ಡಿಕೆ ಸುರೇಶ್, ಪ್ರಜ್ವಲ್ ನಾಮಪತ್ರ ಸಲ್ಲಿಕೆ. ಮುಂದಿನ 5 ದಿನ ರಾಜ್ಯದಲ್ಲಿ ಉಷ್ಣ ಅಲೆ; IMD ಎಚ್ಚರಿಕೆ! ನನ್ನ ಕೊಂದಾದರೂ BJP ಚುನಾವಣೆ ಗೆಲ್ಲುವ ಯೋಜನೆಯಲ್ಲಿದೆ: ಪ್ರಿಯಾಂಕ್ ಖರ್ಗೆ - ಈ ದಿನದ ಸುದ್ದಿ ಮುಖ್ಯಾಂಶಗಳು: 28-03-2024

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

1. ಮೊದಲ ದಿನವೇ ಡಿಕೆ ಸುರೇಶ್, ಪ್ರಜ್ವಲ್ ನಾಮಪತ್ರ ಸಲ್ಲಿಕೆ

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಮೊದಲ ಹಂತದಲ್ಲಿ 14 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು ಇಂದು ಅಧಿಸೂಚನೆ ಹೊರಡಿಸಲಾಗಿದೆ. ಬೆಂಗಳೂರು ನಗರ ಸೇರಿದಂತೆ ಏಪ್ರಿಲ್ 26ರಂದು ಚುನಾವಣೆ ನಡೆಯುವ ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಹಾಲಿ ಸಂಸದ ಡಿ ಕೆ ಸುರೇಶ್ ಇಂದು ದೇವಿ ಕಬ್ಬಾಳಮ್ಮಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ರಾಮನಗರದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದರು. ಉಪಮುಖ್ಯಮಂತ್ರಿ ಮತ್ತು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಡಿ ಕೆ ಶಿವಕುಮಾರ್ ಮತ್ತು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಇತರರು ಈ ವೇಳೆ ಉಪಸ್ಥಿತರಿದ್ದರು. ಮತ್ತೊಂದೆಡೆ ಹಾಸನದಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಹಾಸನದ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರಿಗೆ ನಾಮಪತ್ರ ಸಲ್ಲಿಸಿದರು.

2. ಆರೋಪಿ ಪ್ರವೀಣ್ ಚೌಗುಲೆಯನ್ನು ಕೋರ್ಟ್ ಗೆ ಹಾಜರುಪಡಿಸುವ ವೇಳೆ ಅಧಿಕಾರಿಯಿಂದ ಮದ್ಯ ಸೇವನೆ

ಉಡುಪಿಯ ನೇಜಾರದಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆಯನ್ನು ಪೊಲೀಸರು ಬಿಗಿ ಭದ್ರತೆಯಲ್ಲಿ ನಿನ್ನೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ಅಧಿಕಾರಿಯೊಬ್ಬರು ಮದ್ಯ ಸೇವಿಸಿ ಕರ್ತವ್ಯ ನಿರ್ವಹಿಸಿದ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿದ್ದ ಪ್ರವೀಣ್‌ ಚೌಗುಲೆಯನ್ನು ನ್ಯಾಯಾಲಯಕ್ಕೆ ಕರೆ ತರುವ ಭದ್ರತೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದ ಬೆಂಗಳೂರಿನ ಮೀಸಲು ಪೊಲೀಸ್‌ ವಿಭಾಗದ ಸಬ್‌ ಇನ್‌ಸ್ಪೆಕ್ಟರ್‌ ಮದ್ಯ ಸೇವಿಸಿ ಮಾಧ್ಯಮದ ಪ್ರತಿನಿಧಿಗಳು ಹಾಗೂ ಸಾರ್ವಜನಿಕರೊಂದಿಗೆ ಅನುಚಿತವಾಗಿ ನಡೆದುಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಈ ಬಗ್ಗೆ ಸ್ಥಳದಲ್ಲಿದ್ದವರು ಉಡುಪಿ ಎಸ್ಪಿಯ ಗಮನಕ್ಕೆ ತಂದಿದ್ದು, ಶಿಸ್ತು ಕ್ರಮಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುತ್ತದೆ ಎಂದು ಉಡುಪಿ ಪೊಲೀಸ್‌ ಅಧೀಕ್ಷಕ ಡಾ. ಕೆ. ಅರುಣ್‌ ಅವರು ಹೇಳಿದ್ದಾರೆ.

