
ಬೆಂಗಳೂರು: ವಾಹನ ಸಂಚಾರ ವೇಳೆ ರಸ್ತೆ ಸುರಕ್ಷತೆಗೆ ಉತ್ತೇಜನ ನೀಡಲು, ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್(The New Indian Express), ಹೀರೋ ಮೋಟೋಕಾರ್ಪ್(Hero MotoCorp) ಸಹಯೋಗದೊಂದಿಗೆ ಆಯೋಜಿಸಿರುವ “ರೈಡ್ ರೈಟ್, ಸ್ಟೇ ಬ್ರೈಟ್: ಗೇರ್ ಅಪ್ ಫಾರ್ ಲೈಫ್” ಬೈಕ್ ರ್‍ಯಾಲಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾನುವಾರ ಚಾಲನೆ ನೀಡಿದರು.
ಅಭಿಯಾನದ ವೇಳೆ ಬಿಬಿಎಂಪಿ ಮಾರ್ಷಲ್‌ಗಳು, ಪೊಲೀಸ್ ಸಿಬ್ಬಂದಿ, ಗಿಗ್ ವರ್ಕರ್‌ಗಳು ಸೇರಿದಂತೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಿಬ್ಬಂದಿ ದ್ವಿಚಕ್ರ ವಾಹನದಲ್ಲಿ ನಗರದಲ್ಲಿ 5 ಕಿಲೋ ಮೀಟಿರ್ ರ್‍ಯಾಲಿ ಸಾಗಿದರು. ಸಾರ್ವಜನಿಕರಿಗೆ ಹೆಲ್ಮೆಟ್‌ಗಳನ್ನು ವಿತರಿಸಲಾಯಿತು.
ಬೆಂಗಳೂರಿನಂತಹ ಜನದಟ್ಟಣೆ, ವಾಹನ ದಟ್ಟಣೆಯ ನಗರದಲ್ಲಿ ಸವಾರರು ಜಾಗರೂಕತೆಯಿಂದ ವಾಹನ ಚಲಾಯಿಸಬೇಕು, ವಾಹನ ಸವಾರರು ತಮ್ಮ ಸುರಕ್ಷತೆ ನೋಡಿಕೊಳ್ಳುವುದರ ಜೊತೆಗೆ ಸಾಮಾಜಿಕ ಕಾಳಜಿಯನ್ನು ಕೂಡ ಹೊಂದಿರಬೇಕು. ಕಡ್ಡಾಯವಾಗಿ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಬೆಂಗಳೂರು ಕಚೇರಿಯ ಪ್ರಧಾನ ವ್ಯವಸ್ಥಾಪಕ ಪಿ ಸುರೇಶ್ ಕುಮಾರ್, ಸ್ಥಳೀಯ ಸಂಪಾದಕ ನಿರದ್ ಮುದೂರ್, ಮುಖ್ಯ ವರದಿಗಾರ ರಾಮು ಪಾಟೀಲ್ ಹಾಗೂ ಇತರರು ಉಪಸ್ಥಿತರಿದ್ದರು.
ಬೈಕ್ ರ್ಯಾಲಿ: #RideSafeIndia ರ್‍ಯಾಲಿಯು ರಾಜಭವನದಿಂದ ಆರಂಭವಾಗಿ ವಿಧಾನ ಸೌಧ, ಕೆ ಆರ್ ರಸ್ತೆ ಮೂಲಕ ಸಾಗಿ ಕಂಠೀರವ ಕ್ರೀಡಾಂಗಣ ಮೂಲಕ ಹಾದು ಕಸ್ತೂರ್ಬಾ ರಸ್ತೆ, ಎಂ ಜಿ ರಸ್ತೆ, ಕಬ್ಬನ್ ಪಾರ್ಕ್ ಮೂಲಕ ಕ್ವೀನ್ಸ್ ರಸ್ತೆಯ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಕಚೇರಿಯಲ್ಲಿ ಮುಕ್ತಾಯಗೊಂಡಿತು. ರ್‍ಯಾಲಿ ಉದ್ದಕ್ಕೂ ಸುಗಮ ಸಮನ್ವಯವನ್ನು ಬೆಂಗಳೂರು ನಗರ ಸಂಚಾರ ಪೊಲೀಸರು ನಿರ್ವಹಿಸಿದ್ದರು.
Advertisement