ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕಾ ಸಂಸ್ಥೆ ಮತ್ತು Hero Motocorp ಸಹಯೋಗದಲ್ಲಿ ಇಂದು ದೇಶಾದ್ಯಂತ ರಸ್ತೆ ಸುರಕ್ಷತಾ ರ್ಯಾಲಿ ಆಯೋಜಿಸಲಾಗಿತ್ತು. ಬೆಂಗಳೂರಿನ TNIE ಕಚೇರಿಯಲ್ಲಿ ಇಂದು ರ್ಯಾಲಿಗೆ ಚಾಲನೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ವಾಹನ ಸವಾರರಿಗೆ ಪರವಾನಗಿ ನೀಡುವ ಪ್ರಕ್ರಿಯೆಯನ್ನು ಕಠಿಣಗೊಳಿಸಬೇಕು. ವಿದೇಶಗಳಲ್ಲಿ ಡ್ರೈವಿಂಗ್ ಲೈಸೆನ್ಸ್ ಸಿಗಬೇಕೆಂದರೆ ಕಠಿಣ ಪರೀಕ್ಷೆಗಳನ್ನು ಎದುರಿಸಬೇಕು. ನಮ್ಮಲ್ಲಿಯೂ ಅಂತಹ ನಿಯಮ ಕಠಿಣವಾಗಿ ಜಾರಿಯಾಗಬೇಕು ಎಂದರು. ಇದೇ ವೇಳೆ ಮಾತನಾಡಿದ ನಿಮ್ಹಾನ್ಸ್ ಸಂಸ್ಥೆ ನಿರ್ದೇಶಕಿ ಡಾ ಪ್ರತಿಮಾ ಮೂರ್ತಿ ಅವರು, ರಸ್ತೆ ಅಪಘಾತಗಳಲ್ಲಿ ಮೃತಪಡುವ ಶೇಕಡಾ 60ರಿಂದ 80ರಷ್ಟು ಮಂದಿ 19ರಿಂದ 50ವರ್ಷದೊಳಗಿನವರು. ದೇಶದ ಯುವಜನತೆ, ದುಡಿಯುವ ವರ್ಗ ರಸ್ತೆ ಅಪಘಾತದಲ್ಲಿ ಮೃತಪಡುತ್ತಿರುವುದರಿಂದ ಅವರ ಕುಟುಂಬಸ್ಥರಿಗೆ ಮತ್ತು ಇಡೀ ಸಮಾಜಕ್ಕೆ ಇದು ತುಂಬಲಾರದ ನಷ್ಟವಾಗುತ್ತದೆ ಎಂದರು.
ಬಳ್ಳಾರಿ ಪಾಲಿಕೆಯ 23ನೇ ಮೇಯರ್ ಆಗಿ ಮಾಜಿ ಸಚಿವ ಬಿ ನಾಗೇಂದ್ರ ಆಪ್ತ ಕಾಂಗ್ರೆಸ್ ನ ಮುಲ್ಲಂಗಿ ನಂದೀಶ್ ಬಾಬು ಆಯ್ಕೆಯಾಗಿದ್ದರೆ ಉಪ ಮೇಯರ್ ಆಗಿ ಡಿ. ಸುಕುಂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಾಮಾನ್ಯ ವರ್ಗಕ್ಕೆ ಮೇಯರ್ ಸ್ಥಾನ ಮೀಸಲಾಗಿದ್ದರೆ, ಉಪ ಮೇಯರ್ ಸ್ಥಾನ ಹಿಂದುಳಿದ ವರ್ಗ ಮಹಿಳೆಗೆ ಮೀಸಲಾಗಿತ್ತು. ಇನ್ನು ಮೇಯರ್ ಆಗಿ ಆಯ್ಕೆಯಾಗಿರುವ ನಂದೀಶ್ ಪಾಲಿಕೆಯ 18ನೇ ವಾರ್ಡಿನ್ ಕಾಂಗ್ರೆಸ್ ಸದಸ್ಯ. ಉಪಮೇಯರ್ ಸುಕುಂ 26ನೇ ವಾರ್ಡ್ ಸದಸ್ಯೆಯಾಗಿದ್ದಾರೆ. ಬಿಜೆಪಿಯಿಂದ ಶ್ರೀನಿವಾಸ್ ಮೋತ್ಕರ್ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದರೆ, ಉಪಮೇಯರ್ ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸಿರಲಿಲ್ಲ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ಅವರ ಆರ್ ಆರ್ ನಗರದಲ್ಲಿನ ಮನೆಯಲ್ಲಿ ಶೋಧ ನಡೆಸಿದ್ದ ಪೊಲೀಸರು 40 ಲಕ್ಷ ರೂಪಾಯಿ ವಶಪಡಿಸಿಕೊಂಡಿದ್ದರು. ಇದೀಗ ಪೊಲೀಸರಿಗೆ ಈ ಹಣದ ಮೂಲ ಸಿಕ್ಕಿದೆ. ಹೌದು ಮಾಜಿ ಕಾರ್ಪೋರೇಟರ್ ಮೋಹನ್ ರಾಜ್ ಎಂಬುವರು ದರ್ಶನ್ ಗೆ 40 