file pic
(ಸಂಗ್ರಹ ಚಿತ್ರ)online desk

"DKS ಗೆ CM ಭಾಗ್ಯ ಕೊಡಿ"; ಸಿದ್ದರಾಮಯ್ಯಗೆ ಸ್ವಾಮೀಜಿ ಮನವಿ, ಮಳೆ: 3 ಮಕ್ಕಳ ರಕ್ಷಣೆ, Dengue ಹೆಚ್ಚಳ, BBMPಯಿಂದ ಮನೆ-ಮನೆ ಸಮೀಕ್ಷೆ: ಇವು ಇಂದಿನ ಪ್ರಮುಖ ಸುದ್ದಿಗಳು 27-06-2024

1. DKS ಗೆ CM ಭಾಗ್ಯ ಕೊಡಿ

ಸಿಎಂ ಬದಲಾವಣೆ ಕುರಿತಂತೆ ರಾಜ್ಯದಲ್ಲಿ ಆಗಾಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಬೆಂಬಲಿತ ಶಾಸಕರ ಹೇಳಿಕೆಗಳ ನಡುವೆ, ಇಂದು ಕೆಂಪೇಗೌಡ ಜಯಂತಿ ಕಾರ್ಯಕ್ರಮ ನಡೆಯುತ್ತಿದ್ದ ವೇದಿಕೆಯಲ್ಲಿ ಡಿಕೆ ಶಿವಕುಮಾರ್ ಗೆ ಸಿಎಂ ಸ್ಥಾನ ಬಿಟ್ಟುಕೊಡಿ ಎಂದು ಸಿಎಂ ಸಿದ್ದರಾಮಯ್ಯಗೆ ಸ್ವಾಮಿಜಿಯೊಬ್ಬರು ನೇರವಾಗೇ ಮನವಿ ಮಾಡಿದ್ದಾರೆ. ಕಂಠೀರವ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ, ರಾಜ್ಯದಲ್ಲಿ ಹಲವರು ಮುಖ್ಯಮಂತ್ರಿಗಳಾಗಿದ್ದಾರೆ. ಆದರೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮಾತ್ರ ಇನ್ನೂ ಆ ಭಾಗ್ಯ ಸಿಕ್ಕಿಲ್ಲ.

ಹಾಗಾಗಿ ಸಿಎಂ ಸಿದ್ದರಾಮಯ್ಯನವರೇ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡಿ, ಸಿದ್ದರಾಮಯ್ಯ ಮನಸ್ಸು ಮಾಡಿದರೆ ಮಾತ್ರ ಇದು ಸಾಧ್ಯ ಎಂದು ಮನವಿ ಮಾಡಿದರು. ಸ್ವಾಮೀಜಿ ಬೇಡಿಕೆ ಇಟ್ಟಿರುವುದು ಸಿದ್ದರಾಮಯ್ಯ ಅವರ ಇರಿಸು ಮುರುಸಿಗೂ ಕಾರಣವಾಯಿತು. ಸ್ವಾಮೀಜಿ ಬೇಡಿಕೆ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಸ್ವಾಮೀಜಿ ಹೇಳಲಿ, ಆದರೆ ಸಿಎಂ ಸ್ಥಾನದ ಬಗ್ಗೆ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಹೇಳಿದ್ದಾರೆ. ಇನ್ನು ಸ್ವಾಮೀಜಿ ಬೇಡಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ, ಸಚಿವ ರಾಜಣ್ಣ, ಸಿಎಂ ಸ್ಥಾನ ಯಾರು ಬಿಟ್ಟು ಕೊಡೋದಕ್ಕೆ ಹೋಗ್ತಾರೆ? ಆ ಸ್ವಾಮೀಜಿಗಳು ಅವರ ಸ್ಥಾನ ಬಿಟ್ಟುಕೊಡ್ತಾರಾ ಕೇಳಿ, ನಾನೇ ಸ್ವಾಮೀಜಿ ಆಗ್ತೇನೆ ಎಂದು ಹೇಳಿದ್ದಾರೆ.

