
ಬೆಂಗಳೂರು: ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಹಾಸನ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಬುಧವಾರ ವಜಾಗೊಳಿಸಿದೆ.
ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಕೋರಿ ಪ್ರಜ್ವಲ್ ರೇವಣ್ಣ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು, ಆದೇಶವನ್ನು ಕಾಯ್ದಿಸಿದ್ದರು. ಇಂದು ಜಾಮೀನು ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.
ವಿಶೇಷ ಕೋರ್ಟ್ ಜಾಮೀನು ಅರ್ಜಿ ವಜಾಗೊಳಿಸಿರುವುದರಿಂದ ಪ್ರಜ್ವಲ್ ರೇವಣ್ಣ ಈಗ ಹೈಕೋರ್ಟ್ ಮೊರೆ ಹೋಗುವುದು ಅನಿವಾರ್ಯವಾಗಿದೆ.
ನ್ಯಾಯಾಂಗ ಬಂಧನದಲ್ಲಿರುವ ಪ್ರಜ್ವಲ್ ರೇವಣ್ಣ ಅವರನ್ನು ಮೂರನೇ ಪ್ರಕರಣದಲ್ಲಿ ಇಂದು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದು, ಅವರನ್ನು ಹೊಳೆನರಸೀಪುರಕ್ಕೆ ಕರೆದೊಯ್ದು ಅವರ ತಂದೆ ಹಾಗೂ ಮಾಜಿ ಸಚಿವ ಎಚ್ ಡಿ ರೇವಣ್ಣ ಅವರ ನಿವಾಸದಲ್ಲಿ ಸ್ಥಳ ಮಹಜರು ಮಾಡಿದ್ದಾರೆ.
ಏಪ್ರಿಲ್ 28 ರಂದು ಪ್ರಜ್ವಲ್ ರೇವಣ್ಣ ವಿರುದ್ದ ಹೊಳೆನರಸೀಪುರದಲ್ಲಿ ಮೊದಲು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಇದಾದ ಬಳಿಕ ಅತ್ಯಾಚಾರ ಎಸಗಿದ ಪ್ರಕರಣವೂ ದಾಖಲಾಗಿದ್ದವು. ಒಂದು ತಿಂಗಳಿಗೂ ಅಧಿಕ ಕಾಲ ವಿದೇಶದಲ್ಲಿಯೇ ಇದ್ದ ಪ್ರಜ್ವಲ್ ರೇವಣ್ಣ ಆನಂತರ ವಿಶೇಷ ತನಿಖಾ ತಂಡದ ಎದುರು ಶರಣಾಗಿದ್ದರು.
Advertisement