ಕೆಫೆ ಬಾಂಬ್ ಸ್ಫೋಟ ಪ್ರಕರಣ: ಅಖಾಡಕ್ಕೆ NIA. ಪಬ್ಲಿಕ್ ಪರೀಕ್ಷೆ ರದ್ದುಗೊಳಿಸಿದ ಹೈಕೋರ್ಟ್. ಮಂಡ್ಯ ಕಾಂಗ್ರೆಸ್‌ನಲ್ಲಿ ಭಿನ್ನಮತ - ಈ ದಿನದ ಸುದ್ದಿ ಮುಖ್ಯಾಂಶಗಳು: 06-03-2024

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
1.

ಕೆಫೆ ಬಾಂಬ್ ಸ್ಫೋಟ ಪ್ರಕರಣ: ಅಖಾಡಕ್ಕೆ ಎನ್ಐಎ. ಪಬ್ಲಿಕ್ ಪರೀಕ್ಷೆ ರದ್ದುಗೊಳಿಸಿದ ಹೈಕೋರ್ಟ್

ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ವಿಚಾರಣೆಯನ್ನು ತೀವ್ರಗೊಳಿಸಿರುವ ಎನ್ಐಎ ಬಾಂಬರ್ ಫೋಟೋ ಬಿಡುಗಡೆ ಮಾಡಿದ್ದು ಸುಳಿವು ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ. ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ತನಿಖೆಯನ್ನು NIA ಅಧಿಕಾರಿಗಳು ಅಧಿಕೃತವಾಗಿ ಕೈಗೆತ್ತಿಕೊಂಡಿದ್ದು, ನಿನ್ನೆ ಕೆಫೆಗೆ ಭೇಟಿ ನೀಡಿ ಸ್ಥಳ ಮಹಜರು ನಡೆಸಿದ್ದರು. ಕ್ಯಾಶ್ ಕೌಂಟರ್, ಸಿಸಿಕ್ಯಾಮರಾ ಪರಿಶೀಲನೆ ನಡೆಸಿ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಇನ್ನು ಪೊಲೀಸರು ಸಹ ಸ್ಥಳದಲ್ಲಿ ಕಲೆ ಹಾಕಿರುವ 38 ಸ್ಯಾಂಪಲ್‌ಗಳ ಮಾಹಿತಿಯನ್ನು NIA ಅಧಿಕಾರಿಗಳಿಗೆ ನೀಡಿದ್ದಾರೆ. ಇನ್ನು ಸಿಸಿಬಿ ತನಿಖೆ ವೇಳೆ ಬಾಂಬರ್ ಮಾಸ್ಕ್ ಹಾಕಿಕೊಳ್ಳದ ಫೋಟೋ ಪತ್ತೆಯಾಗಿತ್ತು. ಇದೀಗ ಆ ಫೋಟೋವನ್ನು ಎನ್​ಐಎ ಬಿಡುಗಡೆ ಮಾಡಿದ್ದು ಆರೋಪಿ ಬಗ್ಗೆ ತಿಳಿದರೆ ಕೂಡಲೇ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಕೆಫೆ ಸ್ಫೋಟ ಪ್ರಕರಣದಲ್ಲಿ ಮಹತ್ವದ ಸುಳಿವು ಸಿಕ್ಕಿದ್ದು, ಶೀಘ್ರದಲ್ಲೇ ಪೊಲೀಸರು ಪ್ರಕರಣವನ್ನು ಭೇದಿಸಲಿದ್ದಾರೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.

