ರೇಣುಕಾಸ್ವಾಮಿ ಹತ್ಯೆ ಪ್ರಕರಣದ ವಿಶೇಷ ಅಭಿಯೋಜಕರನ್ನ (SPP) ಬದಲಾವಣೆ ಮಾಡುವಂತೆ ಸಿಎಂ ಸಿದ್ದರಾಮಯ್ಯಗೆ ಒತ್ತಡ ಎದುರಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ಎಸ್‌ಪಿಪಿ ಬದಲಾವಣೆ ಮಾಡುವೇದೆ ಸರ್ಕಾರದ ಮೇಲೆ ಯಾವುದೇ ಒತ್ತಡಗಳಿಲ್ಲ ಎಂದು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ನೇಮಿಸಿರುವ ಎಸ್‌ಪಿಪಿ ಪ್ರಸನ್ನಕುಮಾರ್ ಅವರನ್ನು ಬದಲಿಸುವಂತೆ ಯಾವುದೇ ಒತ್ತಡಗಳೂ ಬರುತ್ತಿಲ್ಲ. ಯಾವುದೇ ಸಚಿವರು, ಶಾಸಕರೂ ಒತ್ತಡ ಹಾಕಿಲ್ಲ, ಯಾವುದೇ ಒತ್ತಡಕ್ಕೂ ನಾವು ಮಣಿಯುವುದೂ ಇಲ್ಲ. ಕಾನೂನು ರೀತಿಯಲ್ಲಿಯೇ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆಂದು ಸ್ಪಷ್ಟಪಡಿಸಿದರು.
ಇನ್ನು ಇದೇ ಪ್ರಕರಣದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಇಂದು ಎಪಿ ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದರು. ಹೇಳಿಕೆ ದಾಖಲು ಮಾಡುವ ಸಲುವಾಗಿ ಪೊಲೀಸರು ವಿಜಯಲಕ್ಷ್ಮಿಗೆ ಪೊಲೀಸ್ ಅಧಿಕಾರಿಗಳು ನೊಟೀಸ್ ನೀಡಿದ್ದರು. ಠಾಣೆಗೆ ಹಾಜರಾದ ವಿಜಯಲಕ್ಷ್ಮಿ ಮಾರು ಐದೂವರೆ ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದಾರೆ ಎಂದು ತಿಳಿದುಬಂದಿದೆ.
ಬಿಗ್ ಬಾಸ್ ಖ್ಯಾತಿಯ, ನಟ ಪ್ರಥಮ್ ಅವರಿಗೆ ಜೀವ ಬೆದರಿಕೆ ಕರೆಗಳು ಬಂದಿದ್ದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೆಲವು ಅಂಧಾಭಿಮಾನಿಗಳು ತಮಗೆ ನಿರಂತರ ಕರೆಗಳು ಮಾಡಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಪ್ರಥಮ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬರೆದಿದ್ದಾರೆ. ಅಂಧಾಭಿಮಾನಿಗಳೇ ನಿಮ್ಮ ತಂದೆ ತಾಯಿಗಳಿಗೆ ಮೀಸಲಿಡಿ; ಯಾರಿಗೋಸ್ಕರವೋ ಹಾಳುಮಾಡಿಕೊಳ್ಳಬೇಡಿ ಕನ್ನಡಕ್ಕಾಗಿ, ಕಾವೇರಿಗಾಗಿ,ಸಂಸ್ಕೃತಿ ಉಳಿಸೋಕೆ ಬೇಕಾದ್ರೆ ಜೈಲಿಗೆ ಹೋಗಿ ಯಾರಿಗೋಸ್ಕರವೋ ಜೀವನ ಹಾಳುಮಾಡಿಕೊಳ್ಳಬೇಡಿ ಎಂದು ಪ್ರಥಮ್ ಹೇಳಿದ್ದಾರೆ. ಪ್ರಥಮ್ ಇತ್ತೀಚೆಗೆ ರೇಣುಕಾಸ್ವಾಮಿ ಪ್ರಕರಣ ಸಂಬಂಧ ಮಾತನಾಡಿದ್ದರು. ಇದು ದರ್ಶನ್ ಅವರ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿತ್ತು.
