
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಅವರ ಬರ್ಬರ ಹತ್ಯೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪಿ ಪವಿತ್ರಾ ಗೌಡ ಸೇರಿ 12 ಆರೋಪಿಗಳನ್ನು ಕೋರ್ಟ್ ಗುರುವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಆರೋಪಿಗಳನ್ನು ಪರಪ್ಪನ ಅಗ್ರಹಾರದಲ್ಲಿ ಜೈಲಿಗೆ ಶಿಫ್ಟ್ ಮಾಡಲಾಗಿದೆ.
ಜೈಲು ಅಧಿಕಾರಿಗಳು, ಆರೋಪಿಗಳಿಗೆ ಇಂದು ವಿಚಾರಣಾಧೀನ ಕೈದಿ ನಂಬರ್(ಯುಟಿಪಿ) ನೀಡಿದ್ದು, ಪ್ರಮುಖ ಆರೋಪಿ ಪವಿತ್ರಾ ಗೌಡ ಅವರಿಗೆ ಯುಟಿಪಿ ಸಂಖ್ಯೆ 6024 ನೀಡಲಾಗಿದೆ. ಪ್ರಕರಣದಲ್ಲಿ ಬಂಧಿತರಾದ 47 ವರ್ಷದ ದರ್ಶನ್ ತೊಗುದೀಪ ಸೇರಿದಂತೆ 17 ಮಂದಿಯ ಪೈಕಿ ಪವಿತ್ರಾ ಏಕೈಕ ಮಹಿಳೆ ಆರೋಪಿಯಾಗಿದ್ದಾರೆ. ಹೀಗಾಗಿ ಅವರನ್ನುಮಹಿಳಾ ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಲಾಗಿದೆ. ಏತನ್ಮಧ್ಯೆ, ಇತರ 11 ಆರೋಪಿಗಳನ್ನು ಪುರುಷ ಕೈದಿಗಳ ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಲಾಗಿದೆ.
ಇಷ್ಟು ದಿನ ಆರ್ ಆರ್ ನಗರದ ಕೆಂಚನಹಳ್ಳಿ ರಸ್ತೆಯಲ್ಲಿರುವ ಐಷಾರಾಮಿ ಮನೆಯಲ್ಲಿ ವಾಸವಿದ್ದ ಪ್ರಕರಣದ ನಂಬರ್ 1 ಆರೋಪಿ ಪವಿತ್ರಾ ಗೌಡ ಈಗ ಜೈಲಿನಲ್ಲಿ ರಾತ್ರಿ ಕಳೆಯಲು ಕಷ್ಟಪಡುತ್ತಿದ್ದಾರೆ. ಜೈಲಿನಲ್ಲಿ ಸರಿಯಾಗಿ ಊಟ ಮಾಡದೇ, ರಾತ್ರಿ ನಿದ್ರೆ ಕೂಡ ಮಾಡದೆ ಚಡಪಡಿಸುತ್ತಿದ್ದಾರೆ.
ರೆಡ್ ಕಾರ್ಪೆಟ್ ಬೊಟಿಕ್ ನಡೆಸುತ್ತಿರುವ ಪವಿತ್ರಾ ಅವರು ಅದ್ದೂರಿ ಜೀವನಶೈಲಿಯನ್ನು ಹೊಂದಿದ್ದರು. ಹೈಪೈಯಾಗಿ ಲೈಫ್ ಲೀಡ್ ಮಾಡಿದ್ದ ಪವಿತ್ರಾ ಗೌಡ ಈಗ ಜೈಲು ಹಕ್ಕಿಯಾಗಿ ಸೆರೆವಾಸದಲ್ಲಿದ್ದಾರೆ. ಇಂದು ಬೆಳಗ್ಗೆ 5 ಗಂಟೆಗೆ ಎದ್ದಿರುವ ಅವರು ಸಿಬ್ಬಂದಿ ನೀಡಿದ ಕಾಫಿ ಕುಡಿದಿದ್ದಾರೆ. ಮಹಿಳಾ ವಿಭಾಗದ ಕೊಠಡಿಯಲ್ಲಿ ಪವಿತ್ರಾ ಮೌನಕ್ಕೆ ಶರಣಾಗಿದ್ದಾರೆ.
ಪವಿತ್ರಾ ಗೌಡ, ಪವನ್, ರಾಘವೇಂದ್ರ, ನಂದೀಶ್, ಜಗದೀಶ್, ಅನುಕುಮಾರ್, ನಾಗರಾಜ್, ಲಕ್ಷ್ಮಣ್, ದೀಪಕ್, ಕೇಶವ್ ,ರವಿ ಕಾರ್ತಿಕ್ ಜೈಲುಪಾಲಾಗಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಡಿ ಗ್ಯಾಂಗ್ ಒಂದು ದಿನ ಕಾಲ ಕಳೆದಿದೆ. ಜೈಲಿನ ಮೆನುವಿನಂತೆ ಕೈದಿಗಳಿಗೆ ಊಟ, ತಿಂಡಿ ನೀಡಲಾಗುತ್ತಿದೆ.
Advertisement