ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಕೇಸು: ಇಂದು ಹಾಸನದಲ್ಲಿ SIT ಸ್ಥಳ ಮಹಜರು, ಮೇ 4ಕ್ಕೆ ರೇವಣ್ಣ ವಿಚಾರಣೆ

ಪ್ರಜ್ವಲ್ ರೇವಣ್ಣ
ಪ್ರಜ್ವಲ್ ರೇವಣ್ಣ

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರುವ ಲೈಂಗಿಕ ಹಗರಣ ಕೇಸಿಗೆ ಸಂಬಂಧಪಟ್ಟಂತೆ ತನಿಖೆ ನಡೆಸುತ್ತಿರುವ ಎಸ್ ಐಟಿ(Special investigative team) ಅಧಿಕಾರಿಗಳ ತಂಡ ಇಂದು ಬುಧವಾರ ಹಾಸನ ಜಿಲ್ಲೆಯ ಹೆಚ್ ಡಿ ರೇವಣ್ಣ ನಿವಾಸಕ್ಕೆ ತೆರಳಿ ಸ್ಥಳ ಮಹಜರು ನಡೆಸಲಿದ್ದಾರೆ.

ಹಾಸನದಲ್ಲಿರುವ ಹೆಚ್ ಡಿ ರೇವಣ್ಣ ನಿವಾಸ ಮತ್ತು ಫಾರ್ಮ್ ಹೌಸ್ ನಲ್ಲಿ ತಮ್ಮ ವಿರುದ್ಧ ರೇವಣ್ಣ ಮತ್ತು ಅವರ ಪುತ್ರ ಸಂಸದ ಪ್ರಜ್ವಲ್ ರೇವಣ್ಣ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಹಲವು ಮಹಿಳೆಯರು ಮತ್ತು ಯುವತಿಯರು ದೂರು ನೀಡಿರುವ ಹಿನ್ನೆಲೆಯಲ್ಲಿ ಎಸ್ ಐಟಿ ಅಧಿಕಾರಿಗಳ ತಂಡ ಹಾಸನದಲ್ಲಿ ತೀವ್ರ ತನಿಖೆ ನಡೆಸಲಿದ್ದಾರೆ.

ಎಸ್ ಐಟಿ ಅಧಿಕಾರಿಗಳು ಈಗಾಗಲೇ ಇಬ್ಬರಿಗೂ ವಿಚಾರಣೆಗೆ ಹಾಜರಾಗಲು ನೊಟೀಸ್ ಜಾರಿ ಮಾಡಿದ್ದು ಜರ್ಮನಿಯಲ್ಲಿರುವ ಕಾರಣ ಇಂದು ಪ್ರಜ್ವಲ್ ರೇವಣ್ಣ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿಲ್ಲ. ತಮ್ಮ ವಕೀಲರ ಮೂಲಕ ಅಧಿಕಾರಿಗಳ ಬಳಿ ಸಮಯಾವಕಾಶ ಕೇಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮೇ 4ಕ್ಕೆ ರೇವಣ್ಣ ವಿಚಾರಣೆಗೆ ಹಾಜರು: ಇನ್ನು ಮಾಜಿ ಸಚಿವ ಶಾಸಕ ಹೆಚ್ ಡಿ ರೇವಣ್ಣ ಅವರು ಮೇ 4ರಂದು ಎಸ್ ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವುದಾಗಿ ಈಗಾಗಲೇ ತಿಳಿಸಿದ್ದಾರೆ. ಪ್ರಕರಣದಲ್ಲಿ ಹೆಚ್ ಡಿ ರೇವಣ್ಣ ಎ1 ಮತ್ತು ಪ್ರಜ್ವಲ್ ರೇವಣ್ಣ ಎ2 ಆರೋಪಿಯಾಗಿದ್ದಾರೆ.

ಪ್ರಜ್ವಲ್ ರೇವಣ್ಣ
JDS ನಿಂದ ಪ್ರಜ್ವಲ್ ರೇವಣ್ಣ ಅಮಾನತು: Pendrive ಕೊಟ್ಟಿದ್ದು ನಾನೇ ಎಂದ ಚಾಲಕ- ಈ ದಿನದ ಸುದ್ದಿ ಮುಖ್ಯಾಂಶಗಳು

ಪ್ರಕರಣದಲ್ಲಿ ಕೇಸು ದಾಖಲಾಗುತ್ತಿದ್ದಂತೆ ಹೆಚ್ ಡಿ ರೇವಣ್ಣ ಹಾಸನದ ಹೊಳೆನರಸೀಪುರದಲ್ಲಿ ದೇವರ ಮೊರೆ ಹೋಗಿದ್ದಾರೆ. ಇಂದು ಬೆಳಗ್ಗೆಯಿಂದಲೇ ಅವರ ನಿವಾಸದಲ್ಲಿ ಹೋಮ ನಡೆಯುತ್ತಿದೆ. ಹೊಳೆನರಸೀಪುರದ ಹತ್ತಿರದ ದೇವಾಲಯಗಳಿಗೂ ಭೇಟಿ ನೀಡಿ ರೇವಣ್ಣ ಪೂಜೆ ಸಲ್ಲಿಸುತ್ತಿದ್ದಾರೆ.

