ಕೊಡಗು: ಬಾಲಕಿಯ ರುಂಡ ಕತ್ತರಿಸಿದ ಆರೋಪಿ ಪ್ರಕಾಶ್ ನಂತರ ಮಾಡಿದ್ದೇನು, ಮೀನಾ ತಾಯಿಗೆ ಶಾಸಕ ಡಾ. ಮಂತರ್ ಗೌಡ ಸಾಂತ್ವನ

10ನೇ ತರಗತಿ ತೇರ್ಗಡೆ ಹೊಂದಿದ ಬಾಲಕಿ ಜೊತೆ ವಿವಾಹ ನಿಶ್ಚಿತಾರ್ಥ ಮುರಿದು ಬಿದ್ದ ಸಿಟ್ಟು, ಆಕ್ರೋಶದಲ್ಲಿ ಬಾಲಕಿಯ ತಲೆ ಕಡಿದುಕೊಂಡು ಹೋದ ಆರೋಪಿ ಪ್ರಕಾಶ್ ಪೊಲೀಸರ ಸ್ಥಳ ಮಹಜರು ವೇಳೆ ಏನು ಮಾಡಿದನು ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾನೆ.
ಆರೋಪಿ ಪ್ರಕಾಶ್ ನನ್ನು ಸ್ಥಳ ಮಹಜರಿಗೆ ಕರೆತಂದಿರುವುದು
ಆರೋಪಿ ಪ್ರಕಾಶ್ ನನ್ನು ಸ್ಥಳ ಮಹಜರಿಗೆ ಕರೆತಂದಿರುವುದು
Updated on

ಕೊಡಗು: 10ನೇ ತರಗತಿ ತೇರ್ಗಡೆ ಹೊಂದಿದ ಬಾಲಕಿ ಜೊತೆ ವಿವಾಹ ನಿಶ್ಚಿತಾರ್ಥ ಮುರಿದು ಬಿದ್ದ ಸಿಟ್ಟು, ಆಕ್ರೋಶದಲ್ಲಿ ಬಾಲಕಿಯ ತಲೆ ಕಡಿದುಕೊಂಡು ಹೋದ ಆರೋಪಿ ಪ್ರಕಾಶ್ ಪೊಲೀಸರ ಸ್ಥಳ ಮಹಜರು ವೇಳೆ ಏನು ಮಾಡಿದನು ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾನೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕುಂಬಾರಗಡಿಗೆ ಗ್ರಾಮದಲ್ಲಿ ನಡೆದಿದ್ದ ಅಪ್ರಾಪ್ತ ಬಾಲಕಿಯ ಬರ್ಬರ ಹತ್ಯೆ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಬಂಧನವಾಗಿರುವ ಆರೋಪಿ ಪ್ರಕಾಶ್ ನನ್ನು ಸ್ಥಳ ಮಹಜರು ವೇಳೆ ಪೊಲೀಸರು ಬಾಯಿಬಿಡಿಸಿದ್ದು, ಬಾಲಕಿಯ ತಲೆ ಕಡಿದು ಅಡಗಿಸಿಟ್ಟಿದ್ದ ಸ್ಥಳಕ್ಕೆ ಕರೆದೊಯ್ದರು.

ಆರೋಪಿ ಪ್ರಕಾಶ್ ನನ್ನು ಸ್ಥಳ ಮಹಜರಿಗೆ ಕರೆತಂದಿರುವುದು
ಕೊಡಗು: ಮದುವೆ ಮುರಿದು ಬಿದ್ದ ಹತಾಶೆಯಿಂದ 10ನೇ ತರಗತಿ ಬಾಲಕಿ ಕೊಂದ ಆರೋಪಿ: SP

