ಸಲಿಂಗ ಕಾಮ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದ ಸಂಬಂಧ JDS MLC ಸೂರಜ್ ರೇವಣ್ಣ ಅವರನ್ನು ಹಾಸನ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ರಾತ್ರಿ ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣದ ವಿಚಾರವಾಗಿ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ವಿಚಾರಣೆಗಾಗಿ ಹಾಜರಾಗಿದ್ದರು. ಪ್ರಕರಣದ ಸಂಬಂಧ ಸೂರಜ್‌ರೇವಣ್ಣ ಅವರನ್ನು ಪೊಲೀಸರು ಭಾನುವಾರ ಬೆಳಿಗ್ಗೆ 4 ಗಂಟೆ ವರೆಗೂ ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಬಳಿಕ ಬಂಧಿಸಲಾಗಿದೆ.
ಇನ್ನು ಸಿಐಡಿ ಪ್ರಕರಣವನ್ನು ಸಿಐಡಿಗೆ ವಹಿಸಲಾಗುವುದು ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.ಗಂಭೀರವಾದ ಆರೋಪ ಪ್ರಕರಣವಾಗಿರುವುದರಿಂದ ಕೂಲಂಕಷವಾಗಿ ತನಿಖೆ ಮಾಡುತ್ತೇವೆ. ಸೂರಜ್ ರೇವಣ್ಣ ದಾಖಲಿಸಿರುವ ಪ್ರತಿ ದೂರಿನ ಬಗ್ಗೆ ಸಹ ಪೊಲೀಸರು ತನಿಖೆ ಮಾಡುತ್ತಾರೆ ಎಂದು ಗೃಹ ಸಚಿವರು ತಿಳಿಸಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ, ಆರೋಪಿ ಸೂರಜ್ ರೇವಣ್ಣ ಅವರನ್ನು ಬೆಂಗಳೂರಿಗೆ ಕರೆತರಲಾಗಿದ್ದು, ಜನಪ್ರತಿನಿಧಿಗಳ ನ್ಯಾಯಾಲಯದ ಜಡ್ಜ್ ಎದುರು ಹಾಜರುಪಡಿಸಲಾಗಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಇಂದು ಮರುಬಳಕೆ ಉಡಾವಣಾ ವಾಹನ ಪುಷ್ಪಕ್ ಲ್ಯಾಂಡಿಂಗ್ ಪ್ರಯೋಗದಲ್ಲಿ ಯಶಸ್ವಿಯಾಗಿದೆ. ಇದು ಸತತ ಮೂರನೇ ಯಶಸ್ಸಾಗಿದ್ದು, ಪರೀಕ್ಷಾರ್ಥ ಉಡಾವಣೆಯನ್ನು ಚಿತ್ರದುರ್ಗದಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್ (ATR) ನಲ್ಲಿ ನಡೆಸಲಾಯಿತು. 15 ತಿಂಗಳ ಅವಧಿಯಲ್ಲಿ ಇಸ್ರೊ ತನ್ನ ಬಾಹ್ಯಾಕಾಶ ವಿಮಾನ 'ಪುಷ್ಪಕ್'ನ ಎಲ್ಲಾ ಮೂರು ಸ್ವಾಯತ್ತ ಲ್ಯಾಂಡಿಂಗ್ ಪರೀಕ್ಷೆಗಳನ್ನು ಪೂರ್ಣಗೊಳಿಸಿದೆ. ಇದರೊಂದಿಗೆ ಮರುಬಳಕೆ ಮಾಡಬಹುದಾದ ರಾಕೆಟ್ ತಂತ್ರಜ್ನಾನದಲ್ಲಿ ಇಸ್ರೋ ಮಹತ್ವದ ಮುನ್ನಡೆ ಸಾಧಿಸಿದ್ದು, ಕಡಿಮೆ ವೆಚ್ಚದಲ್ಲಿ ಬಾಹ್ಯಾಕಾಶ ಪ್ರವೇಶಿಸುವ ಯತ್ನ ಇದಾಗಿದೆ ಎಂದು ಇಸ್ರೋ ಹೇಳಿದೆ.
