'ಕೈ'ಗೆ ಕೋಲಾರ ಕಂಟಕ: ಶಾಸಕರಿಂದ ರಾಜಿನಾಮೆ ಬೆದರಿಕೆ. ತೇಜಸ್ವಿನಿ ಗೌಡ ರಾಜಿನಾಮೆ. Modi ಎಂದವರ ಕಪಾಳಕ್ಕೆ ಹೊಡಿರಿ: ಸಚಿವನ ವಿರುದ್ಧ ದೂರು ದಾಖಲು! - ಈ ದಿನದ ಸುದ್ದಿ ಮುಖ್ಯಾಂಶಗಳು: 27-03-2024

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

1. 'ಕೈ'ಗೆ ಕೋಲಾರ ಕಂಟಕ: ಶಾಸಕರಿಂದ ರಾಜಿನಾಮೆ ಬೆದರಿಕೆ

ಲೋಕಸಭಾ ಚುನಾವಣೆಯಲ್ಲಿ ಸಚಿವ ಕೆ ಹೆಚ್ ಮುನಿಯಪ್ಪ ಅಳಿಯ ಕೆ.ಜಿ ಚಿಕ್ಕಪೆದ್ದಣ್ಣಗೆ ಕೋಲಾರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನೀಡಲು ಪಕ್ಷ ನಿರ್ಧಾರ ಮಾಡಿರುವ ಬೆನ್ನಲ್ಲೇ ಅದನ್ನು ಖಂಡಿಸಿ ಕೋಲಾರ ಭಾಗದ ಶಾಸಕರು, ವಿಧಾನ ಪರಿಷತ್ ಸದಸ್ಯರು ರಾಜೀನಾಮೆ ನೀಡಲು ಮುಂದಾಗಿದ್ದರು. ಅಷ್ಟೇ ಅಲ್ಲದೆ ಇಂದು ಮಧ್ಯಾಹ್ನ ಬೆಂಗಳೂರಿನ ವಿಧಾನ ಸೌಧದಲ್ಲಿರುವ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರ ಕೊಠಡಿಗೆ ಆಗಮಿಸಿದ ಸ್ವತಃ ಸಿಎಂ ರಾಜಕೀಯ ಕಾರ್ಯದರ್ಶಿ ಆಗಿರುವ ನಜೀರ್ ಅಹ್ಮದ್ ಮತ್ತು ಅನಿಲ್ ಹೊರಟ್ಟಿ ಕುಳಿತು ಕ್ಯಾಮರಾಗಳಿಗೆ ರಾಜೀನಾಮೆ ಪತ್ರವನ್ನು ಪ್ರದರ್ಶಿಸಿದರು. ಆದರೆ ರಾಜಿನಾಮೆ ಕೊಡದೆ ಹೊರಹೋಗಿದ್ದರು. ಈ ಬಗ್ಗೆ ಮಾತನಾಡಿರುವ ಬಸವರಾಜ ಹೊರಟ್ಟಿ MLCಗಳು ಮತ್ತು ಶಾಸಕರು ಸಮಯ ಕೇಳಿದ್ದರು. ಇಂದು ಮಧ್ಯಾಹ್ನ ಬಿಳಿ ಕಾಗದದಲ್ಲಿ ಬರೆದುಕೊಂಡು ನನ್ನ ಕೊಠಡಿಗೆ ಬಂದರು. ನಾನು ಲೆಟರ್ ಹೆಡ್ ಲ್ಲಿ ಅಧಿಕೃತವಾಗಿ ಬರೆದುಕೊಡಿ ಎಂದು ಕೇಳಿದೆ. ಅವರು ಕೊಡಲಿಲ್ಲ, ಹಾಗಾಗಿ ನಾನು ರಾಜೀನಾಮೆ ಸ್ವೀಕರಿಸಲಿಲ್ಲ ಎಂದು ಸಭಾಪತಿ ಹೊರಟ್ಟಿ ಸ್ಪಷ್ಟಪಡಿಸಿದರು. ಈ ಮಧ್ಯೆ ಬಿಜೆಪಿ ಪಕ್ಷದ ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿಗೌಡ ಅವರು ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ. ಸ್ಪೀಕರ್ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿದ ತೇಜಸ್ವಿನಿ ಗೌಡ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ವೈಯುಕ್ತಿಕ ಕಾರಣಗಳಿಂದ‌ ರಾಜೀನಾಮೆ ನೀಡಿದ್ದಾಗಿ ತೇಜಸ್ವಿನಿಗೌಡ ಎಂದು‌ ಹೇಳಿದ್ದಾರೆ.

2. ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ: NIA ದಾಳಿ

ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಯನ್ನು ಮುಂದುವರಿಸಿರುವ NIA ಇಂದು ಐದು ಕಡೆ ದಾಳಿ ನಡೆಸಿದೆ. ಬೆಂಗಳೂರು ಮತ್ತು ಶಿವಮೊಗ್ಗದಲ್ಲಿ ಶಂಕಿತ ವ್ಯಕ್ತಿಗಳ ಮನೆ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳು ಬೆಂಗಳೂರಿನ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ಐಎಸ್ ಜೊತೆ ನಂಟು ಹೊಂದಿದ್ದ ಶಂಕಿತರು, ತಮಿಳುನಾಡು ಹಾಗೂ ಕರ್ನಾಟಕದಲ್ಲಿ‌ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದರು. ಬೆಂಗಳೂರಿನ ಗುರಪ್ಪನಪಾಳ್ಯದಲ್ಲೂ ಶಂಕಿತರು ಸಭೆ ನಡೆಸಿದ್ದರು. ಇದೇ ಗುರಪ್ಪನಪಾಳ್ಯದ ಕೆಲವರ ಮನೆಗಳ ಮೇಲೆ ಅಧಿಕಾರಗಳು ದಾಳಿ ಮಾಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ತೀರ್ಥಹಳ್ಳಿಯಲ್ಲೂ ಹಲವರ‌ ಮನೆಯಲ್ಲಿ ಶೋಧ ನಡೆದಿದೆ ಎಂದು‌ ಮೂಲಗಳು ಹೇಳಿವೆ.

3. Modi ಎಂದವರ ಕಪಾಳಕ್ಕೆ ಹೊಡಿರಿ: ಸಚಿವನ ವಿರುದ್ಧ ದೂರು ದಾಖಲು

ಯುವಕರು ಮತ್ತು ವಿದ್ಯಾರ್ಥಿಗಳು ಮೋದಿ.. ಮೋದಿ.. ಎಂದರೆ ಕೂಗಿದರೆ ಅವರ ಕಪಾಳಕ್ಕೆ ಹೊಡೆಯಬೇಕು ಎಂದು ಹೇಳಿಕೆ ನೀಡಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ಸಚಿವ ಶಿವರಾಜ ತಂಗಡಗಿ ವಿರುದ್ಧ ಕೊಪ್ಪಳ ಜಿಲ್ಲೆಯ ಕಾರಟಗಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ಕೊಪ್ಪಳ ಕ್ಷೇತ್ರದ ತಮ್ಮ ಪಕ್ಷದ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಪರ ಪ್ರಚಾರ ಮಾಡುವ ಸಮಯದಲ್ಲಿ ಮೋದಿ ವಿರುದ್ಧ ಪ್ರಚೋದನಕಾರಿಯಾಗಿ ಹೇಳಿಕೆ ನೀಡಿದ್ದರು.

4. ರೌಡಿಶೀಟರ್ ಹಾಗೂ ಸುಪಾರಿ ಕಿಲ್ಲರ್ ದಿನೇಶ್ ಬರ್ಬರ ಹತ್ಯೆ

ರೌಡಿಶೀಟರ್ ಹಾಗೂ ಸುಪಾರಿ ಕಿಲ್ಲರ್ ದಿನೇಶ್ ಎಂಬಾತನನ್ನು ಬೆಂಗಳೂರಿನ ಕಮ್ಮನಹಳ್ಳಿಯ ಓಯೋ ಹೋಟೆಲ್‌ನಲ್ಲಿ ಇಂದು ಮಧ್ಯಾಹ್ನ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಏಳು ಜನ ದುಷ್ಕರ್ಮಿಗಳು ಸೇರಿ ಕೊಲೆ ಮಾಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಸ್ನೇಹಿತ ಜೊತೆ ಬಂದಿದ್ದ ದಿನೇಶ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಹತ್ಯೆ ಮಾಡಿದ್ದಾರೆ. ಯಾವ ಕಾರಣಕ್ಕೆ ಹತ್ಯೆ ಮಾಡಲಾಗಿದೆ ಎಂಬುದು ತಿಳಿದುಬಂದಿಲ್ಲ. ಈ ಕುರಿತು ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

5. ಹಿರಿಯ ಸಾಹಿತಿ ಗುರುಲಿಂಗ ಕಾಪಸೆ ನಿಧನ

ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಸಾಹಿತಿ ಗುರುಲಿಂಗ ಕಾಪಸೆ ಕಳೆದ ರಾತ್ರಿ ನಗರದ ನಿರ್ಮಲಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಗುರುಲಿಂಗ ಕಾಪಸೆ ಮೂಲ ಊರು ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಲೋಣಿ ಬಿಕೆ ಗ್ರಾಮ. ಸದ್ಯ ಧಾರವಾಡದ ಸಪ್ತಾಪುರ ದುರ್ಗಾ ಕಾಲೋನಿಯಲ್ಲಿ ನೆಲೆಸಿದ್ದರು. ಕನ್ನಡ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾಗಿದ್ದರು. ಮಧುರ ಚೆನ್ನ, ಅಕ್ಕಮಹಾದೇವಿ, ಅರವಿಂದರು, ಬಸವೇಶ್ವರ, ಹಲಸಂಗಿ ಗೆಳೆಯರು ಸೇರಿ ಹಲವು ಕೃತಿಗಳನ್ನು ರಚಿಸಿದ್ದಾರೆ. ಕಾಪಸೆಯವರು ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com