
ಬೆಂಗಳೂರು: ವಾಹನ ಸಂಚಾರ ವೇಳೆ ಸುರಕ್ಷತೆಗೆ ಉತ್ತೇಜನ ನೀಡಲು, ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್(The New Indian Express), ಹೀರೋ ಮೋಟೋಕಾರ್ಪ್(Hero MotoCorp) ಸಹಯೋಗದಲ್ಲಿ ಆಯೋಜಿಸಿರುವ “ರೈಡ್ ಸೇಫ್ ಇಂಡಿಯಾ” ಬೈಕ್ ರ್‍ಯಾಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈಜೋಡಿಸಿದ್ದಾರೆ.
ಅಭಿಯಾನ ಅಂಗವಾಗಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಬೆಂಗಳೂರು ಕಚೇರಿಯ ಪ್ರಧಾನ ವ್ಯವಸ್ಥಾಪಕ ಪಿ ಸುರೇಶ್ ಕುಮಾರ್ ಹಾಗೂ ಪತ್ರಕರ್ತರ ಬಳಗ ಸಿಎಂ ಅವರ ಕಚೇರಿಗೆ ತೆರಳಿ ಸೇಫ್ಟಿ ಕಿಟ್ ನ್ನು ನೀಡಿದರು. ಈ ವೇಳೆ ಮುಖ್ಯಮಂತ್ರಿಗಳು ತಮ್ಮ ಕಚೇರಿಯ ಸಿಬ್ಬಂದಿಗೆ ಹೆಲ್ಮೆಟ್ ನ್ನು ವಿತರಿಸಿದರು.
ರಸ್ತೆ ಸುರಕ್ಷತಾ ಅಭಿಯಾನದಡಿ ಹೆಲ್ಮೆಟ್ ವಿತರಿಸಿ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದರು. ಪ್ರತಿಯೊಬ್ಬರು ದ್ವಿಚಕ್ರ ವಾಹನ ಸವಾರಿ ಮಾಡುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ, ಸಂಚಾರಿ ನಿಯಮಗಳನ್ನು ಪಾಲಿಸಿ, ಜಾಗೃತೆಯಿಂದ ವಾಹನ ಓಡಿಸಿ. ಅರೆಕ್ಷಣದ ಅಜಾಗರೂಕತೆ ಬದುಕನ್ನೇ ಕಸಿಯುತ್ತದೆ. ಸುರಕ್ಷಿತೆಯೇ ನಿಮ್ಮ ಆದ್ಯತೆಯಾಗಲಿ ಎಂದು ಜನತೆಗೆ ಮನವಿ ಮಾಡಿಕೊಂಡರು.
ಬೈಕ್ ರ್ಯಾಲಿ: #RideSafeIndia ರ್‍ಯಾಲಿಯು ಕಳೆದ ಭಾನುವಾರ ರಾಜಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಅವರು ಬೈಕ್ ರ್ಯಾಲಿಗೆ ಚಾಲನೆ ನೀಡಿದ್ದರು. ರಾಜಭವನದಿಂದ ಆರಂಭವಾಗಿ ವಿಧಾನ ಸೌಧ, ಕೆ ಆರ್ ರಸ್ತೆ ಮೂಲಕ ಸಾಗಿ ಕಂಠೀರವ ಕ್ರೀಡಾಂಗಣ ಮೂಲಕ ಹಾದು ಕಸ್ತೂರ್ಬಾ ರಸ್ತೆ, ಎಂ ಜಿ ರಸ್ತೆ, ಕಬ್ಬನ್ ಪಾರ್ಕ್ ಮೂಲಕ ಕ್ವೀನ್ಸ್ ರಸ್ತೆಯ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಕಚೇರಿಯಲ್ಲಿ 5 ಕಿಲೋ ಮೀಟರ್ ಸಾಗಿ ಮುಕ್ತಾಯಗೊಂಡಿತು. ರ್‍ಯಾಲಿ ಉದ್ದಕ್ಕೂ ಸುಗಮ ಸಮನ್ವಯವನ್ನು ಬೆಂಗಳೂರು ನಗರ ಸಂಚಾರ ಪೊಲೀಸರು ನಿರ್ವಹಿಸಿದ್ದರು.
Advertisement