ಕಳಪೆ ಗುಣಮಟ್ಟದ ಹೆಲ್ಮೆಟ್ ವಿರುದ್ಧ ಸಂಚಾರಿ ಪೊಲೀಸರ ವಿಶೇಷ ಕಾರ್ಯಾಚರಣೆ; ಬಿಲ್ಡರ್ ಗಳಿಗೆ ED ಶಾಕ್; ಕಲುಷಿತ ನೀರು ಸೇವನೆ ಇಬ್ಬರು ಸಾವು! ಇವು ಇಂದಿನ ಪ್ರಮುಖ ಸುದ್ದಿಗಳು 24-06-24

file pic
ಸಂಗ್ರಹ ಚಿತ್ರonline desk

1. ಬಿಲ್ಡರ್ ಗಳಿಗೆ ED ಶಾಕ್

ಬೆಂಗಳೂರು ಹಾಗೂ ಮೈಸೂರಿನ ಹಲವೆಡೆ ಇಂದು ಪ್ರತಿಷ್ಠಿತ ಬಿಲ್ಡರ್‌ಗಳ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ‌. ಬೆಂಗಳೂರಿನ ಯುಬಿ ಸಿಟಿಯ ಕಿಂಗ್ಫಿಶರ್ ಟವರ್, ಮಲ್ಲೇಶ್ವರಂ, ಬಸವೇಶ್ವರನಗರ, ಬನ್ನೇರುಘಟ್ಟ ರೋಡ್, ಹನುಮಂತನಗರ ಹಾಗೂ ಮೈಸೂರಿನ ಎರಡು ಸ್ಥಳಗಳು ಸೇರಿದಂತೆ 11 ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಸೈಟ್ ಕೊಡಿಸುವುದಾಗಿ ವಂಚನೆ, ಅಕ್ರಮ ವ್ಯವಹಾರ, ಆಸ್ತಿ ತೆರಿಗೆ ಪಾವತಿಯಲ್ಲಿ ವಂಚನೆ ಸೇರಿದಂತೆ ಬಿಲ್ಡರ್‌ಗಳು ಮತ್ತು ಕೆಲ ಕಂಪನಿಗಳ ವಿರುದ್ಧ ಅನೇಕ ಅವ್ಯವಹಾರಗಳ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

2. ಸಿಐಡಿ ವಶಕ್ಕೆ ಸೂರಜ್ ರೇವಣ್ಣ, ನ್ಯಾಯಾಂಗ ಬಂಧನಕ್ಕೆ ಪ್ರಜ್ವಲ್ ರೇವಣ್ಣ 

ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರನ್ನು 8 ದಿನ ಸಿಐಡಿ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ನೀಡಿದೆ. 14 ದಿನಗಳ ನ್ಯಾಯಾಂಗ ಬಂಧನದಲ್ಲಿರುವ ಸೂರಜ್ ರೇವಣ್ಣ ಅವರನ್ನು ಜುಲೈ 1ರವರೆಗೆ ಸಿಐಡಿ ಕಸ್ಟಡಿಗೆ ಒಪ್ಪಿಸಿ ಜನಪ್ರತಿನಿದಿಗಳ ವಿಶೇಷ ನ್ಯಾಯಾಲಯ ಆದೇಶ ಪ್ರಕಟಿಸಿದೆ. ಈ ಮಧ್ಯೆ ಸೂರಜ್ ರೇವಣ್ಣ ವಿರುದ್ಧ ದೂರು ದಾಖಲಿಸಿದ್ದ ಅವರ ಆಪ್ತ ಶಿವಕುಮಾರ್ ನಾಪತ್ತೆಯಾಗಿದ್ದು, ಅವರಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇನ್ನು ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಪ್ರಕಟಿಸಿದೆ. ಮೂರನೇ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಪೊಲೀಸ್ ಕಸ್ಟಡಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಇಂದು ಮತ್ತೆ ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸಲಾಯಿತು.

3. ಕೋಲಾರ, ಬೆಳಗಾವಿಯಲ್ಲಿ ಕಲುಷಿತ ನೀರು ಸೇವಿಸಿ ಇಬ್ಬರು ಸಾವು

ಕೋಲಾರ, ಬೆಳಗಾವಿಯಲ್ಲಿ ಕಲುಷಿತ ನೀರು ಸೇವಿಸಿ ಇಬ್ಬರು ಸಾವನ್ನಪ್ಪಿದ್ದಾರೆ. ಮುಳಬಾಗಿಲಿನ ಮಿಣಜೇನಹಳ್ಳಿಯಲ್ಲಿ ವೆಂಕಟರಮಣಪ್ಪ ಎಂಬ ವೃದ್ಧ ಕಲುಷಿತ ನೀರು ಸೇವಿಸಿದ್ದರಿಂದ ಮೃತಪಟ್ಟಿದ್ದರೆ, 5 ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ಒಳಚರಂಡಿ ನೀರು ಮಿಶ್ರಣವಾಗಿ ನೀರು ಕಲುಷಿತಗೊಂಡಿದೆ. ಇನ್ನು ಬೆಳಗಾವಿಯಲ್ಲಿ ಹೊಳೆವ್ವಾ ಬಾಳಪ್ಪ ಧನದವರ ಎಂಬ ಮಹಿಳೆ ಕಲುಷಿತ ನೀರು ಸೇವನೆಯಿಂದ ಸಾವನ್ನಪ್ಪಿದ್ದಾರೆ.

