ಪ್ರಜ್ವಲ್ ಪ್ರಕರಣ: HDD, HDK ಹೆಸರು ಬಳಸದಂತೆ ತಡೆಯಾಜ್ಞೆ; ಕೇಂದ್ರದ ವಿರುದ್ಧ ಮತ್ತೆ ಸುಪ್ರೀಂನಲ್ಲಿ ಅರ್ಜಿ; ಮಂಡ್ಯದಲ್ಲಿ ಭ್ರೂಣಹತ್ಯೆ ವೇಳೆ ದಾಳಿ! ಈ ದಿನದ ಸುದ್ದಿ ಮುಖ್ಯಾಂಶಗಳು 07-05-2024

ಪ್ರಜ್ವಲ್ ಪ್ರಕರಣ: HDD, HDK ಹೆಸರು ಬಳಸದಂತೆ ತಡೆಯಾಜ್ಞೆ; ಕೇಂದ್ರದ ವಿರುದ್ಧ ಮತ್ತೆ ಸುಪ್ರೀಂನಲ್ಲಿ ಅರ್ಜಿ; ಮಂಡ್ಯದಲ್ಲಿ ಭ್ರೂಣಹತ್ಯೆ ವೇಳೆ ದಾಳಿ! ಈ ದಿನದ ಸುದ್ದಿ ಮುಖ್ಯಾಂಶಗಳು 07-05-2024

1. ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್, ಅಪಹರಣ ಪ್ರಕರಣದಲ್ಲಿ HDD HDK ಹೆಸರನ್ನು ಬಳಸದಂತೆ ಕೋರ್ಟ್ ತಡೆಯಾಜ್ಞೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣ ಮತ್ತು ಮಾಜಿ ಸಚಿವ ಎಚ್.ಡಿ. ರೇವಣ್ಣ ವಿರುದ್ಧದ ಅಪಹರಣ ಕೇಸ್‌ಗೆ ಸಂಬಂಧಪಟ್ಟಂತೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಹೆಸರನ್ನು ಬಳಸದಂತೆ ಕೋರ್ಟ್ ತಡೆಯಾಜ್ಞೆ ನೀಡಿದೆ. ಪ್ರಕರಣ ಸಂಬಂಧ ದೇವೇಗೌಡರ ಕುಟುಂಬದ ಹೆಸರುಗಳನ್ನು ಕೆಲವರು ಪ್ರಸ್ತಾಪ ಮಾಡುತ್ತಿದ್ದರು. ಇದರಿಂದ ಅವರ ಕುಟುಂಬಕ್ಕೆ ತೀವ್ರ ಮುಜುಗರವಾಗಿತ್ತು. ಅಲ್ಲದೆ ಎಚ್‌.ಡಿ. ಕುಮಾರಸ್ವಾಮಿ ನೇರವಾಗಿಯೇ ಇದರ ಬಗ್ಗೆ ಕಿಡಿಕಾರಿದ್ದರು. ಇದೀಗ ಇಬ್ಬರು ನಾಯಕರು ಸೆಷನ್ಸ್ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ಅಲ್ಲದೆ, ಪ್ರಜ್ವಲ್ ರೇವಣ್ಣಗೆ ಸಂಬಂಧಪಟ್ಟ ವಿಡಿಯೋಗಳನ್ನು ಹಂಚುವುದು ಶಿಕ್ಷಾರ್ಹ ಅಪರಾಧ. ವಾಟ್ಸಾಪ್ ಸೇರಿದಂತೆ ಸಾಮಾಜಿಕ ಮಾಧ್ಯಮದ ಯಾವುದೇ ಜಾಲತಾಣಗಳಲ್ಲಿ ವಿಡಿಯೋ ಹರಡಿದರೆ ಮಾಹಿತಿ ತಂತ್ರಜ್ಞಾನ ಕಾಯ್ದೆ ಕಲಂ 67(ಎ) ಐಟಿ ಕಾಯ್ದೆ ಕಲಂ 228ಎ(1), ಐಪಿಸಿ ಸೆಕ್ಷನ್ 292ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಂದು ಎಸ್ ಐಟಿ ಮುಖ್ಯಸ್ಥರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