3. ನನ್ನ ಕೊಂದಾದರೂ BJP ಚುನಾವಣೆ ಗೆಲ್ಲುವ ಯೋಜನೆಯಲ್ಲಿದೆ: ಪ್ರಿಯಾಂಕ್ ಖರ್ಗೆ

ಬಿಜೆಪಿಗರು ಗಲಭೆ ಸೃಷ್ಟಿ ಮಾಡಿ ಚುನಾವಣೆ ಮಾಡಬೇಕು ಅಂತಿದ್ದಾರೆ. ನನ್ನ ಹೆಣ ಬೀಳಿಸಿಯಾದರೂ ಚುನಾವಣೆ ಗೆಲ್ಲುವ ಯೋಜನೆಯಲ್ಲಿದ್ದಾರೆ. ಅಲ್ಲದೆ, ನನಗೆ ಮತ್ತೊಂದು ಜೀವ ಬೆದರಿಕೆ ಪತ್ರ ಬಂದಿದ್ದು ಅದರಲ್ಲಿ ಎನ್ಕೌಂಟರ್ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ. ಕಲಬುರಗಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಬಿಜೆಪಿಯವರು ಈ ಲೋಕಸಭೆ ಚುನಾವಣೆಯಲ್ಲಿ ಗೊಂದಲ ಸೃಷ್ಟಿಸಿ ಕಾನೂನು ಸುವ್ಯವಸ್ಥೆ ಹಾಳು ಮಾಡುತ್ತಿದ್ದಾರೆ. ಗಲಭೆ ಸೃಷ್ಟಿಸಿ ಚುನಾವಣೆ ಗೆಲ್ಲಬೇಕು ಅಂತಿದ್ದಾರೆ ಎಂದರು. ಬೆದರಿಕೆ ಸಂಬಂಧ ಮಾರ್ಚ್ 13 ರಂದು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಿದ್ದೇನೆ. ವಿಕಾಸೌಧದಲ್ಲಿರುವ ನನ್ನ ಕಚೇರಿಗೆ ಕಲಬುರಗಿಯಿಂದಲೇ ಪತ್ರ ಬಂದಿದೆ ಎಂದು ಹೇಳಿದರು.

4. ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಭಾರಿ ಅಗ್ನಿ ಅನಾಹುತ

ಮಂಗಳೂರು ಹೊರವಲಯದ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಇಂದು ಬೆಳಿಗ್ಗೆ ಭಾರಿ ಅಗ್ನಿ ಅನಾಹುತ ಸಂಭವಿಸಿದ್ದು, ಕಾರ್ಖಾನೆಯೊಂದು ಅಗ್ನಿಗಾಹುತಿಯಾಗಿದೆ. ಕೋಳಿ ಆಹಾರಕ್ಕೆ ಬೇಕಾಗಿರುವ ಮೀನು ಪದಾರ್ಥಗಳನ್ನು ಉತ್ಪಾದಿಸುವ ಶಿಹಾರ ಎಂಟರ್ ಪ್ರೈಸಸ್ ನಲ್ಲಿ‌ ಈ ಅಗ್ನಿ ದುರಂತ ಸಂಭವಿಸಿದ್ದು, ತಡ ರಾತ್ರಿ ಗೋದಾಮಿನಲ್ಲಿ ಕಾಣಿಸಿಕೊಂಡ ಬೆಂಕಿ ಬಳಿಕ ಇಡೀ ಕಾರ್ಖಾನೆಯನ್ನು ವ್ಯಾಪಿಸಿದೆ. ಅಗ್ನಿ ಅವಘಡದ ಮಾಹಿತಿ ಪಡೆದ ಅಗ್ನಿ ಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಘಟನೆಯಲ್ಲಿ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ. ಶಾರ್ಟ್ ಸರ್ಕಿಟ್ ದುರಂತಕ್ಕೆ ಕಾರಣವೆಂದು ಶಂಕಿಸಲಾಗಿದ್ದು ಕೋಟ್ಯಾಂತರ ರೂಪಾಯಿಗಳ ನಷ್ಟ ಸಂಭವಿಸಿದೆ ಎಂದು ಶಿಹಾರ ಎಂಟರ್ಪ್ರೈಸ್ ಮಾಲೀಕ ಮೊಹಮ್ಮದ್ ತಿಳಿಸಿದ್ದಾರೆ.

5. ಮುಂದಿನ 5 ದಿನ ರಾಜ್ಯದಲ್ಲಿ ಉಷ್ಣ ಅಲೆ; IMD ಎಚ್ಚರಿಕೆ!

ಉತ್ತರ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮುಂದಿನ ಐದು ದಿನಗಳ ಕಾಲ ಉಷ್ಣ ಅಲೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ನಿನ್ನೆ ರಾಜ್ಯದಲ್ಲಿ 40 ಡಿಗ್ರಿ ಸೆಲ್ಸಿಯಸ್ ಗಡಿಯನ್ನು ಮೀರಿದ್ದು, ಕಲಬುರಗಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಕ್ರಮವಾಗಿ 40.6 ಮತ್ತು 40.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿತ್ತು. ಆದರೆ ಮುಂದಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ಉತ್ತರ ಕರ್ನಾಟಕದಲ್ಲಿ ತಾಪಮಾನವು 2 ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಏಪ್ರಿಲ್‌ನಲ್ಲಿ ತಾಪಮಾನವು ಮಾರ್ಚ್‌ಗಿಂತ ಹೆಚ್ಚಾಗಿರಲಿದೆ. ಆದಾಗ್ಯೂ, ರಾಜ್ಯದ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು IMD ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com