ಮಾಜಿ ಸಚಿವ ರೇವಣ್ಣ ಬಂಧನ, ಪ್ರಜ್ವಲ್ ಗೆ #Bluecorner ನೊಟೀಸ್ ಸಾಧ್ಯತೆ; ಕೋವಿಶೀಲ್ಡ್ ಲಸಿಕೆ ಕುರಿತು ಸುಳ್ಳು ಸುದ್ದಿ: ಈ ದಿನದ ಪ್ರಮುಖ ಸುದ್ದಿಗಳು-04-05-2024

ಮಹಿಳೆಯ ಅಪಹರಣ ಪ್ರಕರಣ ಸಂಬಂಧ ಮಾಜಿ ಸಚಿವ ಹೆಚ್ ಡಿ ರೇವಣ್ಣ ಸಲ್ಲಿಸಿದ್ದ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ.
ಮಾಜಿ ಸಚಿವ ರೇವಣ್ಣ ಬಂಧನ, ಪ್ರಜ್ವಲ್ ಗೆ #Bluecorner ನೊಟೀಸ್ ಸಾಧ್ಯತೆ; ಕೋವಿಶೀಲ್ಡ್ ಲಸಿಕೆ ಕುರಿತು ಸುಳ್ಳು ಸುದ್ದಿ: ಈ ದಿನದ ಪ್ರಮುಖ ಸುದ್ದಿಗಳು-04-05-2024

1. ಮಾಜಿ ಸಚಿವ ರೇವಣ್ಣ ಬಂಧನ

ಮಹಿಳೆಯ ಅಪಹರಣ ಪ್ರಕರಣ ಸಂಬಂಧ ಮಾಜಿ ಸಚಿವ ಹೆಚ್ ಡಿ ರೇವಣ್ಣ ಸಲ್ಲಿಸಿದ್ದ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದ್ದು, ರೇವಣ್ಣ ಅವರನ್ನು ಬೆಂಗಳೂರಿನ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ನಿವಾಸದಿಂದ ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಸಂಬಂಧ ವಿಚಾರಣೆಗೆ ಹಾಜರಾಗಲು ಎಸ್ ಐಟಿ ರೇವಣ್ಣಗೆ ನೊಟೀಸ್ ಜಾರಿ ಮಾಡಿತ್ತು ಆದರೆ ವಿಚಾರಣೆಗೆ ರೇವಣ್ಣ ಗೈರು ಹಾಜರಾಗಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಇನ್ನು ರೇವಣ್ಣ ವಿರುದ್ಧದ ಅಪಹರಣ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ವರದಿಯಾಗಿದ್ದು, ಅಪಹರಣಕ್ಕೀಡಾಗಿದ್ದ ಮನೆ ಕೆಲಸದಾಕೆಯನ್ನು SIT ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ. ಮಹಿಳೆ ಹುಣಸೂರು ತಾಲೂಕಿನ ಕಾಳೇನಹಳ್ಳಿಯಲ್ಲಿ ರೇವಣ್ಣರ ಪಿಎ ರಾಜಶೇಖರ ಎಂಬುವರ ತೋಟದ ಮನೆಯಲ್ಲಿದ್ದರು ಎಂದು ತಿಳಿದುಬಂದಿದೆ.

2. ರೇವಣ್ಣ ನಿವಾಸದಲ್ಲಿ ಸ್ಥಳ ಮಹಜರು

ಅಲ್ಲದೆ, ಪ್ರಕರಣದ ಸಂಬಂಧ ಎಸ್ ಐಟಿ ಪೊಲೀಸರು ಹೆಚ್. ಡಿ. ರೇವಣ್ಣ ನಿವಾಸದಲ್ಲಿ ಸ್ಥಳ ಮಹಜರು ನಡೆಸಿದರು. ರೇವಣ್ಣ ಅವರ ನಿವಾಸದಲ್ಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಮಹಿಳೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಸ್ಥಳ ಮಹಜರು ನಡೆಸಲಾಯಿತು. ಈಮಧ್ಯೆ, ಲೈಂಗಿಕ ಕಿರುಕುಳ, ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಸಿಬಿಐ ಬ್ಲೂ ಕಾರ್ನರ್ ನೊಟೀಸ್ ಜಾರಿ ಮಾಡುವ ಸಾಧ್ಯತೆ ಇದೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐಟಿ ಅಧಿಕಾರಿಗಳು ಸಿಎಂ ಸಿದ್ದರಾಮಯ್ಯಗೆ ಮಾಹಿತಿ ನೀಡಿದ್ದಾರೆ. ಇಂದು ಸಿದ್ದರಾಮಯ್ಯ ಎಸ್ ಐಟಿ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು. ಈ ಸಭೆಯಲ್ಲಿ ಪ್ರಜ್ವಲ್ ರೇವಣ್ಣ ಬಂಧನಕ್ಕೆ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