ಪಬ್ಲಿಕ್ ಪರೀಕ್ಷೆ ರದ್ದುಗೊಳಿಸಿದ ಹೈಕೋರ್ಟ್

ರಾಜ್ಯ ಸರ್ಕಾರ 5,8,9 ಮತ್ತು 11ನೇ ತರಗತಿಗಳಿಗೆ ನಡೆಸಲು ಉದ್ದೇಶಿಸಿದ್ದ ಪಬ್ಲಿಕ್‌ ಪರೀಕ್ಷೆಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಸರ್ಕಾರ ಜಂಟಿಯಾಗಿ ಹೊರಡಿಸಿದ್ದ ಬೋರ್ಡ್‌ ಎಕ್ಸಾಂ ಸುತ್ತೋಲೆಯನ್ನು ರದ್ದು ಮಾಡಿ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ನೀಡಿದೆ. ಹೀಗಾಗಿ ಈ ಬಾರಿ ಈ ತರಗತಿಗಳಿಗೆ ಬೋರ್ಡ್‌ ಎಕ್ಸಾಂ ಇರುವುದಿಲ್ಲ. ಸ್ಟೇಟ್ ಬೋರ್ಡ್ ಶಾಲೆಗಳ 5, 8, 9 ಹಾಗೂ 11ನೇ ತರಗತಿಗಳ ವಿದ್ಯಾರ್ಥಿಗಳಿಗೆ ಶಾಲಾ ಮಟ್ಟದ ಮೌಲ್ಯಮಾಪನದ ಬದಲಾಗಿ ರಾಜ್ಯ ಮಟ್ಟದ ಮಂಡಳಿ (ಬೋರ್ಡ್) ಪರೀಕ್ಷೆ ನಡೆಸಲು ತೀರ್ಮಾನಿಸಿ ರಾಜ್ಯ ಸರ್ಕಾರ ಈ ಹಿಂದೆ ಸುತ್ತೋಲೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಅನುದಾನರಹಿತ ಖಾಸಗಿ ಶಾಲೆಗಳ ಒಕ್ಕೂಟ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ಹೊಸಮನಿ ಅವರಿದ್ದ ನ್ಯಾಯಪೀಠ ಈ ತೀರ್ಪು ಪ್ರಕಟಿಸಿದೆ.

2.

10 ದಿನ ಎಸ್ಕಾಂಗಳ ಆನ್‌ಲೈನ್ ಸೇವೆ ಸ್ಥಗಿತ

ಇಂಧನ ಇಲಾಖೆಯ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಉನ್ನತೀಕರಣದ ಕಾರಣ ಮಾರ್ಚ್ 10 ರಿಂದ 19ರವರೆಗೆ ಹತ್ತು ದಿನಗಳ ಕಾಲ ರಾಜ್ಯದ ಎಲ್ಲಾ ಎಸ್ಕಾಂಗಳ ಆನ್‌ಲೈನ್ ಸೇವೆಗಳು ನಗರ ಪುದೇಶದ ಗ್ರಾಹಕರಿಗೆ ಸಿಗುವುದಿಲ್ಲ. ರಾಜ್ಯದ ಎಲ್ಲಾ ಎಸ್ಕಾಂಗಳ ವ್ಯಾಪ್ತಿಯಲ್ಲಿ ಒಟ್ಟು ಹತ್ತು ದಿನಗಳ ಕಾಲ ವಿದ್ಯುತ್ ಬಿಲ್‌ ಪಾವತಿ, ಹೊಸ ಸಂಪರ್ಕಕ್ಕಾಗಿ ಆನ್‌ಲೈನ್ ಅರ್ಜಿ ಸಲ್ಲಿಕೆ, ಹೆಸರು ಮತ್ತು ಜಕಾತಿ ಬದಲಾವಣೆ ಸೇರಿದಂತೆ ಯಾವುದೇ ಆನ್ ಲೈನ್ ಸೇವೆಗಳು ಈ ಅವಧಿಯಲ್ಲಿ ಲಭ್ಯವಿರುವುದಿಲ್ಲ. ಆನ್ಲೈನ್ ಸೇವೆಗಳು ಮಾತ್ರವೇ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುತ್ತವೆಯೇ ಹೊರತು ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಬದಲಾವಣೆ ಆಗಲಿ, ಕಡಿತವಾಗಲಿ ಮಾಡುವುದಿಲ್ಲ ಎಂದು ತಿಳಿಸಿದೆ.