ಆನಂದ ಮಾರ್ಗ ಆಶ್ರಮದಲ್ಲಿ ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿಯಲ್ಲಿ ಸ್ವಾಮೀಜಿಯೊಬ್ಬರ ಕೊಲೆಯಾಗಿರುವ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಮಾಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಚಾರ್ಯ ಧರ್ಮಪ್ರಾಣಾನಂದ, ಪ್ರಾಣೇಶ್ವರಾನಂದ ಹಾಗೂ ಅರುಣ್ ಕುಮಾರ್‌ಬಂಧಿತ ಆರೋಪಿಗಳಾಗಿದ್ದಾರೆ. ಶನಿವಾರ ಸಂತಳ್ಳಿ ಗೇಟ್ ಬಳಿಯ ಆಶ್ರಮದಲ್ಲಿ ಸ್ನಾನ ಮಾಡುತ್ತಿದ್ದ ಚಿನ್ಮಯಾನಂದ ಸ್ವಾಮೀಜಿ ಅವರನ್ನು ಹೊರಗೆ ಎಳೆದುಕೊಂಡು ಬಂದ ಆರೋಪಿಗಳು ದೊಣ್ಣೆಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಸ್ವಾಮೀಜಿಯನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ ಸ್ವಾಮೀಜಿ ಮೃತಪಟ್ಟಿದ್ದರು.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದೇವದಾರಿ ಕಬ್ಬಿಣದ ಅದಿರು ಗಣಿ ಕಾರ್ಯಾಚರಣೆಗೆ ಸಂಬಂಧಿಸಿದ ಕುದುರೆಮುಖ ಕಬ್ಬಿಣದ ಅದಿರು ಕಂಪನಿಯ (KIOCL) ಕಡತಕ್ಕೆ ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಒಪ್ಪಿಗೆ ನೀಡಿದ್ದಾರೆ. ಕಡತಕ್ಕೆ ಸಹಿ ಹಾಕಿರುವುದಕ್ಕೆ ರಾಜ್ಯ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಉದ್ದೇಶಿತ ಗಣಿ ಪ್ರದೇಶ ಸ್ವಾಮಿಮಲೈ ಮೀಸಲು ಅರಣ್ಯ ವ್ಯಾಪ್ತಿಯಲ್ಲಿದೆ. ಇಲ್ಲಿ ಗಣಿಗಾರಿಕೆಯಿಂದ 99,330 ಮರಗಳು ನಾಶವಾಗಲಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ. ರಾಜ್ಯ ಸರ್ಕಾರದ ಆಕ್ಷೇಪಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ನನ್ನ ಮೇಲಿನ ಸಿಟ್ಟಿನಿಂದ ದೇವದಾರಿ ಬೆಟ್ಟದಲ್ಲಿ ಗಣಿಗಾರಿಕೆಗೆ ಆಕ್ಷೇಪ ವ್ಯಕ್ತವಾಗುತ್ತಿದೆ. ಆ ಕಂಪನಿ ಚಟುವಟಿಕೆ ಮುಂದುವರಿಸಲು ನಾನು ಸಹಿ ಹಾಕಿದ್ದೇನೆ. ನನ್ನಿಂದ ಹೊಸ ಮೈನಿಂಗ್ ಮಾಡುವ ಯಾವುದೇ ನಿರ್ಧಾರವಾಗಿಲ್ಲ ಎಂದು ಹೇಳಿದ್ದಾರೆ.
ವಾಹನ ಸಂಚಾರ ವೇಳೆ ರಸ್ತೆ ಸುರಕ್ಷತೆಗೆ ಉತ್ತೇಜನ ನೀಡಲು, ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಹೀರೋ ಮೋಟೋಕಾರ್ಪ್ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ರೈಡ್ ರೈಟ್, ಸ್ಟೇ ಬ್ರೈಟ್: ಗೇರ್ ಅಪ್ ಫಾರ್ ಲೈಫ್” ಬೈಕ್ ರ್ಯಾಲಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಇಂದು ಚಾಲನೆ ನೀಡಿದರು. ಅಭಿಯಾನದ ವೇಳೆ ಬಿಬಿಎಂಪಿ ಮಾರ್ಷಲ್‌ಗಳು, ಪೊಲೀಸ್ ಸಿಬ್ಬಂದಿ, ಗಿಗ್ ವರ್ಕರ್‌ಗಳು ಸೇರಿದಂತೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಿಬ್ಬಂದಿ ದ್ವಿಚಕ್ರ ವಾಹನದಲ್ಲಿ ನಗರದಲ್ಲಿ 5 ಕಿಲೋ ಮೀಟಿರ್ ರ್ಯಾಲಿಯಲ್ಲಿ ಸಾಗಿದರು. ಸಾರ್ವಜನಿಕರಿಗೆ ಹೆಲ್ಮೆಟ್‌ಗಳನ್ನು ವಿತರಿಸಲಾಯಿತು.
Advertisement