ಲಕ್ಷ ರೂಪಾಯಿ ಕೊಟ್ಟಿದ್ದರು. ದರ್ಶನ್ ತನ್ನ ವಿರುದ್ಧದ 'ಕಾನೂನು ಕ್ರಮ'ಗಳಿಂದ ಪಾರಾಗಲು, ಬಂಧನದಿಂದ ತಪ್ಪಿಸಿಕೊಳ್ಳಲು ಮತ್ತು ಸಾಕ್ಷ್ಯ ನಾಶಪಡಿಸಲು ಬೇಕಾಗುವ ಖರ್ಚು ವೆಚ್ಚವನ್ನು ಭರಿಸುವ ಉದ್ದೇಶದಿಂದ ಈ ಹಣ ಪಡೆದುಕೊಂಡಿದ್ದರು. ಇನ್ನು ಪ್ರಕರಣದಲ್ಲಿ ತನ್ನ ಹೆಸರು ಹೊರಗೆ ಬರುತ್ತಿದ್ದಂತೆ ಮೋಹನ್ ರಾಜು ಫೋನ್ ಸ್ವಿಚಾಫ್ ಮಾಡಿಕೊಂಡಿದ್ದಾರೆ. ಹೀಗಾಗಿ ಮನೆಗೆ ಹೋಗಿ ನೋಟಿಸ್ ನೀಡಲು ಕಾಮಾಕ್ಷಿಪಾಳ್ಯ ಪೊಲೀಸರು ಮುಂದಾಗಿದ್ದಾರೆ. ಮತ್ತೊಂದೆಡೆ ದರ್ಶನ್ ಪರ ವಾದ ಮಾಡಲು ಹಿರಿಯ ವಕೀಲರಾದ ಸಿವಿ ನಾಗೇಶ್ ಅವರನ್ನು ನೇಮಕ ಮಾಡಲಾಗಿದೆ.
ಕಲಬುರಗಿಯ ಸಪ್ತಗಿರಿ ಆರೇಂಜ್ ಹೋಟೆಲ್‌ನಲ್ಲಿ ಅಡುಗೆ ಸಿಲಿಂಡರ್ ಸ್ಫೋಟಗೊಂಡಿದ್ದು ಭಾರೀ ಅನಾಹುತ ಸಂಭವಿಸಿದೆ. ಸ್ಫೋಟದಲ್ಲಿ 10 ಮಂದಿ ಕಾರ್ಮಿಕರು ಗಾಯಗೊಂಡಿದ್ದು ಈ ಪೈಕಿ ಇಬ್ಬರಿಗೆ ಗಂಭೀರ ಸುಟ್ಟು ಗಾಯಗಳಾಗಿದ್ದು ಅವರನ್ನು ಜಿಮ್ಸ್‌ನ ಟ್ರಾಮಾ ಸೆಂಟರ್ ಆಸ್ಪತ್ರೆಗೆ ದಾಖಲಿಸಿದ್ದರೆ ಉಳಿದವರನ್ನು ಜಿಮ್ಸ್ ಸಾಮಾನ್ಯ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಳಿಗ್ಗೆ 6.15ರ ಸುಮಾರಿಗೆ ಸಿಲಿಂಡರ್ ಸ್ಫೋಟಗೊಂಡಿದ್ದು ಕಾರ್ಮಿಕರು ಹೊರಗೆ ಓಡಿ ಬಂದಿದ್ದರು. ಆದರೆ ಕೆಲವರು ಹೋಟೆಲ್ ನ ಹಿಂಬದಿಯಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಸರಿಸಲು ಯತ್ನಿಸಿದಾಗ ಬೆಂಕಿಯ ತೀವ್ರತೆ ಹೆಚ್ಚಾಗಿ ಗಾಯಗೊಂಡಿದ್ದರು. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇಲೆ ನಟ ದರ್ಶನ್ ಅಭಿಮಾನಿ ಮಂಗಳಾ ವಿರುದ್ಧ ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಜಾನಕಿರಾಮ್ ಎಂಬುವರು ದೂರು ನೀಡಿದ್ದಾರೆ. ನಟ ದರ್ಶನ್ ಮೇಲೆ ಕೊಲೆ ಆರೋಪ ಬರುವಂತೆ ಹೆಚ್.ಡಿ ಕುಮಾರಸ್ವಾಮಿ ಮಾಡಿದ್ದಾನೆ. ದುಡ್ಡು ಕೊಟ್ಟು ದರ್ಶನ್ ವಿರುದ್ದ ಧಿಕ್ಕಾರ ಕೂಗಿಸುತ್ತೀಯಾ? ಮಾಜಿ ಸಂಸದೆ ಸುಮಲತಾ ಅಂಬರೀಶ್ ಮಂಡ್ಯದಲ್ಲಿ ನಿನಗೆ ಸ್ಪರ್ಧಿಸಲು ಅವಕಾಶ ಕೊಟ್ಟಿರುವುದಕ್ಕೆ ಡಿ ಬಾಸ್ ವಿರುದ್ಧ ಸ್ಕೆಚ್ ಹಾಕುತ್ತೀಯಾ? ಸುಮಲತಾ ಅವರಿಂದ ಭಿಕ್ಷೆ ಹಾಕಿಸಿಕೊಂಡ ಮಗ ಎಂದು ಏಕವಚನದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮಂಗಳಾ ನಿಂದಿಸಿದ್ದಳು.
Advertisement