
ಹಾವೇರಿ: ರಾಜ್ಯದಲ್ಲಿ ಈಡಿಗ ಸಮುದಾಯ ತನ್ನದೇ ರಾಜಕೀಯ ಪ್ರಾಬಲ್ಯ ಹೊಂದಿದೆ. ಸಿಎಂ ಸ್ಥಾನ ಬದಲಾವಣೆ ಮಾಡುವುದಾದರೆ ಬಿಕೆ ಹರಿಪ್ರಸಾದ್ ಅವರನ್ನೇ ಸಿಎಂ ಅಥವಾ ಡಿಸಿಎಂ ಎಂದು ಘೋಷಿಸುವಂತೆ ಪ್ರಣವಾನಂದಶ್ರೀ ಒತ್ತಾಯಿಸಿದರು.
ಇಂದು ಯಾದಗಿರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಗಳು, ಬಿಕೆ ಹರಿಪ್ರಸಾದ ಅವರ ಹಿಂದೆ ಇಡೀ ಹಿಂದುಳಿದ ಸಮಾಜವಿದೆ. ಹರಿಪ್ರಸಾದ್ ಅವರ ಪರವಾಗಿ ಗಟ್ಟಿ ಧ್ವನಿಯಲ್ಲಿ ಹೇಳುತ್ತಿದ್ದೇನೆ ಸಿಎಂ ಡಿಸಿಎಂ ಸ್ಥಾನ ಬದಲಾದರೆ ಬಿಕೆ ಹರಿಪ್ರಸಾದ್ ಅವರಿಗೆ ಸಿಎಂ ಅಥವಾ ಡಿಸಿಎಂ ಸ್ಥಾನ ನೀಡಬೇಕು. ಅಲ್ಲದೇ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಮಾಡುವುದಾದ್ರೂ ಹರಿಪ್ರಸಾದ್ ಅವರಿಗೆ ನೀಡಬೇಕು ಎಂದು ಒತ್ತಾಯಿಸಿದರು.
49 ವರ್ಷ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿದಿದ್ದಾರೆ. ಇಂದಿರಾ ಗಾಂಧಿಯಿಂದ ಹಿಡಿದು ಪ್ರಸ್ತುತ ಪ್ರಿಯಾಂಕಾ ಗಾಂಧಿವರೆಗೆ ಪಕ್ಷಕ್ಕಾಗಿ ಕೆಲಸ ಮಾಡಿದವರು ಎಂದು ಹೇಳಿದರು. ಕಾಂಗ್ರೆಸ್ ಸರ್ಕಾರದಲ್ಲಿ ಈಡಿಗ ಸಮಾಜಕ್ಕೆ ಒಂದೇ ಒಂದು ಸಚಿವ ಸ್ಥಾನ ನೀಡಿದ್ದಾರೆ. ಆದರೆ, ಬಿಜೆಪಿ ಸರ್ಕಾರವಿದ್ದಾಗ ಇಬ್ಬರಿಗೆ ಸಚಿವ ಸ್ಥಾನ, ಮೂವರಿಗೆ ನಿಗಮ ಮಂಡಳಿ ಸ್ಥಾನ ನೀಡಿದ್ದರು ಎಂದರು.
ಕಾಂಗ್ರೆಸ್ ಹೈಕಮಾಂಡ್ ಅಧಿಕಾರ ನೀಡುವಾಗ ಏನು ಹೊಂದಾಣಿಕೆ ಮಾಡಿಕೊಂಡಿತ್ತೋ ಅದರಂತೆ ಬದಲಾವಣೆ ಮಾಡುವುದಾದರೆ ಈಡಿಗ ಸಮಾಜದ ನಾಯಕ ಬಿ.ಕೆ.ಹರಿಪ್ರಸಾದ್‌ಗೆ ಸಿಎಂ ಸ್ಥಾನ ನೀಡಬೇಕು. ಕೊನೆ ಪಕ್ಷ ಡಿಸಿಎಂ ಹುದ್ದೆಯನ್ನಾದರೂ ನೀಡಲಿ. ರಾಜ್ಯ ಸರ್ಕಾರ ರಚನೆಯಾಗುವಾಗ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಹರಿಪ್ರಸಾದ್ ಅವರನ್ನು ನೇಮಕ ಮಾಡುವಂತೆ ಹೇಳಿದ್ದರು. ಆದರೆ, ಅವರ ಮಾತನ್ನು ಗಾಳಿಗೆ ತೂರಿ ಸಚಿವ ಸ್ಥಾನವನ್ನೂ ನೀಡದಂತೆ ಅಪಮಾನ ಮಾಡಲಾಗಿದೆ ಎಂದು ದೂರಿದರು.
ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಸಿಎಂ ಬದಲಾವಣೆ ಗಾಳಿ ಜೋರಾಗಿ ಬಿಸುತ್ತಿದೆ. ಸಿಎಂ ಬದಲಾವಣೆಯ ಮಾಡಬೇಕೋ ಬೇಡವೋ ಹೈಕಮಾಂಡ್ ಚರ್ಚೆಯಲ್ಲಿದೆ. ಒಂದು ವೇಳೆ ಸಿಎಂ ಬದಲಾವಣೆ ಮಾಡಿದ್ರೆ ಮುಂದಿನ ಸಿಎಂ ಯಾರು ಎಂಬ ಪ್ರಶ್ನೆ ಎದುರಾಗಿದೆ. ಲಿಂಗಾಯತರೇ ಸಿಎಂ ಆಗಬೇಕು ಎಂಬ ಕೂಗು ಎದ್ದಿದೆ. ಇತ್ತ ದಲಿತರಿಗೆ ಪ್ರಾತಿನಿಧ್ಯ ನೀಡಬೇಕು. ದಲಿತರಿಗೆ ಸಿಎಂ ಅವಕಾಶ ನೀಡಬೇಕು ಎಂಬ ಒತ್ತಾಯವೂ ಕೇಳಿಬಂದಿದೆ. ಮುಂದಿನ ಸಿಎಂ ಬಗ್ಗೆ ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
Advertisement