ಕೊಡಗು: ತಾಟಳ್ಳಿ ಬುಡಕಟ್ಟು ಸಮುದಾಯದ 70 ಕುಟುಂಬಗಳಿಗೆ ಮರೀಚಿಕೆಯಾದ ಮೂಲಭೂತ ಸೌಕರ್ಯ!
ಮಡಿಕೇರಿ: ಅರಣ್ಯ ಹಕ್ಕು ಕಾಯ್ದೆಯಡಿ ಬುಡಕಟ್ಟು ಜನಾಂಗದವರಿಗೆ ಸರ್ಕಾರ ಭೂಮಿ ನೀಡಿದರೂ ಈ ಸಮುದಾಯದವರಿಗೆ ಮೂಲ ಸೌಕರ್ಯ ಕಲ್ಪಿಸುವುದು ಸವಾಲಿನ ಕೆಲಸವಾಗಿ ಉಳಿದಿದೆ. ಕೊಡಗಿನ ಸಿದ್ದಾಪುರ ಸಮೀಪದ ಮಾಲ್ದಾರೆಯಲ್ಲಿರುವ ತಾಟಳ್ಳಿ ಆದಿವಾಸಿಗಳ ಬಡಾವಣೆಯೇ ಇದಕ್ಕೆ ಸಾಕ್ಷಿಯಾಗಿದೆ.
ಈ ಬಡಾವಣೆಯಲ್ಲಿ ವಾಸಿಸುವ ಬುಡಕಟ್ಟು ಜನರಿಗೆ ಇನ್ನೂ ವಿದ್ಯುತ್, ಶೌಚಾಲಯ, ನೀರು ಸರಬರಾಜು ಮತ್ತು ಮನೆಗಳು ಸಿಕ್ಕಿಲ್ಲ. ಯಾವುದೇ ನೆರವು ಬಾರದೆ, ಮೂಲ ಸೌಕರ್ಯಕ್ಕಾಗಿ ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಪ್ರತಿಭಟನೆ ನಡೆಸುವುದಾಗಿ ಈ ಸಮುದಾಯದವರು ಬೆದರಿಕೆ ಹಾಕಿದ್ದಾರೆ.
ಮಕ್ಕಳು ಮತ್ತು ವೃದ್ಧರು ಸೇರಿದಂತೆ 70 ಕ್ಕೂ ಹೆಚ್ಚು ಕುಟುಂಬಗಳು ಈ ವಸಾಹತುಗಳಲ್ಲಿ ವಾಸಿಸುತ್ತಿದ್ದಾರೆ. ಮಾಲ್ದಾರೆ ಗ್ರಾಮ ಪಂಚಾಯತ್ ನಿಂದ ತಾತ್ಕಾಲಿಕವಾಗಿ ನೀರಿನ ಸಂಪರ್ಕ ಕಲ್ಪಿಸಿದ್ದರೂ ಬಡಾವಣೆಯ ನಿವಾಸಿಗಳು ನೀರು ತರಲು ಬಹುದೂರ ಕ್ರಮಿಸಬೇಕಾಗಿದೆ. ಪೈಪ್‌ಲೈನ್‌ನಲ್ಲಿ ನೀರು ಸರಬರಾಜು ಮಾಡಲು ವಿದ್ಯುತ್ ಇಲ್ಲದಿರುವುದು ಇದಕ್ಕೆ ಕಾರಣವಾಗಿದೆ.
ಏಳು ದಶಕಗಳಿಂದ ಅರಣ್ಯದ ಅಂಚಿನಲ್ಲಿ ವಾಸಿಸುತ್ತಿರುವ ಇಲ್ಲಿನ ನಿವಾಸಿಗಳಿಗೆ ಅರಣ್ಯ ಹಕ್ಕು ಕಾಯ್ದೆಯಡಿ ನೀಡಿದ ಜಮೀನಿಗೆ ಇತ್ತೀಚೆಗೆ ಆರ್‌ಟಿಸಿ ಮಂಜೂರು ಮಾಡಲಾಗಿತ್ತು. ಕೆಲವು ಕುಟುಂಬಗಳಿಗೆ ಮಾತ್ರ ಕೆಲವು ಸೌಲಭ್ಯಗಳನ್ನು ನೀಡಲಾಗಿದೆ. ಕಾಯಿದೆಯಡಿ ಆರ್‌ಟಿಸಿ ಮಂಜೂರು ಮಾಡಿದ್ದರೂ ಶಾಶ್ವತ ಮನೆ ಸೇರಿದಂತೆ ಯಾವುದೇ ಸೌಲಭ್ಯ ನೀಡಿಲ್ಲ' ಎಂದು ಬಡಾವಣೆಯಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನಾಂಗದ ಮುಖಂಡ ಶಂಕರ್ ಆರೋಪಿಸಿದರು.
