ಸಮಾಜ ದೇವತೆಯ ಪದತಲದಲ್ಲಿ ಹೂವಾಗುವ ಸೌಭಾಗ್ಯ ಅದೆಷ್ಟು ಜನರಿಗೆ ತಾನೇ ಸಿಕ್ಕೀತು? ಅನಂತ್‌ ಕುಮಾರ್ ಹೆಗ್ಗಡೆ ಭಾವುಕ ಪತ್ರ

ಕ್ಷೇತ್ರದ ಟಿಕೆಟ್‌ ಘೋಷಣೆಯಾಗುತ್ತಿದ್ದಂತೆ ಹಾಲಿ ಸಂಸದ ಅನಂತ್‌ ಕುಮಾರ್ ಹೆಗಡೆ ಇಷ್ಟು ವರ್ಷ ತಮ್ಮ ಜೊತೆಗಿದ್ದ ಕಾರ್ಯಕರ್ತರು ಹಾಗೂ ಮತದಾರರಿಗೆ ಭಾವುಕ ಪತ್ರ ಬರೆದಿದ್ದಾರೆ.
ಅನಂತ್ ಕುಮಾರ್ ಹೆಗಡೆ
ಅನಂತ್ ಕುಮಾರ್ ಹೆಗಡೆ
Updated on

ಬೆಂಗಳೂರು: 2024ರ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಐದನೇ ಪಟ್ಟಿ ಬಿಡುಗಡೆಯಾಗಿದ್ದು, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಟಿಕೆಟ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಪಾಲಾಗಿದೆ. ಹಾಲಿ ಸಂಸದ ಅನಂತ್‌ ಕುಮಾರ್ ಹೆಗಡೆ ಟಿಕೆಟ್ ಕೈತಪ್ಪಿದೆ.

ಕ್ಷೇತ್ರದ ಟಿಕೆಟ್‌ ಘೋಷಣೆಯಾಗುತ್ತಿದ್ದಂತೆ ಹಾಲಿ ಸಂಸದ ಅನಂತ್‌ ಕುಮಾರ್ ಹೆಗಡೆ ಇಷ್ಟು ವರ್ಷ ತಮ್ಮ ಜೊತೆಗಿದ್ದ ಕಾರ್ಯಕರ್ತರು ಹಾಗೂ ಮತದಾರರಿಗೆ ಭಾವುಕ ಪತ್ರ ಬರೆದಿದ್ದಾರೆ. ಈ ಪತ್ರವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅನಂತ್‌ ಕುಮಾರ್ ಹೆಗಡೆ ಹಂಚಿಕೊಂಡಿದ್ದಾರೆ.

ನನ್ನ ಜನಕ್ಕೆ ಸೇವೆಯ ಸೌಭಾಗ್ಯವನ್ನು ಒದಗಿಸಿಕೊಟ್ಟ ಕ್ಷೇತ್ರದ ಜನಮನಕ್ಕೆ ಹೃದಯದಾಳದ ಕೃತಜ್ಞತೆ ಎಂದು ತಿಳಿಸಿದ್ದಾರೆ. "ಈ ಭೂಮಿಯಲ್ಲಿ ನನ್ನ ಲೌಕಿಕ ಬದುಕಿನಿಂದಾಚೆಗೂ ಒಂದು ಭವ್ಯವಾದ ಬದುಕಿದೆ ಎಂದೆನಿಸಿತ್ತು. ಅಂತಹ ಬದುಕನ್ನು ನೋಡುವ ತಹತಹ ಇತ್ತು, ತಳಮಳವೂ ಇತ್ತು. ಸೋಲು ಗೆಲುವಿನ ಆತಂಕದಿಂದಾಚೆ ಜೀವನವನ್ನು ನಿತ್ಯ ಸತ್ಯವಾಗಿಸುವ ಹಾಗೂ ಎಂದೂ ನಿಲ್ಲದ ಪ್ರವಾಹವಾಗಿಸುವ, ಚೈತನ್ಯದ ಪೂಜೆಯನ್ನಾಗಿಸುವ ಹಂಬಲ ಕಾಡುತ್ತಿತ್ತು. ಆದರೆ, ಆರಂಭ ಎಲ್ಲಿಂದ ತಿಳಿದಿರಲಿಲ್ಲ.