ಪೆಟ್ರೋಲ್, ಡೀಸೆಲ್ ದರ ಏರಿಕೆಯಾದ ಬೆನ್ನಲ್ಲೇ ಬೆಂಗಳೂರಿನಲ್ಲಿ ನೀರಿನ ದರ ಹೆಚ್ಚಳದ ಸುಳಿವನ್ನು ಡಿಸಿಎಂ ಡಿಕೆ ಶಿವಕುಮಾರ್ ನೀಡಿದ್ದಾರೆ. ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ದರ ಕಳೆದ 14 ವರ್ಷದಿಂದ ಏರಿಕೆಯಾಗಿಲ್ಲ. ನಗರದ ಪರಿಸ್ಥಿತಿಯಲ್ಲಿ ನೀರಿನ ದರ ಹೆಚ್ಚಳ ಅನಿವಾರ್ಯವಾಗಿದೆ. ಈ ಪ್ರಸ್ತಾಪವನ್ನು ಸಾರ್ವಜನಿಕರ ಮುಂದಿಟ್ಟು ಅವರ ಅಭಿಪ್ರಾಯ ಪಡೆಯುತ್ತೇವೆ ಎಂದು ಡಿಸಿಎಂ ಹೇಳಿದ್ದಾರೆ. ಬೆಂಗಳೂರು ಜಲಮಂಡಳಿ (BWSSB) ದರ ಪರಿಷ್ಕರಣೆ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿದೆ. ಜಲ ಮಂಡಳಿಗೆ ಹಣ ಇಲ್ಲದೆ ವಿದ್ಯುತ್ ಬಿಲ್ ಕಟ್ಟಲು ಆಗುತ್ತಿಲ್ಲ, ಸಿಬ್ಬಂದಿಗೆ ಸಂಬಳ ಕೊಡುವುದಕ್ಕೂ ಕಷ್ಟವಾಗಿದೆ. ಪ್ರತಿ ವರ್ಷ ನಷ್ಟ ಆಗುತ್ತಲೇ ಇದೆ. ಅಪಾರ ಜನಸಂಖ್ಯೆ, ಕಾರ್ಖಾನೆಗಳು, ಕಚೇರಿಗಳು ಸಾಕಷ್ಟು ಇರುವ ಬೆಂಗಳೂರಿಗೆ ಕುಡಿಯುವ ನೀರು ಬೇಕು. ನೀರಿನ ದರ ಹೆಚ್ಚು ಮಾಡಬೇಕೆ ಬೇಡವೇ ಎಂದು ಸಾರ್ವಜನಿಕರೇ ಹೇಳಲಿ ಎಂದರು.
ಮಂಗಳೂರು ಕುಕ್ಕರ್ ಸ್ಫೋಟ, ಬೆಂಗಳೂರು ರಾಮೇಶ್ವರ ಕೆಫೆ ಸ್ಫೋಟ ಮತ್ತು ಶಿವಮೊಗ್ಗ ಮಸೀದಿ ಸ್ಫೋಟ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಶಂಕಿತ ಆರೋಪಿಗಳಿಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬನವಾಸಿಯ ಕೊಪ್ಪ ಗ್ರಾಮದಲ್ಲಿ ಶಂಕಿತ ಉಗ್ರನೊಬ್ಬನನ್ನು NIA ಬಂಧಿಸಿದೆ. ಬಂಧಿತ ಆರೋಪಿ ಅಬ್ದುಲ್ ಶಕೂರ್ ದುಬೈನಲ್ಲಿ ಕೆಲಸ ಮಾಡುತ್ತಿದ್ದು, ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸದಸ್ಯನಾಗಿದ್ದ ಎಂದು ತಿಳಿದುಬಂದಿದೆ. ಬಕ್ರೀದ್ ಆಚರಣೆಗಾಗಿ ಈತ ಗ್ರಾಮಕ್ಕೆ ಬಂದಿದ್ದ ವೇಳೆ ಮಾಹಿತಿ ಪಡೆದು NIA ಅಧಿಕಾರಿಗಳು ಆತನನ್ನು ಬಂಧಿಸಿದ್ದಾರೆ. ಶಕೂರ್ ಅನೇಕ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದು, ಆನ್‌ಲೈನ್‌ನಲ್ಲಿ ಅವರೊಂದಿಗೆ ಸಂಪರ್ಕದಲ್ಲಿರುತ್ತಾನೆ ಎಂದು ತಿಳಿದುಬಂದಿದೆ.
Advertisement