
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ಈ ಹಿಂದೆ ಮೈಸೂರಿನ ಪಬ್ ವೊಂದರಲ್ಲಿ ಉದ್ಯಮಿ ಹಾಗೂ ಡಿಜೆಯನ್ನು ನಿಂದಿಸಿ, ಬೆದರಿಕೆ ಹಾಕಿರುವ ವಿಡಿಯೋ ವೈರಲ್ ಆಗಿದೆ. ಕಳೆದ ವರ್ಷ ಫೆಬ್ರವರಿ 26 ರಂದು ಈ ಘಟನೆ ನಡೆದಿದೆ.
ದರ್ಶನ್ ಹಾಗೂ ಅವರ ಸಹಚರರು ಪಬ್ ನಲ್ಲಿದ್ದಾಗ ಉದ್ಯಮಿ ಯಶವಂತ್ ತನ್ನ ಪತ್ನಿಯ ಹುಟ್ಟುಹಬ್ಬ ಆಚರಿಸಲು ಅಲ್ಲಿಗೆ ಕುಟುಂಬದವರೊಂದಿಗೆ ಆಗಮಿಸಿದ್ದರು. ಬೆಳಗ್ಗೆ 12-30ರ ಸುಮಾರಿನಲ್ಲಿ ದಿವಂಗತ ನಟ ಪುನೀತ್ ರಾಜ್ ಕುಮಾರ್ ಅವರ ಹಾಡನ್ನು ಹಾಡಲು ಯಶವಂತ್ ಡಿಜೆಗೆ ಕೇಳಿದ್ದಾರೆ. ಇದು ದರ್ಶನ್ ಹಾಗೂ ಅವರ ಸಹಚರರನ್ನು ಕೆರಳಿಸಿದ್ದು, ಕೇವಲ ದರ್ಶನ್ ಹಾಡಿರುವ ಹಾಡು ಹಾಡುವಂತೆ ಒತ್ತಾಯಿಸಿದ್ದಾರೆ. ಆಗ ಸ್ಥಳದಲ್ಲಿ ಪರಿಸ್ಥಿತಿ ಬಿಗಡಾಯಿಸಿದ್ದು, ದರ್ಶನ್ ಹಾಗೂ ಆತನ ಗ್ಯಾಂಗ್ ಯಶವಂತ್ ಹಾಗೂ ಡಿಜೆಯನ್ನು ನಿಂದಿಸಿ, ಬೆದರಿಕೆ ಹಾಕುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ದರ್ಶನ್ ಸಹಚರನ ವಿರುದ್ಧ ಎಫ್ ಐಆರ್ ಕೂಡಾ ದಾಖಲಾಗಿತ್ತು. ಆದರೆ, ಆ ಸಂದರ್ಭದಲ್ಲಿ ದರ್ಶನ್ ವಿರುದ್ಧ ಎಫ್ ಐಆರ್ ದಾಖಲಾಗಿರಲಿಲ್ಲ. ಮಾತಿನ ಚಕಮಕಿಯಲ್ಲಿ ದರ್ಶನ್ ಭಾಗಿಯಾಗಿದ್ದಾಗಿ ಪೊಲೀಸರು ನಂತರ ಹೇಳಿದ್ದರು.
ರೇಣುಕಾಸ್ವಾಮಿ ಹತ್ಯೆಯಾದ ದಿನ ಬೆಂಗಳೂರಿನಲ್ಲಿ ಪಬ್ ವೊಂದರಲ್ಲಿ ದರ್ಶನ್ ಪಾರ್ಟಿ ಮಾಡಿದ್ದರು. ನಂತರ ರೇಣುಕಾಸ್ವಾಮಿಯನ್ನು ಅಪಹರಿಸಿ, ಇಡಲಾಗಿದ್ದ ಶೆಡ್ ಗೆ ತೆರಳಿದ್ದರು. ಹತ್ಯೆಗೂ ಮುನ್ನಾ ಆತನಿಗೆ ಕರೆಂಟ್ ಶಾಕ್ ಸೇರಿದಂತೆ ಚಿತ್ರಹಿಂಸೆ ನೀಡಲಾಗಿತ್ತು ಎಂಬುದನ್ನು ಆರೋಪಿ ಧನರಾಜ್ ಒಪ್ಪಿಕೊಂಡಿದ್ದಾನೆ. ಈ ಪ್ರಕರಣದಲ್ಲಿ ದರ್ಶನ್,ಪವಿತ್ರಾ ಗೌಡ ಸೇರಿದಂತೆ 19 ಮಂದಿಯನ್ನು ಬಂಧಿಸಲಾಗಿದೆ.
Advertisement