2. ಮಳೆ: 3 ಮಕ್ಕಳ ರಕ್ಷಣೆ

ರಾಜ್ಯದಲ್ಲಿ ಮುಂಗಾರು ಚುರುಕಾಗುತ್ತಿದೆ. ಹಲವೆಡೆ ಧಾರಾಕಾರ ಮಳೆಯಾಗುತ್ತಿದ್ದು, ಭಾರಿ ಮಳೆಗೆ ವಿದ್ಯುತ್ ತಂತಿ ತುಂಡಾಗಿ ಬಿದ್ದು ವಿದ್ಯುತ್ ಪ್ರವಹಿಸಿ ಇಬ್ಬರು ಬಲಿಯಾದ ಘಟನೆ ಮಂಗಳೂರಿನ ಪಾಂಡೇಶ್ವರ ರೊಸಾರಿಯೋ ಚರ್ಚ್ ಬಳಿ ಇಂದು ಮುಂಜಾನೆ ನಡೆದಿದೆ. ಆಟೋ ಚಾಲಕರಾದ ರಾಜು ಮತ್ತು ದೇವರಾಜು ಮೃತ ವ್ಯಕ್ತಿಗಳಾಗಿದ್ದಾರೆ. ಆಟೋ ಸ್ವಚ್ಚ ಗೊಳಿಸಲು ರೂಂ ನಿಂದ ಹೊರಬಂದು ಆಟೋ ತೊಳೆಯುವ ವೇಳೆ ಮಳೆಗೆ ತುಂಡಾಗಿ ಬಿದ್ದಿದ್ದ ಬೀದಿ ದೀಪದ ವಿದ್ಯುತ್ ತಂತಿ ತಗುಲಿ ವಿದ್ಯುತ್ ಆಘಾತಕ್ಕೆ ಪ್ರಜ್ಞೆ ತಪ್ಪಿ ಬಿದ್ದರು. ಇದನ್ನು ಕಂಡ ಮತ್ತೊರ್ವ ಚಾಲಕ ಗೋಣಿ ಚೀಲ ಹಿಡಿದು ಆತನ ರಕ್ಷಣೆಗೆ ಮುಂದಾಗಿದ್ದಾರೆ, ಈ ಸಂದರ್ಭ ಅವರೂ ವಿದ್ಯುತ್ ಅಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮತ್ತೊಂದೆಡೆ, ಭೂಕುಸಿತ ಉಂಟಾಗಿ, ಮೂವರು ಮಕ್ಕಳನ್ನು ರಕ್ಷಿಸಲಾಗಿದೆ. ಪುತ್ತೂರು ಬನ್ನೂರಿನ ಜೈನರಗುರಿ ಬಳಿ ಮಜೀದ್ ಎಂಬುವವರ ಮನೆಯ ಮೇಲೆ ಮಣ್ಣು ಕುಸಿದ ಪರಿಣಾಮ ಮನೆ ಭಾಗಶಃ ಹಾನಿಗೊಳಗಾಗಿತ್ತು. ಮಣ್ಣಿನ ಅಡಿ ಸಿಲುಕಿದ್ದ ಮಕ್ಕಳನ್ನು ಹೊರ ಎಳೆದು ರಕ್ಷಣೆ ಮಾಡಲಾಗಿದೆ. ಈಮಧ್ಯೆ, ದಕ್ಷಿಣ ಕನ್ನಡದಲ್ಲಿ ಇಂದು ಮತ್ತು ನಾಳೆ ಕೂಡ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿಗಳು, ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದಾರೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಬ್ರಹ್ಮಗಿರಿ ತಪ್ಪಲಿನಲ್ಲಿ ಮಳೆ ತೀವ್ರಗೊಂಡ ಹಿನ್ನೆಲೆಯಲ್ಲಿ ಪವಿತ್ರ ಕ್ಷೇತ್ರ ಭಾಗಮಂಡಲದ‌ ತ್ರಿವೇಣಿ ಸಂಗಮ ಭರ್ತಿಯಾಗಿದೆ.

3. ಪೋಕ್ಸೋ ಪ್ರಕರಣ BSY ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಸಿಐಡಿ ಪೊಲೀಸರು ಇಂದು ನ್ಯಾಯಾಲಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ತನ್ನ ಮಗಳ ಮೇಲೆ ಯಡಿಯೂರಪ್ಪ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಸಂತ್ರಸ್ತ ಬಾಲಕಿ ತಾಯಿ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ವಹಿಸಿತ್ತು.

4. Dengue ಹೆಚ್ಚಳ, BBMPಯಿಂದ ಮನೆ-ಮನೆ ಸಮೀಕ್ಷೆ

ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸೋಂಕಿತರ ಪತ್ತೆ ಮಾಡಲು, ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಜೂನ್ 28 ರಿಂದ ಮನೆ-ಮನೆ ಸಮೀಕ್ಷೆ ನಡೆಸಲು ಬಿಬಿಎಂಪಿ ಮುಂದಾಗಿದೆ, ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿನ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ಲಾರ್ವಾ ಇರುವ ತಾಣಗಳನ್ನು ಗುರುತಿಸುವುದು, ನಾಗರಿಕರಲ್ಲಿ ಅರಿವು ಮೂಡಿಸುವುದು ಹಾಗೂ ಯಾರಿಗಾದರು ಜ್ವರ ಬಂದಿದ್ದಲ್ಲಿ ಅಂತಹವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಲು ತಿಳಿಸುವುದು ಸೇರಿದಂತೆ ಸಮಗ್ರವಾಗಿ ಮನೆ-ಮನೆ ಸಮೀಕ್ಷೆ ನಡೆಸಿ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com