
ಬೆಂಗಳೂರು: ಕೋಮು ದ್ವೇಷವನ್ನು ಹರಡಲು ಯತ್ನಿಸಿದ ಕನ್ನಡದ ಖಾಸಗಿ ಚಾನೆಲ್, ನಿರೂಪಕರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ತನ್ವೀರ್ ಅಹಮದ್ ಎ. ಎಂಬುವರು ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.
ಮೇ 9 ರಂದು ರಾತ್ರಿ 8.30ಕ್ಕೆ ಪ್ರಸಾರವಾದ ಕಾರ್ಯಕ್ರಮವೊಂದಲ್ಲಿ ಜನಸಂಖ್ಯೆಯ ಶೇಕಡಾವಾರು ಪ್ರಮಾಣವನ್ನು ಪ್ರದರ್ಶಿಸುವಾಗ, ಚಾನೆಲ್ ಹಿಂದೂ ಜನಸಂಖ್ಯೆಯ ಶೇಕಡಾವಾರು ಹಿನ್ನೆಲೆಯಲ್ಲಿ ಭಾರತೀಯ ಧ್ವಜವನ್ನು ಮತ್ತು ಮುಸ್ಲಿಂ ಜನಸಂಖ್ಯೆಯ ಶೇಕಡಾವಾರು ಹಿನ್ನೆಲೆಯಲ್ಲಿ ಪಾಕಿಸ್ತಾನದ ಧ್ವಜವನ್ನು ತೋರಿಸಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೂರಿನ ಪ್ರಕಾರ, ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಾಗಲು ಮುಸ್ಲಿಮರಿಗೆ ಕನಿಷ್ಠ ವಿವಾಹದ ವಯಸ್ಸು ಇಲ್ಲದಿರುವುದು ಒಂದು ಕಾರಣ. ಇಸ್ಲಾಮಿಕ್ ವೈಯಕ್ತಿಕ ಕಾನೂನಿನಿಂದಾಗಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಬಾಲ್ಯ ವಿವಾಹದ ವಿರುದ್ಧ ದೂರು ನೀಡಿದರೆ ಅವರು ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಆಂಕರ್ ಹೇಳಿದ್ದಾರೆ. ಈ ಕಾರಣದಿಂದಾಗಿ, ಅವರು ಬಾಲ್ಯ ವಿವಾಹಗಳು ಮತ್ತು ಹೆಚ್ಚಿನ ಮಕ್ಕಳನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.
ಬಾಲ್ಯವಿವಾಹ ನಿಷೇಧ ಕಾಯಿದೆಯು ಧರ್ಮದ ಭೇದವಿಲ್ಲದೆ ಎಲ್ಲರಿಗೂ ಬಾಲ್ಯವಿವಾಹವನ್ನು ನಿಷೇಧಿಸಿರುವುದರಿಂದ ಇದು ಸಂಪೂರ್ಣ ಸುಳ್ಳು. ನಂತರ, ಅವರು (ಆಂಕರ್) ಮಕ್ಕಳನ್ನು ಹೊಂದದಿರುವುದು ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಇದು ಮುಸ್ಲಿಂ ಸಮುದಾಯವನ್ನು ಅವಮಾನಿಸುವ ಉದ್ದೇಶವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಹಿಂದೂ ಮತ್ತು ಮುಸ್ಲಿಮ್ ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಮೂಲಕ ನಿರೂಪಕ ನೀಡಿದ ಕಾರ್ಯಕ್ರಮ ಮತ್ತು ಹೇಳಿಕೆಗಳ ಆಧಾರದಲ್ಲಿ ಸೆಕ್ಷನ್ 153(ಎ)(1)(ಎ) ಐಪಿಸಿಯ ಸ್ಪಷ್ಟ ಉಲ್ಲಂಘನೆಯಾಗಿದ್ದು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಒತ್ತಾಯಿಸಲಾಗಿದೆ.
Advertisement