ಬಹುತೇಕರು ಗುಡಿಸಲುಗಳಲ್ಲಿ ವಾಸ ಮಾಡುತ್ತಿದ್ದಾರೆ. ವಸಾಹತು ಪ್ರದೇಶಕ್ಕೆ ಮಾರ್ಗಗಳಿಲ್ಲ. ಗಂಗಾ ಕಲ್ಯಾಣ ಯೋಜನೆಯಡಿ 40 ಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದರು, ಆದರೆ ಕೆಲವರು ಮಾತ್ರ ಆಯ್ಕೆಯಾಗಿದ್ದಾರೆ.
‘ಗಿರಿಜನರನ್ನು ಮುಖ್ಯವಾಹಿನಿಗೆ ತರಬೇಕು’: ರಾಜಕೀಯ ಭಿನ್ನಾಭಿಪ್ರಾಯಗಳಿಂದಾಗಿ ಸ್ಥಳೀಯ ಅಧಿಕಾರಿಗಳು ಬುಡಕಟ್ಟು ಜನರ ಅಗತ್ಯಗಳ ಬಗ್ಗೆ ಅಸಡ್ಡೆ ಹೊಂದಿದ್ದಾರೆ ಎಂದು ಸಮುದಾಯದವರು ಆರೋಪಿಸುತ್ತಿದ್ದಾರೆ. ಅವರು ಇತ್ತೀಚೆಗೆ ಸ್ಥಳೀಯ ಶಾಸಕರನ್ನು ಸಂಪರ್ಕಿಸಿದಾಗ, ಅವರು ಯೋಜನೆಯನ್ನು ಕಾರ್ಯಗತಗೊಳಿಸಲು ಅಧಿಕಾರಿಗಳಿಗೆ ಆದೇಶಿಸಿದರು.
ಆದರೆ ವಿರೋಧ ಪಕ್ಷದ ನಾಯಕರ ಬೆಂಬಲದೊಂದಿಗೆ ಕೆಲವು ಪಂಚಾಯತ್ ಅಧಿಕಾರಿಗಳು ಯೋಜನೆಯು ಫಲಾನುಭವಿಗಳನ್ನು ತಲುಪದಂತೆ ತಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಇದೇ ವೇಳೆ ಬಡಾವಣೆಯ ಅಭಿವೃದ್ಧಿಯ ಅಗತ್ಯವನ್ನು ಒತ್ತಿ ಹೇಳಿದ ಜೇನು ಕುರುಬ ಮುಖಂಡ ಜೆ.ಕೆ.ರಾಮು, ಬುಡಕಟ್ಟು ಜನರನ್ನು ಮುಖ್ಯವಾಹಿನಿಗೆ ತರಬೇಕು ಎಂದು ಆಗ್ರಹಿಸಿದರು. ಜಿಲ್ಲೆಯ ಬಹುತೇಕ ಬುಡಕಟ್ಟು ಜನರು ದಯನೀಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ.
ತಪ್ಪಿತಸ್ಥ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಆದಷ್ಟು ಬೇಗ ಬಡಾವಣೆ ಅಭಿವೃದ್ಧಿಗೆ ಕ್ರಮಕೈಗೊಳ್ಳಬೇಕು ಎಂದರು. ಆದಷ್ಟು ಬೇಗ ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಗಿರಿಜನ ಮುಖಂಡರಾದ ಕೃಷ್ಣ, ಶಿವಣ್ಣ ಮತ್ತು ಪಾರ್ವತಿ ಹೇಳುತ್ತಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