ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಭೇಟಿ ಮಾಡಿದ ಸಂಗಣ್ಣ ಕರಡಿ; ಬಿಜೆಪಿ ವಿರುದ್ಧ ಅಸಮಾಧಾನ

ಕೊಪ್ಪಳ ಲೋಕಸಭಾ ಕ್ಷೇತ್ರದ ಟಿಕೆಟ್ ವಂಚಿತ ಹಾಲಿ ಸಂಸದ ಕರಡಿ ಸಂಗಣ್ಣ ಸೋಮವಾರ ಮಾಜಿ ಸಿಎಂ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಕರಡಿ ಸಂಗಣ್ಣ
ಕರಡಿ ಸಂಗಣ್ಣ
Updated on

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳಲ್ಲಿ ಟಿಕೆಟ್‌ ವಂಚಿತರಿಂದ ಜಿಗಿಜಿಗಿತ ಆರಂಭವಾಗಿದೆ. ರಾಜ್ಯ ಬಿಜೆಪಿಯಲ್ಲಿಯೂ ಬಂಡಾಯ ಮುಂದುವರಿದಿದೆ. ಕೊಪ್ಪಳ ಲೋಕಸಭಾ ಕ್ಷೇತ್ರದ ಟಿಕೆಟ್ ವಂಚಿತ ಹಾಲಿ ಸಂಸದ ಕರಡಿ ಸಂಗಣ್ಣ ಸೋಮವಾರ ಮಾಜಿ ಸಿಎಂ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರನ್ನು ಸಹ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಸಂಸದ ಸಂಗಣ್ಣ ಕರಡಿ ಅವರು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ನಿವಾಸಕ್ಕೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ. ಈ ನಡುವೆ ಕೆಲ ಕಾಲ ಮಾತುಕತೆ ನಡೆಸಿದ್ದಾರೆ ನಡೆಸಿದ್ದಾರೆ ಎನ್ನಲಾಗಿದೆ. ಆಗ ತಮಗೆ ಟಿಕೆಟ್‌ ಕೈತಪ್ಪಿದ್ದರ ಬಗ್ಗೆಯೂ ಸಂಗಣ್ಣ ಕರಡಿ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಎಚ್‌ಡಿಕೆ, ಯಾವುದೇ ಆತುರದ ನಿರ್ಧಾರವನ್ನು ಕೈಗೊಳ್ಳದಂತೆ ಕಿವಿಮಾತು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಸಂಸದ ಸಂಗಣ್ಣ ಕರಡಿ ಅವರು ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ಸೋಮವಾರ ಮಧ್ಯಾಹ್ನ ಬೆಂಬಲಿಗರ ಸಭೆ ಕರೆದಿದ್ದಾರೆ. ಇಲ್ಲಿ ಬಿಜೆಪಿಯಲ್ಲಿಯೇ ಇರುವ ಇಲ್ಲವೇ ಅಥವಾ ಕಾಂಗ್ರೆಸ್ ಸೇರ್ಪಡೆಯಾದರೆ ಅಲ್ಲಿನ ಸ್ಥಾನಮಾನ ಏನು ಎಂಬ ಬಗ್ಗೆ ತೀರ್ಮಾನವನ್ನು ತೆಗೆದುಕೊಳ್ಳಲಿದ್ದಾರೆ.

ಸಂಗಣ್ಣ ಕರಡಿ ಅವರಿಗೆ ಈಗ ತಮ್ಮ ಮುಂದಿನ ರಾಜಕೀಯ ಭವಿಷ್ಯದ ಚಿಂತೆ ಎದುರಾಗಿದೆ ಎಂದು ಹೇಳಲಾಗಿದೆ. ಕಾರಣ, ಅವರಿಗೆ ಈಗ ಬಿಜೆಪಿಯಿಂದ ಟಿಕೆಟ್‌ ಮಿಸ್‌ ಆಗಿದೆ. ಆದರೆ, ಮುಂದೇನು? ಎಂಬ ಬಗ್ಗೆ ರಾಜ್ಯ ನಾಯಕರಾಗಲೀ, ಹೈಕಮಾಂಡ್‌ ನಾಯಕರಾಗಲೀ ಏನೂ ಹೇಳಿಲ್ಲ ಎಂದು ಹೇಳಲಾಗಿದೆ. ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಕೊಡುವ ಬಗ್ಗೆಯೂ ಅವರಿಗೆ ಯಾವುದೇ ಭರವಸೆ ಸಿಕ್ಕಿಲ್ಲವೇ? ಎಂಬ ಪ್ರಶ್ನೆಯೂ ಉದ್ಭವಿಸಿದೆ. ಈ ಹಿನ್ನೆಲೆಯಲ್ಲಿ ಅವರು ತಮ್ಮ ಬೆಂಗಳೂರಿನ ನಿವಾಸದಲ್ಲಿ ಕರೆದಿರುವ ಸಭೆಯಲ್ಲಿ ಮಹತ್ವದ ನಿರ್ಣಯವನ್ನು ಕೈಗೊಳ್ಳಲಿದ್ದಾರೆ.

ಕರಡಿ ಸಂಗಣ್ಣ
ಕರಡಿ ಸಂಗಣ್ಣಗೆ ತಪ್ಪಿದ ಕೊಪ್ಪಳ ಟಿಕೆಟ್‌; ಡಾ. ಬಸವರಾಜ ಕ್ಯಾವಟೂರ್ ಅಚ್ಚರಿಯ ಅಭ್ಯರ್ಥಿ!

ಒಂದು ವೇಳೆ ಕಾಂಗ್ರೆಸ್‌ ಸೇರುವುದಾದರೆ ತಮಗೆ ಸೇರಿದಂತೆ ತಮ್ಮ ಬೆಂಬಲಿಗರಿಗೆ ಯಾವ ರೀತಿ ಸ್ಥಾನಮಾನವನ್ನು ಕಲ್ಪಿಸಲಾಗುತ್ತದೆ? ಮುಂದಿನ ರಾಜಕೀಯ ಗುರಿ ಏನು? ಎಂಬಿತ್ಯಾದಿ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಹೀಗಾಗಿ ಈ ಬಗ್ಗೆ ಕಾಂಗ್ರೆಸ್‌ ನಾಯಕರ ಬಳಿ ಒಂದು ಸಾರಿ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುವ ಬಗ್ಗೆಯೂ ಸಂಗಣ್ಣ ಕರಡಿ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com