ದರ್ಶನ್ ಸೇರಿ ನಾಲ್ವರಿಗೆ ಜುಲೈ 4ರವರೆಗೆ ನ್ಯಾಯಾಂಗ ಬಂಧನ; ಸೂರಜ್ ರೇವಣ್ಣಗೆ ಸಂಕಷ್ಟ: ಸಲಿಂಗಕಾಮ ಆರೋಪ; ಸಾಹಿತಿ ಕಮಲಾ ಹಂಪನಾ ನಿಧನ! ಇವು ಇಂದಿನ ಪ್ರಮುಖ ಸುದ್ದಿಗಳು 22-06-24

ದರ್ಶನ್ ಸೇರಿ ನಾಲ್ವರಿಗೆ ಜುಲೈ 4ರವರೆಗೆ ನ್ಯಾಯಾಂಗ ಬಂಧನ; ಸೂರಜ್ ರೇವಣ್ಣಗೆ ಸಂಕಷ್ಟ: ಸಲಿಂಗಕಾಮ ಆರೋಪ; ಸಾಹಿತಿ ಕಮಲಾ ಹಂಪನಾ ನಿಧನ! ಇವು ಇಂದಿನ ಪ್ರಮುಖ ಸುದ್ದಿಗಳು 22-06-24

1. ದರ್ಶನ್ ಸೇರಿ ನಾಲ್ವರಿಗೆ ಜುಲೈ 4ರವರೆಗೆ ನ್ಯಾಯಾಂಗ ಬಂಧನ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ತೂಗುದೀಪ್ ಮತ್ತು ಗ್ಯಾಂಗ್ ಜೈಲು ಪಾಲಾಗಿದ್ದು, ನಾಲ್ವರು ಆರೋಪಿಗಳನ್ನು 24ನೇ ಎಸಿಎಂಎಂ ಕೋರ್ಟ್ ಜುಲೈ 4ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ದರ್ಶನ್ ಹಾಗೂ ಇತರ ಆರೋಪಿಗಳಾದ ವಿನಯ್, ಪ್ರದೋಷ್, ಧನರಾಜ್ ಎರಡು ದಿನದ ಪೊಲೀಸ್ ಕಸ್ಟಡಿ ಅವಧಿ ಮುಗಿದ ಕಾರಣ ಇಂದು ಅವರನ್ನು ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್​ಗೆ ಹಾಜರುಪಡಿಸಲಾಗಿತ್ತು. ಆರೋಪಿಗಳ ವಿಚಾರಣೆ ನಡೆಸಿದ ಕೋರ್ಟ್, ಪೊಲೀಸರು ಮತ್ತೆ ಕಸ್ಟಡಿಗೆ ಕೇಳಲಿಲ್ಲವಾದ್ದರಿಂದ ದರ್ಶನ್ ಹಾಗೂ ಇತರೆ ಮೂವರು ಆರೋಪಿಗಳಿಗೆ 13 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಇದೇ ಪ್ರಕರಣದ ಇತರ ಆರೋಪಿಗಳಾದ ಪವಿತ್ರಾ ಗೌಡ ಹಾಗೂ ಇತರರಿಗೆ ಎರಡು ದಿನಗಳ ಹಿಂದೆಯೇ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

2. ಸೂರಜ್ ರೇವಣ್ಣಗೆ ಸಂಕಷ್ಟ: ಸಲಿಂಗಕಾಮ ಆರೋಪ

ಜೆಡಿಎಸ್ ಎಂಎಲ್​ಸಿ ಸೂರಜ್‌ ರೇವಣ್ಣ ವಿರುದ್ಧ ಕೇಳಿಬಂದಿರುವ ಸಲಿಂಗ ಕಾಮ, ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಬಗ್ಗೆ ತಮಗೆ ಇದುವರೆಗೆ ಅಧಿಕೃತವಾಗಿ ದೂರು ಬಂದಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿಂದು ಮಾತನಾಡಿದ ಅವರು, ಸೂರಜ್ ವಿರುದ್ಧ ಕೇಳಿ ಬಂದಿರುವ ಆರೋಪಕ್ಕೆ ಸಂಬಂಧಪಟ್ಟಂತೆ ಹಾಸನದಲ್ಲಾಗಲಿ, ಬೆಂಗಳೂರಿನಲ್ಲಾಗಲಿ ಇನ್ನೂ ದೂರು ದಾಖಲಾಗಿಲ್ಲ. ಈ ಕುರಿತು ಮಾಧ್ಯಮಗಳಲ್ಲಿ ನೋಡಿದ್ದೇನೆ. ನಮಗೆ ಯಾರೂ ಅಧಿಕೃತ ದೂರು ನೀಡಿಲ್ಲ. ದೂರು ಬಂದ ಕೂಡಲೇ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು. ಮತ್ತೊಂದೆಡೆ ಸೂರಜ್ ರೇವಣ್ಣ ಸಹಾಯಕ ಶಿವಕುಮಾರ್ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಮತ್ತು ಸಂಬಂಧಿಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಹಣ ವಸೂಲಿ ಮಾಡಲು ಸೂರಜ್ ರೇವಣ್ಣ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ ಎಂದು ಶಿವಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.