ಎಸ್ ಐಟಿ ತನಿಖೆಯಾಗಲಿ, ಸರ್ಕಾರದ ಹಸ್ತಕ್ಷೇಪವಿಲ್ಲ: ತನಿಖೆಯನ್ನು ಸಂಪೂರ್ಣವಾಗಿ ಎಸ್ ಐಟಿಗೆ ನೀಡಿರುವುದರಿಂದ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ, ತನಿಖೆ ಪೂರ್ಣವಾಗುವವರೆಗೆ ಯಾವುದೇ ಹೇಳಿಕೆ ಕೂಡ ನೀಡುವುದಿಲ್ಲ, ಅಧಿಕಾರಿಗಳೇ ಪ್ರಜ್ವಲ್ ನನ್ನು ವಿದೇಶದಿಂದ ಕರೆಸಿಕೊಳ್ಳುವ ಕೆಲಸ ಮಾಡುತ್ತಾರೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.

ಸಿಐಡಿ ಎಡಿಜಿಪಿ ಬಿಕೆ ಸಿಂಗ್ ನೇತೃತ್ವದಲ್ಲಿ 18 ಅಧಿಕಾರಿಗಳ ಎಸ್​ಐಟಿ ತಂಡ ನೇಮಕವಾಗಿದೆ. ಎಸ್ ಐಟಿ ತಂಡವನ್ನು ಮೂರು ಉಪ ತಂಡಗಳಾಗಿ ರಚಿಸಿದ್ದು ಮೂರು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಮಾಜಿ ಪ್ರಧಾನಿಯವರ ಕುಟುಂಬಕ್ಕೆ ಸಂಬಂಧಿಸಿದ ಹೈಪ್ರೊಫೈಲ್‌ ಪ್ರಕರಣವಾಗಿರುವುದರಿಂದ ಎಸ್​​ಐಟಿ ತಂಡ ಒಂದೊಂದು ವಿಚಾರವನ್ನೂ ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ.

ಇಡೀ ಹಗರಣದಲ್ಲಿ ಲೈಂಗಿಕ ದೌರ್ಜನ್ಯ, ಅಶ್ಲೀಲ ದೃಶ್ಯ ಚಿತ್ರೀಕರಣ, ಅಶ್ಲೀಲ ದೃಶ್ಯಗಳ ಹಂಚಿಕೆ ಮತ್ತು ಡೀಪ್‌ ಫೇಕ್‌ ಹೀಗೆ ಹಲವು ಆ್ಯಂಗಲ್‌ಗಳು ಇವೆ. ಸಂತ್ರಸ್ತ ಮಹಿಳೆಯರ ದೂರಿನ ಸತ್ಯಾಸತ್ಯತೆ ಏನು? ಪೆನ್‌ಡ್ರೈವ್‌ಗೆ ವಿಡಿಯೋಗಳನ್ನು ಹಾಕಿದ್ದು ಯಾರು? ಪೆನ್‌ಡ್ರೈವ್ ಹಂಚಿದ್ದು ಯಾರು? ಇತ್ಯಾದಿಗಳ ಮೂಲ ಹುಡುಕಲು ಎಸ್​​ಐಟಿ ಮುಂದಾಗಿದೆ.

ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಹಗರಣ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕರ್ನಾಟಕದ ಮೂಲೆ ಮೂಲೆಯಲ್ಲೂ ಈ ಘಟನೆ ವಿರುದ್ಧ ಆಕ್ರೋಶ ಸ್ಫೋಟಗೊಂಡಿದೆ. ಇದರಿಂದ ಪಕ್ಷದ ಮೇಲಾಗಿರುವ ಡ್ಯಾಮೇಜ್ ಕಂಟ್ರೋಲ್‌ಗೆ ಯತ್ನಿಸಿರುವ ರಾಜ್ಯಾಧ್ಯಕ್ಷ ಹೆಚ್​ಡಿ ಕುಮಾರಸ್ವಾಮಿ ನಿನ್ನೆ ಪ್ರಜ್ವಲ್‌ರನ್ನು ಪಕ್ಷದಿಂದ ಅಮಾನತು ಮಾಡಿ ಆದೇಶ ಹೊರಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com