2. HD Revanna ಬಸವನಗುಡಿ ಮನೆಯಲ್ಲಿ ಎಸ್ಐಟಿ ಸ್ಥಳ ಮಹಜರು

ಮಹಿಳೆಯ ಅಪಹರಣ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ವಿರುದ್ಧದ ಪ್ರಕರಣಗಳ ತನಿಖೆ ನಡೆಸುತ್ತಿರುವ SIT ತಂಡ ಇಂದು ಬೆಂಗಳೂರಿನ ಬಸವನಗುಡಿಯಲ್ಲಿರುವ ರೇವಣ್ಣ ನಿವಾಸದಲ್ಲಿ ಸ್ಥಳ ಮಹಜರು ನಡೆಸಿದೆ. ರೇವಣ್ಣ ಕುಟುಂಬದವರ ಅನುಪಸ್ಥಿತಿಯಲ್ಲಿ ಎಸ್‌ಐಟಿ ತಂಡ ರೇವಣ್ಮ ಪರ ವಕೀಲ ಗೋಪಾಲ್ ಅವರನ್ನು ಸ್ಥಳ ಪರಿಶೀಲನೆಗೆ ಕರೆಸಿತ್ತು. ಈ ಮಧ್ಯೆ, ಸ್ಥಳ ಪರಿಶೀಲನೆಗೆ ನೋಟಿಸ್ ನೀಡಿದ್ದರೂ ನನ್ನನ್ನು ಮನೆಯೊಳಗೆ ಬಿಡಲಿಲ್ಲ ಎಂದು ಅವರ ಪರ ವಕೀಲ ಗೋಪಾಲ್‌ ಆರೋಪಿಸಿದ್ದಾರೆ. ಎರಡು ದಿನಗಳ ಹಿಂದೆ ಹೊಳೆನರಸೀಪುರದಲ್ಲಿರುವ ರೇವಣ್ಣ ಮನೆಯಲ್ಲಿ ಎಸ್‌ಐಟಿ ಪರಿಶೀಲನೆ ನಡೆಸಿತ್ತು. ರೇವಣ್ಣ ಎರಡು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಮನೆಕೆಲಸದವರಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ರೇವಣ್ಣ ಅವರ ಪುತ್ರ ಪ್ರಜ್ವಲ್ ಕೂಡ ಆರೋಪಿಯಾಗಿದ್ದಾರೆ.

