ರೇಣುಕಾಸ್ವಾಮಿ ಕೊಲೆ: ಚಿಕ್ಕಣ್ಣಗೆ ಸಂಕಷ್ಟ; CID ಮುಂದೆ BSY ಹಾಜರು; ಸದ್ಯಕ್ಕೆ ಸರ್ಕಾರಿ ಬಸ್ ದರ ಹೆಚ್ಚಳ ಇಲ್ಲ! ಇವು ಇಂದಿನ ಪ್ರಮುಖ ಸುದ್ದಿಗಳು 17-06-24

ರೇಣುಕಾಸ್ವಾಮಿ ಕೊಲೆ: ಚಿಕ್ಕಣ್ಣಗೆ ಸಂಕಷ್ಟ; CID ಮುಂದೆ BSY ಹಾಜರು; ಸದ್ಯಕ್ಕೆ ಸರ್ಕಾರಿ ಬಸ್ ದರ ಹೆಚ್ಚಳ ಇಲ್ಲ! ಇವು ಇಂದಿನ ಪ್ರಮುಖ ಸುದ್ದಿಗಳು 17-06-24

1. ಬಿಜೆಪಿಗೆ ತಾಕತ್ತಿದ್ದರೆ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸಲಿ: ಸಿದ್ದರಾಮಯ್ಯ

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ನಡೆಯನ್ನು ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿರುವ ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಿಂದ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಹಣ, ಜಿಎಸ್‌ಟಿ ಹಂಚಿಕೆ ಮತ್ತು ರಾಜ್ಯ ಯೋಜನೆಗಳಿಗೆ ಹಣ ಬಿಡುಗಡೆಗೆ ಸಂಬಂಧಿಸಿದ ವಿಷಯಗಳಲ್ಲಿ ರಾಜ್ಯ ಅನ್ಯಾಯವನ್ನು ಎದುರಿಸುತ್ತಿದೆ. ಹೀಗಾಗಿ ರಾಜ್ಯ ಬಿಜೆಪಿಯವರು ಕರ್ನಾಟಕಕ್ಕೆ ಆಗಿರುವ ಅನ್ಯಾಯದ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿ ಎಂದು ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. ಇದೇ ವೇಳೆ, ಇಂಧನ ದರ ಏರಿಕೆ ಬೆನ್ನಲ್ಲೇ ಸರ್ಕಾರಿ ಬಸ್ ಟಿಕೆಟ್ ದರ ಹೆಚ್ಚಳ ಮಾಡಲಾಗುತ್ತದೆ ಎಂದ ಹೇಳಲಾಗುತ್ತಿತ್ತು. ಆದರೆ ಇದೀಗ ರಾಜ್ಯದಲ್ಲಿ ಸದ್ಯಕ್ಕೆ ಸರ್ಕಾರಿ ಬಸ್ ಟಿಕೆಟ್ ದರ ಹೆಚ್ಚಳ ಮಾಡಲ್ಲ. ಇಲಾಖೆಯೊಂದಿಗೆ ಚರ್ಚೆ ಮಾಡಬೇಕು‌ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯ ಸರ್ಕಾರ ಶನಿವಾರದಂದು ವ್ಯಾಟ್ ಹೆಚ್ಚಿಸಿದ ನಂತರ ಪೆಟ್ರೋಲ್ ಬೆಲೆ ಲೀಟರ್‌ಗೆ 3 ಮತ್ತು ಡೀಸೆಲ್ ಲೀಟರ್‌ಗೆ 3.5 ರೂ.ಗಳಷ್ಟು ಏರಿಕೆಯಾಗಿದೆ.

2. ಸದ್ಯಕ್ಕೆ ಸರ್ಕಾರಿ ಬಸ್ ದರ ಹೆಚ್ಚಳ ಇಲ್ಲ: ಸಿಎಂ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿರುವ ನಡೆಯನ್ನು ವಿರೋಧಿಸಿ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸಿದೆ. ಇದೇ ವೇಳೆ, ಶಿವಮೊಗ್ಗದ ಗೋಪಿ ಸರ್ಕಲ್ನಬಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ ಭಾನುಪ್ರಕಾಶ್ ಅವರು ಹೃದಯಾಘಾತದಿಂದಾಗಿ ಮೃತಪಟ್ಟಿದ್ದಾರೆ. ಪ್ರತಿಭಟನೆ ಮುಗಿಸಿ ಹಿಂತಿರುಗುತ್ತಿದ್ದಾಗ ಭಾನುಪ್ರಕಾಶ್ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದರು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದು, ವೈದ್ಯರು ಮೃತಪಟ್ಟಿರುವುದನ್ನು ಘೋಷಿಸಿದರು. ಭಾನುಪ್ರಕಾಶ್ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ವಿಪಕ್ಷ ನಾಯಕ ಆರ್ ಅಶೋಕ್ ತೀವ್ರ ಸಂತಾಪ ಸೂಚಿಸಿದ್ದಾರೆ.

