ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಹಾಗೂ ಪೆನ್‌ಡ್ರೈವ್ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಗೆ ಬೆದರಿಕೆ ಹಾಕಿ ಅಪಹರಣ ಮಾಡಲು ಪ್ರಚೋದಿಸಿದ ಆರೋಪದ ಮೇಲೆ ಬಂಧನಕ್ಕೀಡಾಗಿದ್ದ ಶಾಸಕ ಎಚ್.ಡಿ.ರೇವಣ್ಣಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಇಂದು ಜಾಮೀನು ಅರ್ಜಿ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ ವಾದ ಪ್ರತಿವಾದಗಳನ್ನು ಆಲಿಸಿತು. 5 ಲಕ್ಷ ರೂಪಾಯಿ ಬಾಂಡ್ ನೀಡುವಂತೆ ರೇವಣ್ಣಗೆ ಸೂಚಿಸಿರುವ ಕೋರ್ಟ್ ಸಾಕ್ಷಿ ನಾಶಕ್ಕೆ ಮುಂದಾಗಬಾರದು, ಸಂತ್ರಸ್ತೆಯರಿಗೆ ಬೆದರಿಕೆ ಹಾಕಬಾರದು. ಎಸ್ಐಟಿ ತನಿಖೆಗೆ ಸಹಕರಿಸಬೇಕು ಎಂಬ ಷರತ್ತುಗಳ ಮೇಲೆ ಜಾಮೀನು ನೀಡಿದೆ.
ಲೋಕಸಭೆ ಚುನಾವಣೆ ನಂತರ ಮಹಾರಾಷ್ಟ್ರ ಮಾದರಿಯಲ್ಲೇ ಕರ್ನಾಟಕ ಕಾಂಗ್ರೆಸ್ ಸರ್ಕಾರ ಉರುಳಿಸಲು Operation Nath ಯೋಜನೆ ಸಿದ್ದವಾಗುತ್ತಿದೆ ಎಂಬ ಏಕನಾಥ್ ಶಿಂಧೆ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟಾಂಗ್ ನೀಡಿದ್ದು, ಯಾವ ಕಾರಣಕ್ಕೂ ಅಪರೇಷನ್ ಕಮಲ ಮಾಡಲು ಆಗುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ಪ್ರಯತ್ನ ಮಾಡಿ ವಿಫಲರಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಆದಂತೆ ಕರ್ನಾಟಕದಲ್ಲಿ ಆಗುವುದಿಲ್ಲ. ಸಿಎಂ ಏಕನಾಥ್ ಶಿಂಧೆ ಭ್ರಮೆಯಲ್ಲಿದ್ದಾರೆ ಎಂದು ಲೇವಡಿ ಮಾಡಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮಹಾರಾಷ್ಟ್ರ ಸರ್ಕಾರ ಉಳಿಯೋದೆ ಡೌಟು ಇದೆ. ಅಲ್ಲಿ ಶಾಸಕರು ಯುಟರ್ನ್ ಹೊಡೆಯುತ್ತಿದ್ದಾರೆ. ಲೋಕಸಭಾ ಚುನಾವಣೆ ಬಳಿಕ ಅಲ್ಲಿ ನಮ್ಮ ಪಕ್ಷದ ಸರ್ಕಾರ ಬರಲಿದೆ. ಅಲ್ಲಿ ಮೈತ್ರಿ ಸರ್ಕಾರ ಬರಲಿದೆ ಎಂದು ಭವಿಷ್ಯ ನುಡಿದರು.
ವಿಜಯಪುರದ ಚಾಬಕಸಾಬ್ ದರ್ಗಾದ ಬಳಿ ನಿನ್ನೆ ಒಂಟೆ ಸವಾರಿ ಮಾಡಿದ್ದ ನಂತರ ಮೂವರು ಮಕ್ಕಳು ಕಾಣೆಯಾಗಿದ್ದರು. ಇಂದು ನಗರದ ಇಂಡಿ ರಸ್ತೆಯಲ್ಲಿರುವ ಯುಜಿಡಿ ತ್ಯಾಜ್ಯ ನೀರಿನ ಸಂಸ್ಕರಣಾ ಘಟಕದಲ್ಲಿ ಶವಗಳು ಪತ್ತೆಯಾಗಿದೆ. ಬೇಸಿಗೆ ರಜೆಗೆಂದು ಗದಗದ ಅನುಷ್ಕಾ, ವಿಜಯ ವಿಜಯಪುರದಲ್ಲಿನ ತಮ್ಮ ಮಾವನ ಮನೆಗೆ ಬಂದಿದ್ದರು. ಇಂದು ಅನುಷ್ಕಾ ದಹಿಂದೆ, ವಿಜಯ್ ದಹಿಂದೆ ಮತ್ತು ಮಿಹಿರ್ ಜನಗೌಲಿ ಮೃತದೇಹ ಪತ್ತೆಯಾಗಿದೆ. ಇದೇ ವೇಳೆ ಸಂಸ್ಕರಣಾ ಘಟಕದ ಎದುರು ಮೃತ ಮಕ್ಕಳ ಪೋಷಕರು ಪ್ರತಿಭಟನೆ ನಡೆಸಿದ್ದು ಸಂಸ್ಕರಣಾ ಘಟಕದಲ್ಲಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿಲ್ಲ. ತ್ಯಾಜ್ಯ ಘಟಕಕ್ಕೆ ತಡೆಗೋಡೆ ಅಥವಾ ಬೇಲಿ ಹಾಕಿಲ್ಲ. ಮಕ್ಕಳ ಸಾವಿಗೆ ಮಹಾನಗರ ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿ ಕಾರಣ ಎಂದು ಆರೋಪಿಸಿದ್ದಾರೆ.
