ಪ್ರಜ್ವಲ್ ವಿರುದ್ಧ ದೂರು ನೀಡುವಂತೆ ಮಹಿಳೆಗೆ ಬೆದರಿಕೆ: NCW. HD ರೇವಣ್ಣಗೆ ಇನ್ನು 3 ದಿನ ಜೈಲೇ ಗತಿ. SSLC ಫಲಿತಾಂಶ: ಶೇ. 73ರಷ್ಟು ವಿದ್ಯಾರ್ಥಿಗಳು ಪಾಸ್! ಇವು ಇಂದಿನ ಸುದ್ದಿ ಮುಖ್ಯಾಂಶಗಳು - 09-05-24

ಪ್ರಜ್ವಲ್ ವಿರುದ್ಧ ದೂರು ನೀಡುವಂತೆ ಮಹಿಳೆಗೆ ಬೆದರಿಕೆ: NCW. HD ರೇವಣ್ಣಗೆ ಇನ್ನು 3 ದಿನ ಜೈಲೇ ಗತಿ. SSLC ಫಲಿತಾಂಶ: ಶೇ. 73ರಷ್ಟು ವಿದ್ಯಾರ್ಥಿಗಳು ಪಾಸ್! ಇವು ಇಂದಿನ ಸುದ್ದಿ ಮುಖ್ಯಾಂಶಗಳು - 09-05-24

1. HDRevanna ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ. ಮೂರು ದಿನ ಜೈಲೇ ಗತಿ.

ಮೈಸೂರಿನ ಕೆ.ಆರ್.ನಗರದ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಬಂಧನವಾಗಿರುವ ಮಾಜಿ ಸಚಿವ ಎಚ್.ಡಿ.ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ ಆಗಿದೆ. ಹೊಳೆನರಸೀಪುರ ಶಾಸಕ ಎಚ್.ಡಿ.ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಸುದೀರ್ಘವಾದ ವಾದ ಪ್ರತಿವಾದ ಆಲಿಸಿ ಹೆಚ್ಚಿನ ವಿಚಾರಣೆಗಾಗಿ ಮೇ 13ಕ್ಕೆ ಮುಂದೂಡಿದೆ‌. ಅಲ್ಲದೆ, ಎಸ್‌ಐಟಿ ಪ್ರಕರಣಗಳನ್ನು ನಡೆಸಲು ಮೊದಲಿಗೆ ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ಬಿಎನ್‌ ಜಗದೀಶ್‌ ಅವರನ್ನು ನೇಮಕ ಮಾಡಲಾಗಿತ್ತು. ಆದರೆ ಅವರು ರಾಜಿನಾಮೆ ನೀಡಿದ್ದು ಇದೀಗ ಎಸ್‌ಐಟಿ ಪರವಾಗಿ ವಾದಿಸಲು ಹಿರಿಯ ವಕೀಲರಾದ ಅಶೋಕ್‌ ನಾಯಕ್‌ ಮತ್ತು ಜಯ್ನಾ ಕೊಠಾರಿ ಅವರನ್ನು ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ನೇಮಕ ಮಾಡಲಾಗಿದೆ.

2. SSLC ಫಲಿತಾಂಶ: ಶೇಕಡ 73ರಷ್ಟು ವಿದ್ಯಾರ್ಥಿಗಳು ಉತೀರ್ಣ

ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟವಾಗಿದ್ದು ಶೇಕಡ 73ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಉಡುಪಿ ಜಿಲ್ಲೆ ಶೇಕಡಾ 94ರೊಂದಿಗೆ ಪ್ರಥಮ ಸ್ಥಾನ ಪಡೆದಿದರೆ, ಯಾದಗಿರಿ ಶೇ 50.59ರಷ್ಟು ಫಲತಾಂಶದೊಂದಿಗೆ ಕೊನೆಯ ಸ್ಥಾನದಲ್ಲಿದೆ. ಎಂದಿನಂತೆ ಫಲಿತಾಂಶದಲ್ಲಿ ಬಾಲಕಿಯರು ಹಾಗೂ ಗ್ರಾಮೀಣ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಬಾಗಲಕೋಟೆಯ ವಿದ್ಯಾರ್ಥಿನಿ ಅಂಕಿತಾ ಬಸಪ್ಪ 625ಕ್ಕೆ 625 ಅಂಕ ಪಡೆದು ಪ್ರಥಮ ರ್ಯಾಂೆಕ್ ಗಳಿಸಿದ್ದರೆ. 7 ವಿದ್ಯಾರ್ಥಿಗಳು 624 ಅಂಕ ಗಳಿಸಿ 2ನೇ ರ್ಯಾಂ ಕ್‌ ಹಂಚಿಕೊಂಡಿದ್ದಾರೆ. SSLC ಫಲಿತಾಂಶದ ಕುರಿತಂತೆ ಸುದ್ದಿಗೋಷ್ಠಿ ನಡೆಸಿದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಅಧ್ಯಕ್ಷೆ ಪೂರ್ಣಿಮಾ ಅವರು,, ಗ್ರಾಮೀಣ ಭಾಗಗಳ ವಿದ್ಯಾರ್ಥಿಗಳ ಒಟ್ಟಾರೆ ಫಲಿತಾಂಶ 74.17ರಷ್ಟಿದ್ದರೆ, ನಗರ ಪ್ರದೇಶದ ವಿದ್ಯಾರ್ಥಿಗಳು ಶೇಕಡಾವಾರು ಫಲಿತಾಂಶ ಶೇ.72.83ರಷ್ಟಿದೆ ಎಂದು ಹೇಳಿದರು. ಕಳೆದ ವರ್ಷಕ್ಕಿಂತ ವಿದ್ಯಾರ್ಥಿಗಳ ತೇರ್ಗಡೆಯ ಶೇಕಡಾವಾರು ಫಲಿತಾಂಶದಲ್ಲಿ ಶೇ.10ರಷ್ಟು ಕುಸಿತ ಕಂಡುಬಂದಿದೆ. ರಾಜ್ಯದ 78 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ ಎಂದು ತಿಳಿಸಿದರು.

