ್ರಕರಣಗಳಲ್ಲಿ ಅಪರಾಧಿಯಾಗಿದ್ದ ಅಶೋಕ್ ಇತ್ತೀಚೆಗೆ ಪೆರೋಲ್ ಪಡೆದು ಜೈಲಿನಿಂದ ಹೊರಬಂದಿದ್ದನು. ಇನ್ನು ಕೊಲೆಗೀಡಾದ ಅಶೋಕ ಪತ್ನಿ ಚಡಚಣ ಪಟ್ಟಣದ ವಾರ್ಡ್ ನಂಬರ್ 2ರ ಬಿಜೆಪಿ ಸದಸ್ಯೆ ಎಂದು ತಿಳಿದುಬಂದಿದೆ.
ವಂಚನೆ, ಜೀವ ಬೆದರಿಕೆ ಆರೋಪ ಸಂಬಂಧಿತ ಪ್ರಕರಣದಲ್ಲಿ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಇಲಾಖೆಯ ರಾಜ್ಯ ಸಚಿವ ವಿ ಸೋಮಣ್ಣ ಪುತ್ರ ಡಾ. ಬಿ ಎಸ್ ಅರುಣ್ ಸೇರಿದಂತೆ ಮೂವರಿಗೆ ಬೆಂಗಳೂರಿನ ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಬೆಂಗಳೂರಿನ ಸಂಜಯನಗರ ಠಾಣೆಯಲ್ಲಿ ತೃಪ್ತಿ ಹೆಗ್ಡೆ ದಾಖಲಿಸಿರುವ ಕ್ರಿಮಿನಲ್ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರುಣ್, ಜೀವನ್ ಕುಮಾರ್ ಹಾಗೂ ಪ್ರಮೋದ್ ರಾವ್ ಸಲ್ಲಿಸಿದ್ದ ಅರ್ಜಿಯನ್ನು 45ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮೊಹಮ್ಮದ್ ಮೊಯಿನುದ್ದೀನ್ ಪುರಸ್ಕರಿಸಿದ್ದಾರೆ. ಮುಂದಿನ ಆದೇಶದವರೆಗೆ ಅರ್ಜಿದಾರರನ್ನು ಬಂಧಿಸದಂತೆ ಆದೇಶಿರುವ ಕೋರ್ಟ್ ವಿಚಾರಣೆಯನ್ನು ಜೂನ್ 22ಕ್ಕೆ ಮುಂದೂಡಿದೆ.
ಚಿಕ್ಕಮಗಳೂರಿನ ಕಡೂರು ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯುತ್ ಶಾಕ್‌ನಿಂದ 7ನೇ ತರಗತಿ ವಿದ್ಯಾರ್ಥಿ ಆಕಾಶ್ ಎಂಬಾತ ಇಂದು ಮೃತಪಟ್ಟಿದ್ದು ಈ ಪ್ರಕರಣ ಸಂಬಂಧ 8 ಮಂದಿಯನ್ನು ಅಮಾನತು ಮಾಡಲಾಗಿದೆ. ಸಿಬ್ಬಂದಿ ಕರ್ತವ್ಯ ಲೋಪದಿಂದ ಬಾಲಕ ಮೃತಪಟ್ಟಿದ್ದಾಗಿ ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ ಪ್ರಾಂಶುಪಾಲ ಧನರಾಜು, ಗೀತಾಂಜಲಿ, ಶಿಕ್ಷಕರಾದ ಗಾಯತ್ರಿ, ಶಿವರಾಜ ನಾಯ್ಕ್, ಕಾವ್ಯ, ಸುರೇಶ್ ಬೀಳಗಿ ಹಾಗೂ ವಿಶಾಲಕ್ಷಿ, ಬಿಂದು ಅವರನ್ನು ಅಮಾನತು ಮಾಡಿ ಕ್ರೈಸ್ ಕಾರ್ಯ ನಿರ್ವಾಹಕ ನಿರ್ದೇಶಕ ಪ್ರವೀಣ್ ಬಿ ಬಾಗೇವಾಡಿ ಆದೇಶ ಹೊರಡಿಸಿದ್ದಾರೆ.
Advertisement