4. ಕಬಾಬ್ ಗೆ ಕೃತಕ ಬಣ್ಣ ಬಳಕೆಗೆ ರಾಜ್ಯ ಸರ್ಕಾರದಿಂದ ನಿಷೇಧ

ಗೋಬಿ ಮಂಚೂರಿ ಬಳಿಕ ಇದೀಗ ಕಬಾಬ್‌ಗೂ ಕೃತಕ ಬಣ್ಣ ಬಳಕೆಗೂ ರಾಜ್ಯ ಸರ್ಕಾರ ನಿಷೇಧ ಹೇರಿದೆ. ರಾಜ್ಯಾದ್ಯಂತ ಮಾರಾಟವಾಗುತ್ತಿರುವ ವೆಜ್/ಚಿಕನ್/ಫಿಶ್ ಇತರೆ ಕಬಾಬ್‌ಗಳಲ್ಲಿ ಕೃತಕ ಬಣ್ಣದ ಬೆರೆಸುವಿಕೆಯಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಕಬಾಬ್‌ ತಯಾರಿಕೆಯಲ್ಲಿ ಕೃತಕ ಬಣ್ಣಗಳನ್ನು ಬೆರೆಸುವುದನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಿರ್ಬಂಧಿಸಿದೆ. ರಾಜ್ಯಾದ್ಯಂತ 39 ಕಬಾಬ್‌ಗಳ ಮಾದರಿಗಳನ್ನು ಸಂಗ್ರಹಿಸಿ ಲ್ಯಾಬ್‌ಗೆ ಕಳಿಸಿದಾಗ, ಅದರಲ್ಲಿ 8 ಕಬಾಬ್‌ನ ಮಾದರಿಗಳು ಕೃತಕ ಬಣ್ಣದಿಂದ ಕೂಡಿರುವುದರಿಂದ ಅಸುರಕ್ಷಿತ ಎಂದು ವರದಿಗಳಲ್ಲಿ ಕಂಡುಬಂದಿದೆ.

5. ಕಲಬುರಗಿ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ

ಕಲಬುರಗಿ ವಿಮಾನ ನಿಲ್ದಾಣಕ್ಕೆ ಇಂದು ಇಮೇಲ್ ಮೂಲಕ ಹುಸಿ ಬಾಂಬ್ ಬೆದರಿಕೆ ಬಂದಿದ್ದು, ಶೋಧ ಕಾರ್ಯ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಇಂದು ಬೆಳಿಗ್ಗೆ ಅನಾಮಧೇಯ ಇ-ಮೇಲ್ ಐಡಿಯಿಂದ ವಿಮಾನ ನಿಲ್ದಾಣದ ಆವರಣದಲ್ಲಿ ಬಾಂಬ್ ಇಡಲಾಗಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕರಿಗೆ ಇಮೇಲ್ ಬಂದಿತ್ತು. ಎಚ್ಚೆತ್ತುಕೊಂಡ ಸಿಬ್ಬಂದಿಗಳು ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಕೆಳಗೆ ಇಳಿಸಿದರು. ವಿಮಾನ ನಿಲ್ದಾಣದ ಸಿಬ್ಬಂದಿ ಮತ್ತು ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಆದರೆ ಶೋಧಕಾರ್ಯಾಚರಣೆ ವೇಳೆ ಯಾವುದೇ ಸ್ಫೋಟಕ ವಸ್ತುಗಳೂ ಲಭ್ಯವಾಗಿಲ್ಲ.

6. ಕಳಪೆ, ದೋಷಯುಕ್ತ ಹೆಲ್ಮೆಟ್ ವಿರುದ್ಧ ಸಂಚಾರಿ ಪೊಲೀಸರ ವಿಶೇಷ ಕಾರ್ಯಾಚರಣೆ

ದ್ವಿಚಕ್ರ ವಾಹನ ಸವಾರರ ಪೈಕಿ ಕಳಪೆ, ದೋಷಯುಕ್ತ ಮತ್ತು ಅರ್ಧ ಹೆಲ್ಮೆಟ್ ಧರಿಸುವವರ ಸಂಖ್ಯೆ ಹೆಚ್ಚಾಗಿದೆ. ಇಂಥವರ ವಿರುದ್ಧ ಕಾರ್ಯಾಚರಣೆ ನಡೆಸಿ ದಂಡ ವಿಧಿಸಲಾಗುವುದು ಎಂದು ಬೆಂಗಳೂರು ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರು ಹೆಲ್ಮೆಟ್‌ಗಳ ಮಹತ್ವದ ಬಗ್ಗೆ ಈಗಾಗಲೇ ಸಾಕಷ್ಟು ಜಾಗೃತಿ ಮೂಡಿಸಿದ್ದಾರೆ. ಆದಾಗ್ಯೂ, ಅನೇಕ ದ್ವಿಚಕ್ರ ವಾಹನ ಸವಾರರು ಅರ್ಧ ಹೆಲ್ಮೆಟ್, ಗಲ್ಲದ ಪಟ್ಟಿಗಳಿಲ್ಲದ ಹೆಲ್ಮೆಟ್ ಮತ್ತು ಪ್ರಮಾಣಿತವಲ್ಲದ ಹೆಲ್ಮೆಟ್ಗಳನ್ನು ಧರಿಸಿರುವುದು ಕಂಡುಬರುತ್ತದೆ. ಇದನ್ನು ತಡೆಗಟ್ಟುವ ಉದ್ದೇಶದಿಂದ ವಿಶೇಷ ಕಾರ್ಯಾಚರಣೆ ನಡೆಸಿ ಅಂಥವರಿಗೆ ದಂಡ ವಿಧಿಸಲಾಗುವುದು ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com