ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ತನಿಖೆಯನ್ನು ಸಿಬಿಐಗೆ ವರ್ಗಾಯಿಸುವುದನ್ನು ತಳ್ಳಿಹಾಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕರಣದ ತನಿಖೆ ನಡೆಸುತ್ತಿರುವ ರಾಜ್ಯ ಪೊಲೀಸರ ವಿಶೇಷ ತನಿಖಾ ತಂಡದ ಮೇಲೆ ನಂಬಿಕೆ ಇಟ್ಟಿರುವುದಾಗಿ ಹೇಳಿದ್ದಾರೆ. ರಾಜ್ಯ ಪೊಲೀಸರನ್ನು ಬಿಜೆಪಿ ಏಕೆ ನಂಬುತ್ತಿಲ್ಲ. 'ನ್ಯಾಯಯುತ ತನಿಖೆ' ನಡೆಸುತ್ತಿರುವ ಎಸ್‌ಐಟಿ ಬಗ್ಗೆ ಜನರ ಮನಸ್ಸಿನಲ್ಲಿ ಗೊಂದಲ ಮೂಡಿಸುವ ಉದ್ದೇಶದಿಂದ ದಾರಿತಪ್ಪಿಸುವ ಹೇಳಿಕೆಗಳನ್ನು ನೀಡುತ್ತಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯು ಒಂದು ಕಾಲದಲ್ಲಿ ಸಿಬಿಐ ಅನ್ನು 'ಭ್ರಷ್ಟಾಚಾರದ ತನಿಖಾ ದಳ' ಎಂದು ಕರೆದಿತ್ತು. ಕಾಂಗ್ರೆಸ್ ಪದೇ ಪದೆ ಬೇಡಿಕೆಯಿದ್ದರೂ ಬಿಜೆಪಿ ಅಧಿಕಾರದಲ್ಲಿದ್ದಾಗ ಒಂದೇ ಒಂದು ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಿಲ್ಲ. ಆಗಂತ ಸಿಬಿಐ ಮೇಲೆ ನಮಗೆ ನಂಬಿಕೆ ಇಲ್ಲ ಎಂದಲ್ಲ, ಸಿಬಿಐಗೆ ವಹಿಸಬೇಕಾದ ಪ್ರಕರಣಗಳನ್ನು ಸಿಬಿಐಗೆ ನೀಡುತ್ತೇವೆ ಎಂದರು.
ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿಸಲಾಗಿದ್ದ ಬಿಜೆಪಿ ನಾಯಕ ಮತ್ತು ವಕೀಲ ದೇವರಾಜೇಗೌಡರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಳೆದ ಶುಕ್ರವಾರ ತಡರಾತ್ರಿ ಚಿತ್ರದುರ್ಗ ಜಿಲ್ಲೆಯ ಗೂಳಿಹಾಲ್ ಟೋಲ್ ಗೇಟ್ ಬಳಿ ಅವರನ್ನು ಹಿರಿಯೂರು ಪೊಲೀಸರು ಬಂಧಿಸಿದ್ದರು. ನಿನ್ನೆ ವೈದ್ಯಕೀಯ ಚಿಕಿತ್ಸೆ ನಂತರ ಅವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದರು. ಮತ್ತೊಂದೆಡೆ ಪ್ರಜ್ವಲ್ ರೇವಣ್ಣರ ಪೆನ್ ಡ್ರೈವ್ ಪ್ರಕರಣದಲ್ಲಿ SIT ಬಿಜೆಪಿ ಮಾಜಿ ಶಾಸಕ ಪ್ರೀತಂಗೌಡ ಆಪ್ತ ಲಿಖಿತ್ ಮತ್ತು ಅವರ ಕಚೇರಿ ಸಿಬ್ಬಂದಿ ಚೇತನ್ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ನವೀನ್ ಗೌಡ ಮತ್ತು ಪುಟ್ಟರಾಜು ಎಂಬುವರಿಗಾಗಿ ಅಧಿಕಾರಿಗಳು ಹುಡುಕಾಟ ತೀವ್ರಗೊಳಿಸಿದ್ದಾರೆ.