3. ಎಸ್‌ಐಟಿ ತನಿಖೆ ದಾರಿ ತಪ್ಪುತ್ತಿದೆ: ರಾಜ್ಯಪಾಲರಿಗೆ ಜೆಡಿಎಸ್ ದೂರು

ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಕುರಿತು ತನಿಖೆ ನಡೆಸುತ್ತಿರುವ ಎಸ್‌ಐಟಿ ದಾರಿ ತಪ್ಪುತ್ತಿದೆ ಎಂದು ಆರೋಪಿಸಿ ಜೆಡಿಎಸ್ ಇಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ದೂರು ನೀಡಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ಡಿ.ಕುಮಾರಸ್ವಾಮಿ ನೇತೃತ್ವದಲ್ಲಿನ ನಿಯೋಗ ರಾಜಭವನಕ್ಕೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು. ಈಮಧ್ಯೆ, ವಿಶೇಷ ತನಿಖಾ ತಂಡ ಸಂತ್ರಸ್ತ ಮಹಿಳೆಯೊಬ್ಬರನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ನಾಲ್ವರನ್ನು ಬಂಧಿಸಿದೆ. ಶಾಸಕ ಹೆಚ್. ಡಿ. ರೇವಣ್ಣ ಅವರನ್ನು ಎಸ್ ಐಟಿ ಈಗಾಗಲೇ ಬಂಧಿಸಿದ್ದು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಕರಣದಲ್ಲಿ ಎಚ್ ಡಿ ರೇವಣ್ಣ ಪಾತ್ರ ಪತ್ತೆ ಮಾಡಲು ಮೈಸೂರಿನ ಕೆ.ಆರ್. ನಗರದ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದೇ ಪ್ರಕರಣದಲ್ಲಿ ರೇವಣ್ಣ ಅವರ ಆಪ್ತ ಸತೀಶ್ ಬಾಬಣ್ಣ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಮೂರನೇ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ ಹೇಳಿದ್ದರು.

4. ಪ್ರಜ್ವಲ್ ವಿರುದ್ಧ ದೂರು ದಾಖಲಿಸುವಂತೆ ಬೆದರಿಕೆ: NCW

ಈಮಧ್ಯೆ, ಪ್ರಜ್ವಲ್ ಸೆಕ್ಸ್ ವಿಡಿಯೋ ಹಗರಣ ಮತ್ತೊಂದು ತಿರುವು ಪಡೆದಿದ್ದು, ರಾಷ್ಟ್ರೀಯ ಮಹಿಳಾ ಆಯೋಗ ಗುರುವಾರ ಈ ಪ್ರಕರಣದ ಮಹಿಳಾ ದೂರುದಾರರಲ್ಲಿ ಒಬ್ಬರು, ಸುಳ್ಳು ದೂರು ದಾಖಲಿಸಲು ತನಗೆ ಬಲವಂತಪಡಿಸಲಾಗಿದೆ ಎಂದು ಹೇಳಿದ್ದಾಗಿ ತಿಳಿಸಿದೆ. “ಒಬ್ಬ ಮಹಿಳಾ ದೂರುದಾರೊಬ್ಬರು ದೂರು ದಾಖಲಿಸಲು ಆಯೋಗಕ್ಕೆ ಬಂದರು, ತಮ್ಮನ್ನು ಕರ್ನಾಟಕ ಪೊಲೀಸ್ ಅಧಿಕಾರಿಗಳು ಎಂದು ಪರಿಚಯಿಸಿಕೊಂಡು ಈ ಪ್ರಕರಣದಲ್ಲಿ ಸುಳ್ಳು ದೂರು ನೀಡುವಂತೆ ಒತ್ತಾಯಿಸಿದರು. ತನಗೆ ಅನಾಮಧೇಯ ಸಂಖ್ಯೆಗಳಿಂದ ಕರೆಗಳು ಬಂದಿದ್ದು, ದೂರು ದಾಖಲಿಸುವಂತೆ ಬೆದರಿಕೆ ಹಾಕಿರುವುದಾಗಿ ಮಹಿಳೆ ಹೇಳಿಕೊಂಡಿದ್ದಾರೆ" ಎಂದು NCW ತನ್ನ ಹೇಳಿಕೆಯಲ್ಲಿ ತಿಳಿಸಿದೆ.

5. ಅತಿಥಿ ಉಪನ್ಯಾಸಕಿ ಆತ್ಮಹತ್ಯೆಗೆ ಶರಣು

ಮನೆಯಲ್ಲಿ ನೇಣುಬಿಗಿದುಕೊಂಡು ಅತಿಥಿ ಉಪನ್ಯಾಸಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಗಾಯತ್ರಿ ಬಡಾವಣೆಯಲ್ಲಿ ನಡೆದಿದೆ. ಸೋಮಶೇಖರ್, ಭಾಗ್ಯ ದಂಪತಿ ಪುತ್ರಿ 34 ವರ್ಷದ ದೀಪಾ ಆತ್ಮಹತ್ಯೆ ಮಾಡಿಕೊಂಡ ರ್ದುದೈವಿ. ದೀಪಾ ಚನ್ನರಾಯಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com