3. ಯಾದಗಿರಿಯಲ್ಲಿ ಅರಣ್ಯಾಧಿಕಾರಿ ಕೊಲೆ: ಐವರ ಬಂಧನ

ಕುಡಿದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಅರಣ್ಯಾಧಿಕಾರಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ನಡೆದಿದ್ದು ಈ ಪ್ರಕರಣ ಸಂಬಂಧ ಇಂದು ಐವರನ್ನು ಬಂಧಿಸಲಾಗಿದೆ. ಜೂನ್ 5ರಂದು ಶಹಾಪುರ ಪಟ್ಟಣದ ಮೋಟಗಿ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಅರಣ್ಯ ಅಧಿಕಾರಿ ಮಹೇಶ್ ಕನಕಟ್ಟಿ ಅವರನ್ನು ಕೊಲೆ ಮಾಡಲಾಗಿತ್ತು. ಕೊಲೆ ಪ್ರಕರಣ ಸಂಬಂಧ ರಾಜು, ರೇಖು ನಾಯಕ್, ತಾರಾ ಸಿಂಗ್, ನರಸಿಂಗ್ ಮತ್ತು ಪ್ರಕಾಶ್ ಎಂಬುವರನ್ನು ಬಂಧಿಸಲಾಗಿದೆ. ಈ ಐವರ ಗ್ಯಾಂಗ್​ ಬಾರ್ & ರೆಸ್ಟೋರೆಂಟ್​ನಲ್ಲಿ ಕುಡಿದು ಕೂಗಾಡಿದ್ದರು. ಇದನ್ನು ಪ್ರಶ್ನಿಸಿದಕ್ಕೆ ಮಹೇಶ್ ಕಣಕಟ್ಟಿ ಮೇಲೆ ಏಕಾಏಕಿ ಕಟ್ಟಿಗೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದರು. ಮೃತನ ಪತ್ನಿ ತಮ್ಮ ಪತಿಯನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದು ನಂತರ ತನಿಖೆಕೈಗೊಂಡ ಪೊಲೀಸರು ರೆಸ್ಟೋರೆಂಟ್ ನಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಕೊಲೆ ಮಾಡಿರುವುದು ಪತ್ತೆಯಾಗಿತ್ತು.

4. ಸಾಹಿತಿ ಕಮಲಾ ಹಂಪನಾ ನಿಧನ

ಕನ್ನಡದ ಹಿರಿಯ ಸಾಹಿತಿ, ಲೇಖಕಿ ಡಾ ಕಮಲಾ ಹಂಪನಾ ಅವರು ಹೃದಯಾಘಾತದಿಂದ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ. 88 ವರ್ಷದ ಕಮಲಾ ಹಂಪನಾ ಅವರು ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದರು. ಕಮಲಾ ಅವರು ಪತಿ ಹಿರಿಯ ಸಾಹಿತಿ ಡಾ ಹಂ.ಪ. ನಾಗರಾಜಯ್ಯ, ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರನನ್ನು ಅಗಲಿದ್ದಾರೆ. ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಅವರಿಗೆ ಹೃದಯಾಘಾತ ಆಗಿತ್ತು. ಕೂಡಲೇ ಅವರನ್ನು ಎಂ ಎಸ್ ರಾಮಯ್ಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಬೆಳಗ್ಗೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಕಮಲಾ ಹಂಪನಾ ನಿಧನಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ. ನಾಡೋಜ ಪ್ರಶಸ್ತಿ ಪುರಸ್ಕೃತ ಕಮಲಾ ಹಂಪನಾ ಅವರ ಸಾವು ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ನಷ್ಟ ಎಂದು ಹೇಳಿದ್ದಾರೆ.

5. ಆನಂದ ಮಾರ್ಗ ಆಶ್ರಮದ ಹಿರಿಯ ಸ್ವಾಮೀಜಿ ಹತ್ಯೆ

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಸಂತಳ್ಳಿಯಲ್ಲಿರುವ ಆನಂದ ಮಾರ್ಗ ಆಶ್ರಮದಲ್ಲಿ ಎರಡು ಗುಂಪುಗಳ ನಡುವಿನ ಗಲಾಟೆ ವೇಳೆ ಹಿರಿಯ ಸ್ವಾಮೀಜಿ ಒಬ್ಬರ ಬರ್ಬರ ಹತ್ಯೆಯಾಗಿದೆ. ಕೊಲೆಯ ಸ್ವಾಮಿಜೀಯನ್ನು ಆಚಾರ್ಯ ಚಿನ್ಮಯಾನಂದ ಎಂದು ತಿಳಿದುಬಂದಿದೆ. ಆಚಾರ್ಯ ಧರ್ಮ ಪ್ರಾಣಾನಂದ ಅವರ ಗುಂಪಿನಿಂದ ಹತ್ಯೆ ನಡೆದಿದೆ. ಸಂತಳ್ಳಿ ಗ್ರಾಮದ ನಾಲ್ಕು ಎಕರೆ ಜಾಗದಲ್ಲಿ ಆಶ್ರಮ ಇದ್ದು ಹಲವು ವರ್ಷಗಳಿಂದ ಜಾಗದ ಕುರಿತಂತೆ ವಿವಾದ ನಡೆಯುತ್ತಿದೆ. ಇಂದು ಬೆಳಿಗ್ಗೆ ಕೋರ್ಟ್​ಗೆ ದಾಖಲೆ ಸಹಿತ ಹೋಗುವ ವೇಳೆ ಮಾರಣಾಂತಿಕ ಹಲ್ಲೆ ನಡೆದಿದೆ ಎನ್ನಲಾಗಿದೆ. ಈ ಕೊಲೆ ಸಂಬಂಧ ಆಚಾರ್ಯ ಧರ್ಮ ಪ್ರಾಣಾನಂದ ಹಾಗೂ ಅರುಣ್ ಎಂಬುವವರನ್ನು ಮಾಲೂರು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com