2024-25ನೇ ಸಾಲಿನ ಪಠ್ಯಪುಸ್ತಕವನ್ನು ಪರಿಷ್ಕರಣೆ

ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಕೊನೆಗೂ ಸದ್ದಿಲ್ಲದೇ 2024-25ನೇ ಸಾಲಿನ ಪಠ್ಯಪುಸ್ತಕವನ್ನು ಪರಿಷ್ಕರಿಸಿದೆ. ಡಾ ಮಂಜುನಾಥ್ ಹೆಗಡೆ ನೇತೃತ್ವದ ಸಮಿತಿ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿದ ಶಾಲಾ ಶಿಕ್ಷಣ ಇಲಾಖೆ ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿದೆ. 7ನೇ ತರಗತಿ ಪಠ್ಯದಲ್ಲಿ ವಿಶ್ವಗುರು ಬಸವೇಶ್ವರರನ್ನು ಸಾಂಸ್ಕೃತಿಕ ನಾಯಕ ಎಂದು ದಾಖಲಿಸಲಾಗಿದೆ. 8ನೇ ತರಗತಿ ಪಠ್ಯದಲ್ಲಿ ಸನಾತನ ಧರ್ಮ ಎಂಬ ಅಧ್ಯಾಯದಲ್ಲಿ ಕೆಲವು ಅಂಶಗಳನ್ನು ಸೇರಿಸಿ ವ್ಯವಸ್ಥಿತವಾಗಿ ನಿರೂಪಣೆ ಮಾಡಿದೆ. 9ನೇ ತರಗತಿ ಪಠ್ಯದಲ್ಲಿ ಭಕ್ತಿಪಂಥ ಅಧ್ಯಾಯದಲ್ಲಿ ಕನಕದಾಸರು, ಪುರಂದರದಾಸರು, ಸಂತ ಶಿಶುನಾಳ ಶರೀಫರ ಮಾಹಿತಿ ಸೇರ್ಪಡೆ ಮಾಡಲಾಗಿದೆ. 9-10ನೇ ತರಗತಿ ಪಠ್ಯದಲ್ಲಿ ಕೈ ಬಿಟ್ಟಿದ್ದ ನಾಗೇಶ್‌ ಹೆಗಡೆ, ಪಿ.ಲಂಕೇಶ್‌, ಶ್ರೀನಿವಾಸ ಉಡುಪ ಅವರ ಕವನ ಹೊಸದಾಗಿ ಸೇರ್ಪಡೆ ಮಾಡಲಾಗಿದೆ. ಇನ್ನುಳಿದಂತೆ ಕಂಬಾರರ-ಸೀಮೆ, ಕಾರ್ನಾಡ್‌ ರ- ಅಧಿಕಾರ, ದೇವನೂರು ಮಹಾದೇವರ- ಎದೆಗೆ ಬಿದ್ದ ಅಕ್ಷರ, ಅಕ್ಕಮಹಾದೇವಿಯ ವಚನಗಳನ್ನು ಸೇರ್ಪಡೆ ಮಾಡಲಾಗಿದೆ.

3.

ಮಂಡ್ಯ ಕಾಂಗ್ರೆಸ್‌ನಲ್ಲಿ ಭಿನ್ನಮತ

ಲೋಕಸಭಾ ಚುನಾವಣೆ ಹೊತ್ತಲ್ಲಿ ಮಂಡ್ಯ ಕಾಂಗ್ರೆಸ್‌ನಲ್ಲಿ ಭಿನ್ನಮತ ಭುಗಿಲೆದ್ದಿದೆ. ಉದ್ಯಮಿ ಸ್ಟಾರ್‌ ಚಂದ್ರು ಅವರಿಗೆ ಟಿಕೆಟ್‌ ಕೊಡಲು ಮುಂದಾಗಿರುವ ಕಾಂಗ್ರೆಸ್‌ ನಾಯಕರ ವಿರುದ್ಧ ಸ್ಥಳೀಯ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಸ್ಥಳೀಯ ಕಾಂಗ್ರೆಸ್‌ ಮುಖಂಡ ಡಾ. ಎಚ್‌ ಎನ್‌ ರವೀಂದ್ರ ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನನ್ನ ಮೇಲೆ ನಂಬಿಕೆ ಇಟ್ಟು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಲಾಗಿತ್ತು. ಆದರೆ ಇದೀಗ ವಾತವರಣ ಕಲುಷಿತವಾಗಿದೆ. ಹೀಗಾಗಿ ಕೆಪಿಸಿಸಿ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದೇನೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com