ತಲೆಯನ್ನು ತೋರಿಸುತ್ತಿದ್ದಂತೆ ಅದನ್ನು ವಶಕ್ಕೆ ಪಡೆಯಲು ಪೊಲೀಸರು ಮಹಜರಿಗಾಗಿ ಬಾಲಕಿಯ ಅಣ್ಣನನ್ನು ಸ್ಥಳಕ್ಕೆ ಕರೆದರು. ಈ ವೇಳೆ ತಮ್ಮ ಮುದ್ದಿನ ತಂಗಿ ತಲೆಯನ್ನು ನೋಡಿದ ಅಣ್ಣ ದಿಲೀಪ್ ಆಕ್ರೋಶ ಗೊಂಡಿದ್ದ. ತೀವ್ರ ರಕ್ತದೊತ್ತಡಕ್ಕೆ ಒಳಗಾಗಿ ಮೈಒದರಾಡಲು ಶುರುಮಾಡಿದ. ಬಳಿಕ ಪೊಲೀಸರು ಆತನಿಗೆ ನೀರು ಕುಡಿಸಿ ಸಮಾಧಾನ ಪಡಿಸುತ್ತಿದ್ದಂತೆ ಅಲ್ಲಿಂದ ನೇರವಾಗಿ ಕೋವಿ ತೆಗೆದುಕೊಂಡು ಬಂದು ಆರೋಪಿಯ ಮೇಲೆ ಹಲ್ಲೆ ಮಾಡುವುದಕ್ಕೆಂದು ಮುಂದಾದ. ಆದರೆ ಪೊಲೀಸರು ಆತನನ್ನು ತಡೆದರು.

ಒಂದು ವರ್ಷದಿಂದ ಪ್ರೀತಿಸುತ್ತಿದ್ದ ಪ್ರಕಾಶ್: ಕಳೆದ ಒಂದು ವರ್ಷದ ಹಿಂದೆ ಆರೋಪಿ ಪ್ರಕಾಶ್ ಪ್ರೀತಿ ಪ್ರೇಮದ ಹೆಸರಿನಲ್ಲಿ ಬಾಲಕಿಯ ಹಿಂದೆ ಬಿದ್ದಿದ್ದನಂತೆ. ಬಾಲಕಿಯ ಆಗುಹೋಗುಗಳನೆಲ್ಲಾ ನೋಡಿಕೊಳ್ಳುತ್ತಿದ್ದವನು, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕಿಯ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ವ್ಯಯಿಸಿದ್ದನಂತೆ. ಆದರೆ ಕಳೆದ ಹದಿನೈದು ದಿನಗಳ ಹಿಂದೆ ಬಾಲಕಿ ಪ್ರಕಾಶ್ ಗೆ ಕರೆ ಮಾಡಿ ನಿನ್ನನ್ನು ಮದುವೆ ಆಗುವುದಿಲ್ಲ. ಅದೇನು ಮಾಡಿಕೊಳ್ಳುತ್ತೀಯೋ ಮಾಡಿಕೋ ಎಂದು ಸವಾಲು ಹಾಕಿದ್ದಳಂತೆ. ಜೊತೆಗೆ ಮೊನ್ನೆ ನಿಶ್ಚಿತಾರ್ಥದ ವೇಳೆಯೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಬಾಲ್ಯವಿವಾಹ ಎಂದು ಅದಕ್ಕೆ ಅಡ್ಡಿಪಡಿಸಿದ್ದರು. ಇದರಿಂದ ಆರೋಪಿ ಪ್ರಕಾಶ್ ಸಿಟ್ಟಿಗೆದ್ದಿದ್ದ ಎನ್ನುವ ಸತ್ಯವನ್ನು ಪೊಲೀಸರ ತನಿಖೆ ವೇಳೆ ಬಾಯಿಬಿಟ್ಟಿದ್ದಾನೆ.

