ಪ್ರಜ್ವಲ್ ರೇವಣ್ಣ ರಾಸಲೀಲೆ ಪ್ರಕರಣ: ಡಿಜಿಪಿ ಜೊತೆ ಸಿಎಂ ಸಿದ್ದರಾಮಯ್ಯ ಚರ್ಚೆ
ಬೆಂಗಳೂರು: ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ದೇಶಕ್ಕೆ ಕರೆತರುವ ಪ್ರಯತ್ನದ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ರಾಜ್ಯ ಪೊಲೀಸ್ ಮುಖ್ಯಸ್ಥ ಅಲೋಕ್ ಮೋಹನ್ ಅವರೊಂದಿಗೆ ಚರ್ಚೆ ನಡೆಸಿದರು.
ಮೇ 1 ರಂದು ಎಸ್ಐಟಿ ನೋಟಿಸ್ ಗೆ ಫೇಸ್‌ಬುಕ್ ಮೂಲಕ ಪ್ರತಿಕ್ರಿಯಿಸಿದ್ದ ಪ್ರಜ್ವಲ್ ರೇವಣ್ಣ, ಭಾರತಕ್ಕೆ ಮರಳಲು ಏಳು ದಿನ ಸಮಯ ಕೋರಿದ್ದರು. ಆದರೆ, ಇದುವರೆಗೂ ಅವರು ದೇಶಕ್ಕೆ ವಾಪಸ್ ಆಗಿಲ್ಲ ಮತ್ತು ಅವರು ಹಿಂದಿರುಗುವ ಯಾವುದೇ ಸೂಚನೆಗಳಿಲ್ಲ.
ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪದ ಕುರಿತು ತನಿಖೆಗೆ ಆದೇಶಿಸುವಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಸಿಎಂಗೆ ಪತ್ರ ಬರೆದ ನಂತರ 33 ವರ್ಷದ ಹಾಸನ ಜೆಡಿಎಸ್ ಸಂಸದ ಜರ್ಮನಿಗೆ ಹಾರಿದ್ದಾರೆ ಎಂದು ವರದಿಯಾಗಿದೆ.
ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದ್ದು, ಪ್ರಜ್ವಲ್‌ಗೆ ಎರಡು ಬಾರಿ ನೋಟಿಸ್ ಜಾರಿ ಮಾಡಿದೆ.
ಪ್ರಜ್ವಲ್ ಅವರ ತಂದೆ ಹಾಗೂ ಶಾಸಕ ಎಚ್ ಡಿ ರೇವಣ್ಣ ಅವರನ್ನು ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿಲಾಗಿದ್ದು, ನಾಲ್ಕು ದಿನಗಳ ಕಾಲ ಎಸ್ಐಟಿ ವಶಕ್ಕೆ ನೀಡಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