ಜ್ಞಾನಿಗಳು, ಹಣವಂತರು, ಅಧಿಕಾರ ಇದ್ದವರು ಅವರದೇ ಆದ ರೀತಿಯಲ್ಲಿ ಪೂಜೆ ಮಾಡುತ್ತಾರೆ. ಆದರೆ, ಅಂತಹ ಯಾವುದೇ ಉಪಾಧಿಗಳಿಲ್ಲದ ನಾನು ಈ ಪೂಜೆಯನ್ನು ಎಲ್ಲಿಂದ, ಹೇಗೆ ಆರಂಭಿಸಲಿ ಎಂದು ಗೊತ್ತಿರಲಿಲ್ಲ. ಈ ಮಧ್ಯದಲ್ಲಿ ಆರಂಭಗೊಂಡಿದ್ದು ಜನತಾ ಜನಾರ್ದನ ಆರಾಧನೆ. ಸರಿ ಸುಮಾರು ಮೂವತ್ತು ವರ್ಷಗಳ ತಮ್ಮೆಲ್ಲರ ಅಪೂರ್ವ ಒಡನಾಟ, ತಾವುಗಳು ತೋರಿದ ಸ್ನೇಹ, ಪ್ರೀತಿ, ವಾತ್ಸಲ್ಯ ನಿಜಕ್ಕೂ ಭಾಷೆಗೆ ನಿಲುಕದ್ದು, ಅದು ಅದಮ್ಯ.

ಅನಂತ್ ಕುಮಾರ್ ಹೆಗಡೆ
ಮಾಧ್ಯಮಗಳನ್ನು ನಾಯಿಗೆ ಹೋಲಿಸಿ ನಾಲಿಗೆ ಹರಿಬಿಟ್ಟ ಸಂಸದ ಅನಂತ್ ಕುಮಾರ್ ಹೆಗಡೆ!

ಯಾವುದೇ ಪೂಜೆ ಆರಾಧನೆ, ಅದು ಎಂದಿಗೂ ಮುಗಿಯದ ಅನಂತ ಕಾಯಕ. ಈ ತಾಯ್ಕೆಲದ ಪೂಜೆಯಲ್ಲಿ, ಆಕೆಯ ಸೇವೆಯಲ್ಲಿ ನನ್ನನ್ನು ನಾನು ಸಮರ್ಪಿಸಕೊಳ್ಳುವ ಸೌಭಾಗ್ಯ ಈ ಜನ್ಮದಲ್ಲಿ ಭಗವಂತ ಕರುಣಿಸಿದಕ್ಕೆ, ಈ ಕಣ್ಣಿಗೆ ಕಾಣದ ಆ ಅಕ್ಷಯ ಪಾದಪದ್ಮಗಳಿಗೆ ನನ್ನ ಅನಂತ ನಮನಗಳನ್ನು ಸಲ್ಲಿಸುತ್ತೇನೆ.

ಕಳೆದ 3 ದಶಕಗಳಿಂದ ಹಿಂದವೀ ಹಿತದಲ್ಲಿ ಸೇವೆ ಸಲ್ಲಿಸುವ ಅಪೂರ್ವ ಸಯ್ಯೋಗ ಈ ಬದುಕಿನಲ್ಲಿ ನನಗೊಂದು ಗುರುತು ನೀಡಿದೆ. ನಿಜಕ್ಕೂ ಅಷ್ಟೇ ಸಾಕು. ಈ ಸಮಾಜ ದೇವತೆಯ ಪದತಲದಲ್ಲಿ ಹೂವಾಗುವ ಸೌಭಾಗ್ಯ ಅದೆಷ್ಟು ಜನರಿಗೆ ತಾನೇ ಸಿಕ್ಕೀತು?

ಹೆತ್ತ ತಾಯೊಡಲಿಗೆ, ಬದುಕು ಕೊಟ್ಟ ಈ ಮಣ್ಣಿಗೆ ಗುರುತು ಕೊಟ್ಟ ನನ್ನ ಜನಕ್ಕೆ ಸೇವೆಯ ಸೌಭಾಗ್ಯವನ್ನು ಒದಗಿಸಿಕೊಟ್ಟ ಕ್ಷೇತ್ರದ ಜನಮನಕ್ಕೆ ಮತ್ತೊಮ್ಮೆ, ಮತ್ತೊಮ್ಮೆ, ಮತ್ತೊಮ್ಮೆ ಸಾಷ್ಟಾಂಗವೆರಗುತ್ತೇನೆ" ಎಂದು ಕ್ಷೇತ್ರದ ಮತದಾರರಿಗೆ ಭಾವುಕ ಪತ್ರ ಬರೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com