3. ಬರ ಪರಿಹಾರ ಮೊತ್ತ ಬಿಡುಗಡೆಗೆ ನಿರ್ದೇಶನ ಕೋರಿ ಸುಪ್ರೀಂ ಕೋರ್ಟ್ ಗೆ ಮತ್ತೆ ಅರ್ಜಿ

ಬರ ನಿರ್ವಹಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ಹಣ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಕರ್ನಾಟಕ ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಜುಲೈನಲ್ಲಿ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ. ಬರ ನಿರ್ವಹಣೆಗಾಗಿ ಕರ್ನಾಟಕ ಸರ್ಕಾರಕ್ಕೆ ಸುಮಾರು ರೂ. 3,400 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಏಪ್ರಿಲ್ 29 ರಂದು ಉನ್ನತ ನ್ಯಾಯಾಲಯಕ್ಕೆ ಹೇಳಿತ್ತು. ಆದರೆ ಇನ್ನು ಹಣ ಬಿಡುಗಡೆಯಾಗದ ಕಾರಣ ರಾಜ್ಯ ಸರ್ಕಾರ ಮತ್ತೆ ಕೋರ್ಟ್ ಮೆಟ್ಟಿಲೇರಿತ್ತು. ಮತ್ತೊಂದೆಡೆ ಚಾಮರಾಜನಗರದಲ್ಲಿ ಧಾರಾಕಾರ ಮಳೆ ಹಾಗೂ ವಿಪರೀತ ಗಾಳಿಯ ಪರಿಣಾಮ 25 ಕೋಟಿ ರೂಪಾಯಿ ಮೌಲ್ಯದ ಬಾಳೆ ಬೆಳೆ ನಾಶವಾಗಿದೆ. 900 ರೈತರು ಈ ಬೆಳೆ ನಷ್ಟ ಎದುರಿಸಿದ್ದು, 1,250 ಎಕರೆ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ. ರೈತರು ಎಕರೆಗೆ ಕನಿಷ್ಠ 2 ಲಕ್ಷ ರೂ. ನಷ್ಟ ಅನುಭವಿಸಿದ್ದಾರೆ.

4. ಚುನಾವಣಾ ಕರ್ತವ್ಯದಲ್ಲಿದ್ದ ಇಬ್ಬರು ಅಧಿಕಾರಿಗಳು ಹೃದಯಾಘಾತದಿಂದ ಸಾವು

ರಾಜ್ಯದ 14 ಲೋಕಸಭೆ ಕ್ಷೇತ್ರಗಳಿಗೆ ಮೇ 07ರಂದು ನಡೆಯಲಿರುವ ಎರಡನೇ ಹಂತದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಇಬ್ಬರು ಅಧಿಕಾರಿಗಳು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬಾಗಲಕೋಟೆಯ ಮುಧೋಳ ನಗರದಲ್ಲಿ ಸರ್ಕಾರಿ ಶಾಲಾ ಶಿಕ್ಷಕ ಗೋವಿಂದಪ್ಪ ಸಿದ್ದಾಪುರ ಬಸ್ ಹತ್ತುವ ವೇಳೆ ದಿಢೀರ್ ಹೃದಯಾಘಾತದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಂದೆಡೆ ಬೀದರ್ ನ ಚಿಟಗುಪ್ಪಾ ತಾಲೂಕಿನ ಕೋಡಂಬಲ್ ಚೆಕ್ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಿಸುವಾಗ ಸಹಾಯಕ ಕೃಷಿ ಅಧಿಕಾರಿ ಆನಂದ್ ಎಂಬುವವರಿಗೆ ಹೃದಯಾಘಾತವಾಗಿತ್ತು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲು ಕರೆದೊಯ್ಯಲಾಯಿತು. ಆದರೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

5. ಮಂಡ್ಯದಲ್ಲಿ ಭ್ರೂಣಹತ್ಯೆ ವೇಳೆ ದಾಳಿ; ಮೂವರ ಬಂಧನ.

ಪಾಂಡವಪುರ ಆರೋಗ್ಯ ಇಲಾಖೆ ಕ್ವಾರ್ಟರ್ಸ್ ನಲ್ಲಿ ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ನಡೆಯುತ್ತಿರುವ ಸಂಬಂಧ ನಡೆಸಿದ ದಾಳಿ ವೇಳೆ ಗರ್ಭಪಾತಕ್ಕೆ ಬಂದಿದ್ದ ಮೈಸೂರು ಮೂಲದ ಮಹಿಳೆಯನ್ನು ರಕ್ಷಣೆ ಮಾಡಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಪಾಂಡವಪುರ ತಾಲೂಕು ಆಸ್ಪತ್ರೆ ಆಂಬುಲೆನ್ಸ್ ಚಾಲಕ ಆನಂದ್, ಆಸ್ಪತ್ರೆಯ ಡಿ ಗ್ರೂಪ್ ಸಿಬ್ಬಂದಿ ಅಶ್ವಿನಿ ಹಾಗೂ ಮತ್ತೊಬ್ಬ ಮಹಿಳೆಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com