3. ಪ್ರಜ್ವಲ್ ಪ್ರಕರಣ: ಸಿಎಂಗೆ ರಾಹುಲ್ ಗಾಂಧಿ ಪತ್ರ

ಪ್ರಜ್ವಲ್ ರೇವಣ್ಣ ವಿರುದ್ಧದ ಪ್ರಕರಣವನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದ್ದು, ರಾಹುಲ್ ಗಾಂಧಿ, CM ಸಿದ್ದರಾಮಯ್ಯಗೆ ಪತ್ರ ಬರೆದು, ಸಂತ್ರಸ್ತೆಯರಿಗೆ ಎಲ್ಲಾ ನೆರವು ನೀಡಲು ಮನವಿ ಮಾಡಿದ್ದಾರೆ. ಇಂತಹ ಘೋರ ಕೃತ್ಯದಲ್ಲಿ ಭಾಗಿಯಾದ ಎಲ್ಲರನ್ನೂ ಕಾನೂನು ಕ್ರಮದ ವ್ಯಾಪ್ತಿಗೆ ತರಬೇಕಾದ ಸಾಮೂಹಿಕ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಇದೇ ವೇಳೆ ಪ್ರಜ್ವಲ್ ರೇವಣ್ಣ ಇನ್ನೂ ವಿದೇಶದಲ್ಲಿಯೇ ಇದ್ದು, ಪಾಸ್‌ಪೋರ್ಟ್ ರದ್ದುಪಡಿಸಬೇಕು ಎಂದು ಸಿಎಂ ಮತ್ತೊಮ್ಮೆ ಪ್ರಧಾನಿಗೆ ಮನವಿ ಮಾಡಿದ್ದಾರೆ.

4. ಉತ್ತರ ಕರ್ನಾಟಕದ 6 ಜಿಲ್ಲೆಗಳಿಗೆ ಹವಾಮಾನ ಇಲಾಖೆ 5 ದಿನ ರೆಡ್ ಅಲರ್ಟ್

ರಾಜ್ಯದಲ್ಲಿ ಹಲವೆಡೆ ಮಳೆಯಾದರೂ ಬಿಸಿಲಿನ ತಾಪ ಏರಿಕೆಯಾಗುತ್ತಲೇ ಇದ್ದು, ಉತ್ತರ ಕರ್ನಾಟಕದ 6 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಮುಂದಿನ 5 ದಿನ ರೆಡ್ ಅಲರ್ಟ್ ನೀಡಿದೆ. ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಗಳಿಗೆ ರೆಡ್ ಅಲರ್ಟ್ ಹಾಗೂ ಕಲಬುರ್ಗಿ, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ತುಮಕೂರು ಮತ್ತು ಯಾದಗಿರಿ ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ನೀಡಲಾಗಿದೆ. ನೆನ್ನೆ ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಗೆ ಓರ್ವ ಮಹಿಳೆ ಹಾಗೂ 48ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಗಣಗಲು ಗ್ರಾಮದಲ್ಲಿ ವರದಿಯಾಗಿದೆ. ಸಿಡಿಲು ಬಡಿದು ಈ ದುರ್ಘಟನೆ ಸಂಭವಿಸಿದೆ. ಮಹಿಳೆ ಬೇವಿನ ಮರದಡಿ ಆಶ್ರಯ ಪಡೆದಿದ್ದರು. ಮೃತ ರತ್ನಮ್ಮ ಕುಟುಂಬಕ್ಕೆ ಜಿಲ್ಲಾಡಳಿತ 6 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.

5. ಕೋವಿಶೀಲ್ಡ್ ಲಸಿಕೆ ಕುರಿತು ಸುಳ್ಳು ಸುದ್ದಿ!

ಕೋವಿಶೀಲ್ಡ್ ಲಸಿಕೆ ಪಡೆದವರು ಐಸ್ ಕ್ರೀಮ್ ಮತ್ತು ತಂಪು ಪಾನೀಯಗಳನ್ನು ಸೇವಿಸಿದರೆ ಹೃದಯನಾಳದಲ್ಲಿ ರಕ್ತ ಹೆಪ್ಪುಗಟ್ಟಿ ಸಾವು ಸಂಭವಿಸಬಹುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಸುದ್ದಿ ಸುಳ್ಳು ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಈ ಸುದ್ದಿಯನ್ನು ಖಾಸಗಿ ಕಾಲೇಜಿನ ನೋಟಿಸ್ ಎಂಬಂತೆ ಬಿಂಬಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿತ್ತು. ಇಂತಹ ಯಾವುದೇ ಸುತ್ತೋಲೆಯನ್ನು ಇಲಾಖೆ ಪ್ರಕಟಿಸಿಲ್ಲ. ತಪ್ಪು ಮಾಹಿತಿ ಬಗ್ಗೆ ಜಾಗ್ರತೆ ವಹಿಸಬೇಕೆಂದು ಆರೋಗ್ಯ ಇಲಾಖೆ ಹೇಳಿದೆ.

6. ಕರೆನ್ಸಿ ಕಳ್ಳಸಾಗಣೆ ಯತ್ನ: ಚೆನ್ನೈ ಮೂಲದ ವ್ಯಕ್ತಿ  ಬಂಧನ

50 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ವಿದೇಶಿ, ಭಾರತೀಯ ಕರೆನ್ಸಿ ನೋಟುಗಳನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದ ಆರೋಪದ ಮೇಲೆ ಚೆನ್ನೈ ಮೂಲದ ವ್ಯಕ್ತಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಬ್ಯಾಂಕಾಕ್‌ಗೆ ತೆರಳುತ್ತಿದ್ದ ಪ್ರಯಾಣಿಕನ ಬಳಿ ಇದ್ದ ಸುಮಾರು 50 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ವಿದೇಶಿ ಮತ್ತು ಭಾರತೀಯ ಕರೆನ್ಸಿ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ. ತನಿಖೆ ಮುಂದುವರೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com