ಬೆಂಗಳೂರಿನ ಓಲ್ಡ್ ಏರ್ ಪೋರ್ಟ್ ರಸ್ತೆಯ ಮುರುಗೇಶಪಾಳ್ಯದಲ್ಲಿ ತಂದೆ ಜತೆ ಕಾರು ತೊಳೆಯುವಾಗ 15 ವರ್ಷದ ಬಾಲಕ ಏಕಾಏಕಿ ಎಕ್ಸಿಲೇಟರ್ ತುಳಿದಿದ್ದರ ಪರಿಣಾಮ ಮನೆ ಮುಂದೆ ಆಟವಾಡುತ್ತಿದ್ದ 5 ವರ್ಷದ ಮಗುವಿನ ಮೇಲೆ ಕಾರು ಹರಿದು ಮೃತಪಟ್ಟಿದೆ. ಈ ಸಣ್ಣ ನಿರ್ಲಕ್ಷ್ಯದಲ್ಲಿ ಐದು ವರ್ಷ ಮಗು ಆರವ್ ಮೃತಪಟ್ಟಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇಂದು ಬೆಳಗ್ಗೆ 10.30ರ ಸುಮಾರಿಗೆ ಈ ದುರಂತ ನಡೆದಿದೆ. ಕಾರಿನ ಡ್ರೈವಿಂಗ್ ಸೀಟ್‌ನಲ್ಲಿ ಕುಳಿತಿದ್ದ 15 ವರ್ಷದ ಬಾಲಕ ಏಕಾಏಕಿ ಎಕ್ಸಿಲೇಟರ್ ತುಳಿದಿದ್ದಾನೆ. ಪರಿಣಾಮ ಕಾರು ರಭಸವಾಗಿ ಚಲಿಸಿದೆ. ಆ ಸಂದರ್ಭದಲ್ಲಿ ರಸ್ತೆಯಲ್ಲಿ ಆಡುತ್ತಿದ್ದ ಮಗುವಿಗೆ ಕಾರು ಡಿಕ್ಕಿಯಾಗಿದೆ. ಕಾರು ಗುದ್ದಿದ ರಭಸಕ್ಕೆ ಆರವ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸದ್ಯ ಮೃತದೇಹವನ್ನು ಮಣಿಪಾಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ತಂದೆಯೇ ಮಗಳ ಮೇಲೆ ಆತ್ಯಾಚಾರ ನಡೆಸಿರುವ ಹೀನ ಕೃತ್ಯ ತುಮಕೂರಿನ ತಿಪಟೂರು ತಾಲೂಕಿನ ಹಿಪ್ಪೆತೋಪು ಬಡವಾಣೆಯಲ್ಲಿ ನಡೆದಿದೆ. 13 ವರ್ಷದ ಅಪ್ರಾಪ್ತೆ ಮಗಳ ಮೇಲೆ ಆತ್ಯಾಚಾರ ನಡೆಸಿ ತಂದೆ ಪರಾರಿಯಾಗಿದ್ದಾನೆ. ಈ ಹಿಂದೆಯೂ ಒಮ್ಮೆ ಮಗಳ ಮೇಲೆ ಆತ್ಯಾಚಾರಕ್ಕೆ ಯತ್ನಿಸಿದ್ದ ಎನ್ನಲಾಗಿದೆ. ಈ ಘಟನೆ ಕುರಿತು ಸಂತ್ರಸ್ತೆಯ ತಾಯಿ ತಿಪಟೂರು ನಗರ ಠಾಣೆಗೆ ದೂರು ನೀಡಿದ್ದಾರೆ. ಈ ಘಟನೆ ಸಂಬಂಧ ಪೊಲೀಸರು ಆರೋಪಿ ವಿರುದ್ಧ ಪೋಕ್ಸೊ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಂಡ್ಯ ಮೂಲದ ನಟಿ ಪವಿತ್ರಾ ಜಯರಾಂ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. 35 ವರ್ಷದ ನಟಿ ಕನ್ನಡದ 'ರೋಬೋ ಫ್ಯಾಮಿಲಿ' ಹಾಸ್ಯ ಧಾರಾವಾಹಿ ಮೂಲಕ ನಟನೆಗೆ ಎಂಟ್ರಿ ಕೊಟ್ಟಿದ್ದರು. ನಂತರ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದು ಪ್ರಸ್ತುತ ತೆಲುಗಿನ ತ್ರಿನಯನಿ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಆಂಧ್ರದಿಂದ ಮಂಡ್ಯಕ್ಕೆ ಬರುತ್ತಿದ್ದಾಗ ಪವಿತ್ರ ಇದ್ದ ಕಾರು ಇಂದು ಬೆಳಿಗ್ಗೆ ಆಂಧ್ರದ ಕರ್ನೂಲಿನ ಬಳಿ ಅಪಘಾತಕ್ಕೆ ಈಡಾಗಿದೆ. ಭೀಕರ ಅಪಘಾತದಲ್ಲಿ ನಟಿ ಪವಿತ್ರಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಪವಿತ್ರಾ ಜಯರಂ ಕನ್ನಡ ಪ್ರೇಕ್ಷಕರಿಗೆ ಮಾತ್ರವಲ್ಲದೆ ತೆಲುಗು ಪ್ರೇಕ್ಷಕರಿಗೂ ಸಹ ಬಹಳ ಹತ್ತಿರವಾಗಿದ್ದರು.
Advertisement