ಕ್ರೋಧಗೊಂಡಿದ್ದ ಪ್ರಕಾಶ್ ಬಾಲಕಿಯ ರುಂಡ ಚೆಂಡಾಡಿದ್ದ. ಅಷ್ಟಕ್ಕೆ ಸುಮ್ಮನಾಗದೆ ಬಾಲಕಿಯ ತಲೆಯನ್ನು ಅಲ್ಲಿಂದ ಕೊಂಡೊಯ್ದು ಯಾರೂ ನುಗ್ಗಲಾಗದ ದಟ್ಟಾರಣ್ಯದ ಪೊದೆಯೊಳಗೆ ಅಡಗಿಸಿಟ್ಟಿದ್ದ. ತಲೆಯನ್ನು ಮುಂದಿಟ್ಟುಕೊಂಡು ಬರೋಬ್ಬರಿ ಎರಡು ಗಂಟೆಗಳ ಕಾಲ ಪೊದೆಯೊಳಗೆ ಅವಿತು ಕುಳಿತಿದ್ದ ಎನ್ನುವ ಭಯಾನಕ ಸತ್ಯವನ್ನು ಬಾಯ್ಬಿಟ್ಟಿದ್ದಾನೆ.

ಹತ್ಯೆಯ ವಿಷಯ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ ಸ್ಥಳಕ್ಕೆ ಪೊಲೀಸ್ ಪಡೆ ನುಗ್ಗಿತ್ತು. ಹತ್ತಾರು ಪೊಲೀಸರು ಪಾಪಿಯ ಬಂಧನಕ್ಕೆ ತಲಾಶ್ ನಡೆಸುತ್ತಿದ್ದರೆ ಹತ್ಯೆ ನಡೆದಿದ್ದ ಸ್ಥಳದ ಎದುರಿಗೆ ದೂರದಲ್ಲಿದ್ದ ಬೆಟ್ಟದಲ್ಲಿಯೇ ಈ ರಾಕ್ಷಸ ಅಡಗಿ ಕುಳಿತಿದ್ದ. ಅಲ್ಲಿಂದಲೇ ಹತ್ಯೆಯಾಗಿರುವ ಸ್ಥಳದಲ್ಲಿ ಏನೆಲ್ಲಾ ನಡೆಯುತ್ತಿದೆ ಎನ್ನುವುದನ್ನು ಗಮನಿಸುತ್ತಾ ಕುಳಿತಿದ್ದನಂತೆ. ಆದರೆ ಬಾಲಕಿಯನ್ನು ಹತ್ಯೆ ಮಾಡಲೇಬೇಕು ಎಂದು ಫ್ರೀ ಪ್ಲಾನ್ ಮಾಡಿದ್ದ ಎನ್ನುವುದು ಬಾಲಕಿಯ ಅಣ್ಣಂದಿರು ಮತ್ತು ಚಿಕ್ಕಪ್ಪಂದಿರ ಗಂಭೀರ ಆರೋಪ. ಇದೆಲ್ಲವನ್ನು ಗಮನಿಸಿದರೆ ಪ್ಲಾನ್ ಮಾಡಿಯೇ ನನ್ನ ತಂಗಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಮೀನಾ ತಾಯಿಗೆ ಶಾಸಕ ಡಾ. ಮಂತರ್ ಗೌಡ ಸಾಂತ್ವನ: ಮೈಸೂರು ಕೆ.ಆರ್. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೀನಾ ತಾಯಿ ಜಾನಕಿಗೆ ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂತರ್ ಗೌಡ ಸಾಂತ್ವನ ಹೇಳಿದ್ದಾರೆ.

ಆರೋಪಿ ಪ್ರಕಾಶ್ ಹಲ್ಲೆಯಿಂದ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಾನಕಿ ಕುಟುಂಬ ವರ್ಗಕ್ಕೆ ಶಾಸಕ ಮಂತರ್ ಸಾಂತ್ವನ. ಆರೋಪಿಗೆ ಕಠಿಣ ಕಾನೂನು ಕ್ರಮ ಆಗಲಿದೆ. ಇಂಥ ಪ್ರಕರಣ ಸಮಾಜದಲ್ಲಿ ಮರು ಕಳಿಸಬಾರದು ಎಂದರು.

ಮೀನಾ ಕುಟುಂಬದ ಶೋಕದಲ್ಲಿ ತಾನೂ ಭಾಗಿ ಆಗಿರುವುದಾಗಿ ಹೇಳಿದ ಶಾಸಕ ಡಾ. ಮಂತರ್ ಗೌಡ, ಜಾನಕಿ ಅವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದರಿಗೆ ಸೂಚನೆ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com