ಬೆಂಗಳೂರಿನ ಆರು ಖಾಸಗಿ ಆಸ್ಪತ್ರೆಗಳಿಗೆ ಇ ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು ಆಸ್ಪತ್ರೆಗಳಲ್ಲಿ ಶ್ವಾನ ಮತ್ತು ಬಾಂಬ್ ನಿಷ್ಕ್ರಿಯ ತಂಡಗಳೊಂದಿಗೆ ಪೊಲೀಸರು ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿದರು. ಆದಾಗ್ಯೂ, ಈ ಆಸ್ಪತ್ರೆಗಳ ಆವರಣದಲ್ಲಿ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ. ಇದೊಂದು ಹುಸಿ ಬಾಂಬ್ ಬೆದರಿಕೆ ಕರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಿನ್ನೆ ಆಸ್ಪತ್ರೆಗಳಿಗೆ ಇಮೇಲ್ ಬಂದಿದ್ದು, ನಾನು ನಿಮ್ಮ ಕಟ್ಟಡದಲ್ಲಿ ಸ್ಫೋಟಕ ಸಾಧನಗಳನ್ನು ಇರಿಸಿದ್ದೇವೆ. ಮುಂದಿನ ಕೆಲವೇ ಗಂಟೆಗಳಲ್ಲಿ ಅವು ಸ್ಫೋಟಗೊಳ್ಳುತ್ತವೆ. ಈ ಬಾಂಬ್ ಗಳನ್ನು ನಿಷ್ಕ್ರಿಯಗೊಳಿಸಲು ನಿಮಗೆ ಕೆಲವು ಗಂಟೆಗಳ ಸಮಯವಷ್ಟೇ ಇದೆ. ಅಷ್ಟರಲ್ಲಿ ನಿಷ್ಕ್ರಿಯಗೊಳಿಸಿ ಇಲ್ಲದಿದ್ದರೆ ಕಟ್ಟಡದೊಳಗಿನ ಅಮಾಯಕರ ರಕ್ತವು ನಿಮ್ಮ ಕೈಯಲ್ಲಿರುತ್ತದೆ ಎಂದು ಇ ಮೇಲ್ ಬಂದಿತ್ತು ಎನ್ನಲಾಗಿದೆ.
ಸ್ಯಾಂಡಲ್‌ವುಡ್ ನಟ ಚೇತನ್ ಚಂದ್ರ ಮೇಲೆ ಅಪರಿಚಿತ ವ್ಯಕ್ತಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಕಗ್ಗಲಿಪುರ ವ್ಯಾಪ್ತಿಯಲ್ಲಿ ನಡೆದಿದೆ. ಈ ಬಗ್ಗೆ ಚೇತನ್ ಚಂದ್ರ ತಮ್ಮ ಸಾಮಾಜಿಕ ಜಾಲತಾಣದ ಖಾತೆ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಬೈಕ್‍ನಲ್ಲಿ ಹಿಂಬಾಲಿಸಿಕೊಂಡು ಬಂದ ಕೆಲ ಕಿಡಿಗೇಡಿಗಳು, ಬೈಕ್‍ಗೆ ಟಚ್ ಮಾಡಿದ್ದೀರಿ ಎಂದು ಗಲಾಟೆ ಶುರುಮಾಡಿದರು. ಈ ವೇಳೆ ದುಡ್ಡು ಕೇಳಲು ಆರಂಭಿಸಿದರು. ಹಣ ಕೊಡಲ್ಲ ಎಂದು ಹೇಳಿದ್ದಕ್ಕೆ ಗಲಾಟೆ ಮಾಡಿದರು. ಬಳಿಕ ಬೈಕ್‌ನಲ್ಲಿ ಚೇಸ್ ಮಾಡಿಕೊಂಡು ಬಂದು ಕಾರಿಗೆ ಬೈಕ್ ಅಡ್ಡಹಾಕಿ, ನನ್ನ ಮುಖಕ್ಕೆ ರಕ್ತ ಬರುವ ಹಾಗೆ ಹೊಡೆದಿದ್ದಾರೆ ಎಂದು ತಿಳಿಸಿದ್ದಾರೆ.
Advertisement