
ಹುಬ್ಬಳ್ಳಿ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಹಗರಣ ಪ್ರಕರಣದಲ್ಲಿ ರಾಜ್ಯ ಸರ್ಕಾರದ್ದೇ ತಪ್ಪಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ವಿರುದ್ಧ ಕೇಸು ದಾಖಲಿಸಲು ವಿಳಂಬ ಮಾಡಿದ್ದೇಕೆ ಎಂದು ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರ ಹೇಳಬೇಕು. ಪ್ರಜ್ವಲ್ ರೇವಣ್ಣ ತಪ್ಪು ಮಾಡಿದ್ದರಲ್ಲಿ ಶೇಕಡಾ 50ರಷ್ಟು ತಪ್ಪು ರಾಜ್ಯ ಸರ್ಕಾರದ್ದೂ ಇದೆ ಎಂದರು.
ಈ ಪ್ರಕರಣ ಬೆಳಕಿಗೆ ಬಂದ ಕೂಡಲೇ ಸರ್ಕಾರ ಎಫ್ ಐಆರ್ ಹಾಕಿಸಿ ಪರಿಶೀಲನೆ ಮಾಡಿ ಪ್ರಜ್ವಲ್ ರೇವಣ್ಣ ಹೊರಗೆ ಹೋಗಬಾರದು ಎಂದು ನಿರ್ಬಂಧ ಹಾಕಬಹದಾಗಿತ್ತು. ಏ.21ರಂದು ಪ್ರಕರಣ ಗಮನಕ್ಕೆ ಬಂದಿದ್ದರೂ ಎಫ್ ಐಆರ್ ಹಾಕಲು ಏಪ್ರಿಲ್ 28ರವರೆಗೆ ತೆಗೆದುಕೊಂಡಿದ್ದೇಕೆ ಎಂದು ಕೇಳಿದರು.
ಸಾರ್ವಜನಿಕ ಜೀವನದಲ್ಲಿ ಆರೋಪಗಳು ಸಾಕಷ್ಟು ಬರುತ್ತದೆ. ಆರೋಪಗಳ ಸತ್ಯಾಸತ್ಯತೆ ಬಗ್ಗೆ ವಿವರ ನೀಡಬೇಕಾಗುತ್ತದೆ. 5 ವರ್ಷಗಳ ಹಿಂದೆ ಕಾಂಗ್ರೆಸ್ ನವರು ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡಿದ್ದರು. ಪ್ರಜ್ವಲ್ ರೇವಣ್ಣನ ಚಿಕ್ಕಪ್ಪನನ್ನು ಮುಖ್ಯಮಂತ್ರಿ ಮಾಡಿದ್ದರು, ಹೆಚ್ ಡಿ ರೇವಣ್ಣನವರನ್ನು ಸಚಿವ ಮಾಡಿದ್ದರು. ಇಂದು ನಾವು ಜೆಡಿಎಸ್ ಜೊತೆ ಮಾಡಿಕೊಂಡಿರುವ ಮೈತ್ರಿ ಬಗ್ಗೆ ಟೀಕಿಸುತ್ತಿರುವುದು ಎಷ್ಟು ಸರಿ ಎಂದು ಪ್ರಹ್ಲಾದ್ ಜೋಶಿ ಕೇಳಿದರು.
ಪ್ರಜ್ವಲ್ ರೇವಣ್ಣ ಪ್ರಕರಣ ನಾವು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡ ನಂತರ ಆಗಿದ್ದು ಎಂದು ನನಗೆ ಅನಿಸುವುದಿಲ್ಲ. ಮೇಲ್ನೋಟಕ್ಕೆ ನೋಡಿದರೆ ಅನೇಕ ತಿಂಗಳುಗಳಿಂದ ವರ್ಷಗಳಿಂದ ನಡೆಯುತ್ತಿದೆ ಎನಿಸುತ್ತಿದೆ, ಹಾಗಿರುವಾಗ ನೀವೇಕೆ ಮೈತ್ರಿ ಮಾಡಿಕೊಂಡಿದ್ದಿರಿ ಮತ್ತು ಪ್ರಕರಣವನ್ನೇಕೆ ಬಹಿರಂಗಪಡಿಸಲಿಲ್ಲ, ಇಷ್ಟು ಸಮಯ ಏನು ಮಾಡುತ್ತಿದ್ದಿರಿ ಎಂದು ಕೇಳಿದರು.
ಈ ಪ್ರಕರಣದಲ್ಲಿ ಏನೋ ಇದೆ, ಏಪ್ರಿಲ್ 21ರಂದು ಪ್ರಕರಣ ಆಚೆ ಬಂದರೂ 28ರವರೆಗೆ ಎಫ್ಐಆರ್ ಆಗುವುದಿಲ್ಲ, ಇದರ ಅರ್ಥವೇನು, ನಿಮ್ಮ ಮಧ್ಯೆ ಹೊಂದಾಣಿಕೆಯಿದೆಯೇ ಎಂದು ಕಾಂಗ್ರೆಸ್ ನಾಯಕರನ್ನು ಪ್ರಹ್ಲಾದ್ ಜೋಶಿ ಪ್ರಶ್ನಿಸಿದ್ದಾರೆ.
Advertisement