
ಹಾಸನ: ಇತ್ತೀಚೆಗೆ ಪಟ್ಲ ಬೆಟ್ಟಕ್ಕೆ ಸ್ವಂತ ವಾಹನದಲ್ಲಿ ಭೇಟಿ ನೀಡಲು ಬಂದಿದ್ದ ಪ್ರವಾಸಿಗರ ಮೇಲೆ ಸ್ಥಳೀಯ ಪಿಕಪ್ ಮತ್ತು ಡ್ರಾಪ್ ವಾಹನಗಳ ಚಾಲಕರು ದಾಳಿ ನಡೆಸಿದ ಬಗ್ಗೆ ಮತ್ತು ಬೆಟ್ಟಕ್ಕೆ ಅನಧಿಕೃತವಾಗಿ ರಸ್ತೆ ನಿರ್ಮಿಸಿದ ಕುರಿತು ವಿವರವಾದ ವರದಿ ನೀಡುವಂತೆ ಅರಣ್ಯ ಸಚಿವ ಈಶ್ವರ್ ಬಿ ಖಂಡ್ರೆ ಅವರು ಹಾಸನ ಅರಣ್ಯ ಉಪ ಸಂರಕ್ಷಣಾಧಿಕಾರಿಗೆ ಸೂಚನೆ ನೀಡಿದ್ದಾರೆ.
ಬೆಟ್ಟದ ತುದಿಗೆ ರಸ್ತೆ ನಿರ್ಮಿಸಲು ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಲಾಗಿದೆಯೇ ಅಥವಾ ಇಲ್ಲವೇ ಮತ್ತು ರಸ್ತೆಗಾಗಿ ಅಕ್ರಮವಾಗಿ ಮರಗಳನ್ನು ಕಡಿಯಲಾಗಿದೆಯೇ ಎಂಬ ಬಗ್ಗೆ ವಿವರವಾದ ವರದಿ ನೀಡುವಂತೆ ಅರಣ್ಯ ಸಚಿವರು ಉಪ ಅರಣ್ಯ ಸಂರಕ್ಷಣಾಧಿಕಾರಿ[ಡಿಎಫ್‌ಒ] ಸೌರಬ್ ಕುಮಾರ್ ಅವರಿಗೆ ಸೂಚಿಸಿದ್ದಾರೆ.
ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಮೂರು ದಿನಗಳೊಳಗೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ವರದಿ ಕಳುಹಿಸುವಂತೆ ಡಿಎಫ್‌ಒಗೆ ಸಚಿವರು ಸೂಚಿಸಿದ್ದಾರೆ.
ಜೂನ್ 23 ರಂದು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಆಕರ್ಷಕ ಪ್ರವಾಸಿ ತಾಣಗಳಲ್ಲಿ ಒಂದಾದ ಪಟ್ಲ ಬೆಟ್ಟದಿಂದ ಹಿಂದಿರುಗುತ್ತಿದ್ದ ಪ್ರವಾಸಿಗರ ಮೇಲೆ ಚಾಲಕರ ಗುಂಪು ಹಲ್ಲೆ ನಡೆಸಿತ್ತು. ಜೀಪ್ ಚಾಲಕರ ಗುಂಪು, ಪ್ರವಾಸಿಗರಿಗೆ ಬೈಕ್‌ಗಳಲ್ಲಿ ಹೋಗಬೇಡಿ ಎಂದಿದ್ದಾರೆ. ಬೆಟ್ಟಕ್ಕೆ ತೆರಳಬೇಕಾದರೆ ಬಾಡಿಗೆ ಜೀಪಿನಲ್ಲೇ ಹೋಗಬೇಕು. ಬೇರೆ ವಾಹನಗಳನ್ನು ಬಿಡುವುದಿಲ್ಲ ಎಂದು ಬೈಕ್ ಸವಾರರ ಜೊತೆ ಮಾತಿನ ಚಕಮಕಿ ನಡೆಸಿದ್ದರು.
ಈ ವೇಳೆ ಕೆಲವರು ಏಕಾಏಕಿ ಬೈಕ್ ಸವಾರ ದಕ್ಷಿಣ ಕನ್ನಡ ಜಿಲ್ಲೆಯ ಥೋಕ್ಕೊಟ್ಲು ಗ್ರಾಮದ ಭುವಿತ್ ಪೂಜಾರಿ ಎಂಬುವವರ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆ ನಡೆಸಿದ ಘಟನೆಯು ಭುವಿತ್ ಪೂಜಾರಿಯವರು ಹೆಲ್ಮೆಟ್‌ನಲ್ಲಿ ಧರಿಸಿದ್ದ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲೂ ಕೂಡ ವೈರಲಾಗಿತ್ತು.
Advertisement