
ಮಡಿಕೇರಿ: ಗುಂಡಿನ ದಾಳಿ ನಡೆಸಿದ ಪ್ರಕರಣದಲ್ಲಿ ಕುಶಾಲನಗರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಭಾನುವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ. ಕುಶಾಲನಗರದ ಉದ್ಯಮಿಯೊಬ್ಬರು ಗಾಯಗೊಂಡಿದ್ದು, ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಶಾಲನಗರದ ಉದ್ಯಮಿ ಶಶಿಕುಮಾರ್ (40) ಗಾಯಗೊಂಡವರು. ಆರೋಪಿಗಳಾದ ಕುಶಾಲನಗರದ ಅನುದೀಪ್ (40) ಮತ್ತು ಲವಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಆರೋಪಿಯು ಶಶಿಕುಮಾರ್ ಮೇಲೆ ಏಳು ಗುಂಡುಗಳನ್ನು ಹಾರಿಸಿದ್ದು ಆತನ ಕಾಲಿಗೆ ಗಾಯಗಳಾಗಿವೆ. ಹುಟ್ಟುಹಬ್ಬದ ಪಾರ್ಟಿಯಲ್ಲಿ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಈ ಘಟನೆ ನಡೆದಿದೆ. ಮಧ್ಯರಾತ್ರಿ ಶಶಿಕುಮಾರ್ ಸ್ಥಳದಿಂದ ತೆರಳಿದ್ದರು ಎನ್ನಲಾಗಿದೆ. ಆದರೆ, ಅನುದೀಪ್ ಮತ್ತು ಅವರ ಸ್ನೇಹಿತ ಲವಕುಮಾರ್ ಅವರನ್ನು ಹಿಂಬಾಲಿಸಿಕೊಂಡು ಅವರ ಮನೆಗೆ ತೆರಳಿದ್ದಾರೆ.
ಶಶಿಕುಮಾರ್ ಮನೆಯ ಹೊರಗೆ ಡಬಲ್ ಬ್ಯಾರಲ್ ಗನ್ ಹಿಡಿದುಕೊಂಡಿದ್ದ ಆರೋಪಿ ಅನುದೀಪ್ ಶಶಿಕುಮಾರ್ ಅವರ ವಾಹನದ ಮೇಲೆ ಗುಂಡು ಹಾರಿಸಿದ್ದಾನೆ. ಸಂತ್ರಸ್ತರ ವಾಹನಕ್ಕೆ ಏಳು ಗುಂಡುಗಳು ಹಾರಿದ್ದು, ಒಂದು ಗುಂಡು ಬಾಗಿಲಿಗೆ ತೂರಿಕೊಂಡು ಶಶಿಕುಮಾರ್ ಅವರ ಕಾಲಿಗೆ ಗಾಯವಾಗಿದೆ. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೇ ವೇಳೆ ಕುಶಾಲನಗರ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಲವಕುಮಾರ್‌ನನ್ನು ಬಂಧಿಸಿದ್ದಾರೆ. ಆದರೆ, ಅನುದೀಪ್ ಸ್ಥಳದಿಂದ ಪರಾರಿಯಾಗಿದ್ದ.
ಸೋಮವಾರ ಬೆಳಗ್ಗೆ ಕುಶಾಲನಗರ ಪೊಲೀಸರು ಕೊಪ್ಪದ ಹೋಂಸ್ಟೇಯಲ್ಲಿ ಅನುದೀಪ್‌ನನ್ನು ಬಂಧಿಸಿದ್ದಾರೆ. ಇಬ್ಬರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ. ಘಟನಾ ಸ್ಥಳಕ್ಕೆ ಎಸ್ಪಿ ಕೆ.ರಾಮರಾಜನ್, ಡಿವೈಎಸ್ಪಿ ಗಂಗಾಧರಪ್ಪ ಮತ್ತಿತರರು ಭೇಟಿ ನೀಡಿದ್ದರು. ಎಸ್ಪಿ ಕೆ ರಾಮರಾಜನ್ ಮತ್ತು ಕುಶಾಲನಗರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಪರಾಧದ ವಿವರಗಳನ್ನು ಸಂಗ್ರಹಿಸಿದರು.
Advertisement