ಮಂಡ್ಯ ಸ್ಪರ್ಧೆ ಬಗ್ಗೆ ಎರಡು ದಿನಗಳಲ್ಲಿ ನಿರ್ಧಾರ, ಡಾಕ್ಟ್ರು ಸಾಯಿಬಾಬಾನಿಗೆ ಪೂಜೆ ಸಲ್ಲಿಸಿ ಬಂದು ಆಪರೇಷನ್ ಮಾಡಿದರು: ಹೆಚ್ ಡಿ ಕುಮಾರಸ್ವಾಮಿ

ಸಿದ್ದರಾಮಯ್ಯನವರು ಸುಪ್ರೀಂ ಕೋರ್ಟ್ ಮೊರೆಹೋಗಿದ್ದು ರಾಜಕೀಯ ಸ್ಟಂಟ್ ಅಷ್ಟೆ, ಸ್ಟಂಟ್ ಬಿಟ್ಟು ಕೆಲಸ ಮಾಡಲಿ ಎಂದ ಮಾಜಿ ಸಿಎಂ ಕುಮಾರಸ್ವಾಮಿ
ಹೆಚ್ ಡಿ ಕುಮಾರಸ್ವಾಮಿ
ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು: ಬಿಜೆಪಿ-ಜೆಡಿಎಸ್ ಮೈತ್ರಿಯಡಿ ಸೀಟು ಹಂಚಿಕೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ಪಾಲಾಗಿದ್ದು, ತಾವು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಇನ್ನೆರಡು ದಿನಗಳಲ್ಲಿ ತೀರ್ಮಾನ ಮಾಡುವುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಚೆನ್ನೈಯಲ್ಲಿ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಹೆಚ್ ಡಿ ಕುಮಾರಸ್ವಾಮಿಯವರು ಇಂದು ಬೆಳಗ್ಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಈ ಸಂದರ್ಭದಲ್ಲಿ ಹೆಚ್ ಎಎಲ್ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಂಡ್ಯ ಲೋಕಸಭೆ ಸ್ಥಾನಕ್ಕೆ ಸ್ಪರ್ಧಿಸುವ ಬಗ್ಗೆ ಇನ್ನೆರಡು ದಿನಗಳಲ್ಲಿ ತೀರ್ಮಾನ ಮಾಡುತ್ತೇನೆ ಎಂದರು.

ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿರುವ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಕುಮಾರಸ್ವಾಮಿ, ಅದೆಲ್ಲ ರಾಜಕೀಯ ಸ್ಟಂಟ್ ಅಷ್ಟೆ, ಸುಪ್ರೀಂ ಕೋರ್ಟ್ ಗೆ ಮೊರೆ ಹೋಗಿರುವುದು, ನಮ್ಮ ಹಣ, ನಮ್ಮ ಜನರ ತೆರಿಗೆ ನಮ್ಮ ಹಕ್ಕು ಎಂಬ ಡ್ರಾಮಾಗಳನ್ನೆಲ್ಲ ಬಿಟ್ಟು ಸರ್ಕಾರ ಜನಪರ ಕೆಲಸ ಮಾಡಬೇಕು ಎಂಬುದು ನನ್ನ ಅಭಿಪ್ರಾಯ ಎಂದರು.

ಸಾಯಿಬಾಬನಿಗೆ ಪ್ರಾರ್ಥನೆ ಮಾಡಿ ಬಂದು ನನಗೆ ಆಪರೇಷನ್: ಇಂದು ವೈದ್ಯಕೀಯ ತಾಂತ್ರಿಕ ಲೋಕದಲ್ಲಿ ಹಲವಾರು ರೀತಿಯ ಪ್ರಗತಿಗಳಾಗಿವೆ. ವೈದ್ಯಕೀಯ ರಂಗದಲ್ಲಿ ಆಧುನಿಕ ಉಪಕರಣಗಳು ಬಂದಿವೆ. ತುರ್ತು ಪ್ರಾಣಾಪಾಯ ಸಂದರ್ಭದಲ್ಲಿ ಮನುಷ್ಯನಿಗೆ ಜೀವಕೊಟ್ಟ ಉದಾಹರಣೆಗಳಿವೆ.