3. CID ಮುಂದೆ BSY ಹಾಜರು

ಪೋಕ್ಸೋ ಪ್ರಕರಣ ಸಂಬಂಧ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಸಿಐಡಿ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿದ್ದಾರೆ. ವಿಚಾರಣೆಗೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಸಿಐಡಿ ವಿಚಾರಣೆಗೆ ಹೋಗುತ್ತಿದ್ದೇನೆ ಎಂದರು. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡುವ ರಾಜ್ಯ ಸರ್ಕಾರದ ನಿರ್ಧಾರ ಅಪರಾಧವಾಗಿದೆ. ರಾಜ್ಯ ಸರ್ಕಾರ ಕೂಡಲೇ ತನ್ನ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಯಡಿಯೂರಪ್ಪ 17 ವರ್ಷದ ಅಪ್ತಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ. ಮುಂದಿನ ವಿಚಾರಣೆಯವರೆಗೂ ಅವರನ್ನು ಬಂಧಿಸಬಾರದು ಎಂದು ಕಳೆದ ಶುಕ್ರವಾರ ಹೈಕೋರ್ಟ್ ಆದೇಶಿಸಿದ್ದರಿಂದ ಬಂಧನ ಭೀತಿಯಿಂದ ಯಡಿಯೂರಪ್ಪ ತಪ್ಪಿಸಿಕೊಂಡಿದ್ದರು.

4. ರೇಣುಕಾಸ್ವಾಮಿ ಕೊಲೆ: ಚಿಕ್ಕಣ್ಣಗೆ ಸಂಕಷ್ಟ

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಪಾರ್ಟಿ ಮಾಡಿದ್ದರು ಎಂಬ ವಿಚಾರ ತನಿಖೆಯಲ್ಲಿ ತಿಳಿದುಬಂದ ಹಿನ್ನೆಲೆಯಲ್ಲಿ ಪೊಲೀಸರು ಇಂದು ದರ್ಶನ್ ಸೇರಿದಂತೆ ಕೆಲ ಆರೋಪಿಗಳನ್ನು ಸ್ಟೋನಿಬ್ರೂಕ್ ಪಬ್ ಗೆ ಕರೆತಂದು ಸ್ಥಳ ಮಹಜರು ನಡೆಸಿದರು. ಅಂದು ದರ್ಶನ್ ಜೊತೆ ಹಾಸ್ಯ ನಟ ಚಿಕ್ಕಣ್ಣ ಕೂಡ ಪಾರ್ಟಿಯಲ್ಲಿ ಭಾಗವಹಿಸಿದ್ದ ಕಾರಣಕ್ಕೆ ಇಂದು ಅವರಿಗೆ ನೋಟಿಸ್ ನೀಡಿ ಸ್ಟೋನಿ ಬ್ರೂಕ್ ಗೆ ಕರೆದೊಯ್ದು ಪರಿಶೀಲನೆ ನಡೆಸಿದರು. ಈ ವೇಳೆ ಚಿಕ್ಕಣ್ಣಗೆ ಪೊಲೀಸರು ಹಲವು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡಿದ್ದಾರೆ. ಹತ್ಯೆ ವಿಷಯ ನಿಮಗೆ ಗೊತ್ತಿತ್ತ. ಪಾರ್ಟಿಯಲ್ಲಿ ಏನೆಲ್ಲಾ ನಡೆಯಿತು. ಪಾರ್ಟಿ ಆದ ಮೇಲೆ ನೀವು ಎಲ್ಲಿಗೆ ಹೋದಿರಿ ಎಂದು ಪೊಲೀಸರು ಪ್ರಶ್ನಿಸಿದ್ದಾರೆ. ಮತ್ತೊಂದೆಡೆ ರೇಣುಕಾಸ್ವಾಮಿ ಹತ್ಯೆ ಬಳಿಕ ನಾಪತ್ತೆಯಾಗಿದ್ದ ಪ್ರಕರಣದ 9ನೇ ಆರೋಪಿ ರಾಜು ಅಲಿಯಾಸ್ ಧನರಾಜ್ ನನ್ನು ಬಂಧಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ. ಧನರಾಜ್ ಬಂಧನದ ಬಳಿಕ ರೇಣುಕಾಸ್ವಾಮಿ ಮೇಲೆ ದೈಹಿಕ ಹಲ್ಲೆ ಮಾತ್ರವಲ್ಲದೆ, ಆತನಿಗೆ ವಿದ್ಯುತ್‌ ಶಾಕ್‌ ಕೂಡ ನೀಡಿದ್ದರು ಎಂಬ ಆಘಾತಕಾರಿ ಸಂಗತಿ ಬಯಲಾಗಿದೆ. ಇದರೊಂದಿಗೆ ಪ್ರಕರಣ ಸಂಬಂಧ ಎಲ್ಲಾ 17 ಆರೋಪಿಗಳನ್ನು ಪೊಲೀಸರು ಬಂಧಿಸಿದಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com