
ಮಂಗಳೂರು: ಶಂಕಿತ ನಕ್ಸಲರ ಚಲನವಲನದ ವರದಿಗಳ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ-ಕೊಡಗು ಗಡಿ ಪ್ರದೇಶಗಳಲ್ಲಿ ನಕ್ಸಲ್ ನಿಗ್ರಹ ಪಡೆ(ಎಎನ್‌ಎಫ್) ಸಿಬ್ಬಂದಿ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದೆ.
ಮಡಿಕೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಸುಬ್ರಹ್ಮಣ್ಯ ಸಮೀಪದ ಕೂಜಮಲೈ ರಬ್ಬರ್ ಎಸ್ಟೇಟ್ ಬಳಿಯ ಅಂಗಡಿಯೊಂದರಲ್ಲಿ ಶನಿವಾರ ಸಂಜೆ 8 ಮಂದಿ ಶಂಕಿತ ನಕ್ಸಲರ ತಂಡ, ಶಸ್ತ್ರಾಸ್ತ್ರಗಳೊಂದಿಗೆ ದಿನಸಿ ವಸ್ತುಗಳನ್ನು ಖರೀದಿಸಿದ ವರದಿಗಳಿವೆ. ಕೂಜಮಲೈ ರಬ್ಬರ್ ಎಸ್ಟೇಟ್ ಸುಳ್ಯ ತಾಲೂಕಿನ ಗುತ್ತಿಗಾರ್, ಕೊಲ್ಲಮೊಗ್ರು ಮತ್ತು ಕಲ್ಮಕಾರುಗಳಲ್ಲಿ ಹರಡಿಕೊಂಡಿದೆ.
ಸೋಮವಾರ ಬೆಳಗ್ಗೆ ಕೂಂಬಿಂಗ್ ಕಾರ್ಯಾಚರಣೆ ಆರಂಭವಾಗಿದೆ ಎಂದು ಸುಬ್ರಹ್ಮಣ್ಯ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
“ನಾವು ಕೊಡಗಿನ ಗಡಿಯನ್ನು ಹಂಚಿಕೊಳ್ಳುವ ಹಳ್ಳಿಗಳ ಹಾದಿಯಲ್ಲಿದ್ದೇವೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಂಪಾಜೆ ಬಳಿಯ ಪ್ರದೇಶಗಳಲ್ಲಿ ನಕ್ಸಲ್ ನಿಗ್ರಹ ಪಡೆ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದಾರೆ. ನಾವು ಅಂಗಡಿ ಮಾಲೀಕರನ್ನು ವಿಚಾರಿಸಿದೆವು. ಅವರು ಶಂಕಿತ ನಕ್ಸಲರೇ ಎಂಬುದು ಖಚಿತವಾಗಿಲ್ಲ. ಅವರು(ಶಂಕಿತ ನಕ್ಸಲರು) ಹಿಂದಿಯಲ್ಲಿ ಸಂಭಾಷಣೆ ನಡೆಸುತ್ತಿದ್ದರು ಎಂದು ಅಂಗಡಿಯವರು ಹೇಳಿದ್ದಾರೆ" ಎಂದು ಅಧಿಕಾರಿ ತಿಳಿಸಿದ್ದಾರೆ.
"ಶಂಕಿತ ನಕ್ಸಲರ ಬಗ್ಗೆ ವದಂತಿಗಳು ಇವೆ. ಆದರೆ ಇನ್ನೂ ಖಚಿತವಾಗಿಲ್ಲ. ಈಗಾಗಲೇ ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ. ವಾಸ್ತವವಾಗಿ ಈ ಟ್ರೈ-ಜಂಕ್ಷನ್ ಪ್ರದೇಶಗಳಲ್ಲಿ ನಾವು ಐದು ಶಿಬಿರಗಳನ್ನು ಹೊಂದಿದ್ದೇವೆ ಮತ್ತು ನಾವು ಕೂಂಬಿಂಗ್ ಅನ್ನು ನಿಯಮಿತವಾಗಿ ಮಾಡುತ್ತಿದ್ದೇವೆ. ಪ್ರತಿನಿತ್ಯ ಶಂಕಿತರ ಚಲನವಲನ ನಡೆದಿದೆ ಎಂದು ಹೇಳುತ್ತಿರುವ ಈ ಸ್ಥಳ ನಮ್ಮ ಭಾಗಮಂಡಲ ಕ್ಯಾಂಪ್ ವ್ಯಾಪ್ತಿಯಲ್ಲಿ ಬರುತ್ತದೆ. ಕೆಲವು ದಿನಸಿ ವಸ್ತುಗಳನ್ನು ಅಂಗಡಿಯಿಂದ ಖರೀದಿಸಲಾಗಿದೆ ಎಂಬ ಖಚಿತ ಮಾಹಿತಿ ಇದೆ. ಈ ರೀತಿಯ ಮಾಹಿತಿ ನಮಗೆ ದಿನನಿತ್ಯ ಸಿಗುತ್ತಿದೆ. ಇದುವರೆಗೆ ಅವು ಕೇವಲ ವದಂತಿಗಳಾಗಿದ್ದವು. ಈ ಮಾಹಿತಿಯೂ ಬಂದಿದೆ ಮತ್ತು ನಾವು ಇಂದು ಅದನ್ನು ಪರಿಶೀಲಿಸುತ್ತಿದ್ದೇವೆ ಎಂದು ಎಎನ್ ಎಫ್ ಎಸ್ಪಿ ಜಿತ್ನೇದ್ರ ದಯಾಮ ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಮಾಹಿತಿ ನೀಡಿದ್ದಾರೆ.
Advertisement