ಹೆಚ್ ಡಿ ಕುಮಾರಸ್ವಾಮಿ
‘ಸುಮಲತಾ ನನ್ನ ಅಕ್ಕ ಇದ್ದಂತೆ; ಮಂಡ್ಯ ಕಳೆದುಕೊಂಡರೆ ನಾವು ಬದುಕಿದ್ದೂ ಸತ್ತಂತೆ': ಸಂಸದೆ ವಿರುದ್ಧ ಕದನ ವಿರಾಮ ಘೋಷಣೆ!

ನನ್ನ ಶಸ್ತ್ರಕ್ರಿಯೆ ದಿನ ನಾಡಿನಾದ್ಯಂತ ನನ್ನ ಅಭಿಮಾನಿಗಳು, ಹಿತೈಷಿಗಳು ದೇವರಿಗೆ ಪ್ರಾರ್ಥನೆ ಸಲ್ಲಿಸಿದರು. ದೇವರ ಅನುಗ್ರಹ, ಪ್ರಾರ್ಥನೆ ಫಲ ಕೊಟ್ಟಿದೆ. ಆಪರೇಷನ್ ಆದ ನಂತರ ವೈದ್ಯರು ಸುದೀರ್ಘವಾಗಿ ಎಲ್ಲ ವಿಷಯ ನನ್ನ ಜೊತೆ ಚರ್ಚಿಸಿದ್ದಾರೆ. ಇವತ್ತು ಹೊಸ ಜೀವ ನಿಮಗೆ ತರಲು ಸಾಧ್ಯವಾಯಿತು ಎಂದಿದ್ದಾರೆ. ಅವರು ಸಾಯಿಬಾಬಾ ಭಕ್ತರು. ನನ್ನ ಆಪರೇಷನ್ ಮಾಡುವ ಮೊದಲು ಸಾಯಿಬಾಬಾನ ದರ್ಶನ ಮಾಡಿ ಪೂಜೆ ಸಲ್ಲಿಸಿದ್ದರು. ಹಾಗಾಗಿ ನಾನಲ್ಲ ನಿಮ್ಮ ಆಪರೇಷನ್ ಮಾಡಿದ್ದು, ಸಾಯಿಬಾಬಾ ಬಂದು ಮಾಡಿದ್ದು ಎಂದರು. ಹಂಗೇರಿಯ ಇನ್ನೊಬ್ಬ ನುರಿತ ವೈದ್ಯರು ಬಂದು ಜೊತೆಯಲ್ಲಿ ನನ್ನ ಶಸ್ತ್ರಚಿಕಿತ್ಸೆ ಮಾಡಿದರು. ನನಗೆ ಹೊಸ ಜೀವ ಕೊಟ್ಟಿದ್ದಾರೆ ಎಂದರು.

ಇನ್ನು ಮೂರ್ನಾಲ್ಕು ದಿನ ನನಗೆ ನಡೆಯಲು ಬೇಕಾಗಬಹುದು, ವೈದ್ಯರು ಎಚ್ಚರಿಕೆ ಹೇಳಿದ್ದಾರೆ. ಮುಂದಿನ 25 ದಿನಗಳ ಕಾಲ ನಮ್ಮ ಕೈಲಾದ ಮಟ್ಟಿಗೆ ಎನ್ ಡಿಎ ಅಭ್ಯರ್ಥಿಗಳ ಗೆಲುವಿಗೆ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು.

ಮುಂದಿನ ದಿನಗಳಲ್ಲಿ ಜನರ ಸೇವೆ ಮಾಡಲು ಆ ಭಗವಂತ ಕಾಪಾಡಿದ್ದಾನೆ. ಮೂರನೇ ಬಾರಿ ಹೃದಯ ಶಸ್ತ್ರ ಚಿಕಿತ್ಸೆ ಆಗಿದೆ. ಅಭಿಮಾನಿಗಳು, ಹಿತೈಷಿಗಳ ಪ್ರಾರ್ಥನೆ ಫಲ ಕೊಟ್ಟಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com