ನವೀನ್ ಗೌಡ ಯಾರೆಂದು ನನಗೆ ಗೊತ್ತಿಲ್ಲ; ನನ್ನ ಮತ್ತು ದೇವೇಗೌಡರ ನಡುವೆ ಬಿರುಕು ಮೂಡಿಸುವ ಯತ್ನ: ಶಾಸಕ ಎ. ಮಂಜು

ಸಂಸದ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೆನ್‌ಡ್ರೈವ್‌ ಲೀಕ್‌ ಮಾಡಿದ್ದು ಅರಕಲಗೂಡು ಜೆಡಿಎಸ್ ಶಾಸಕ ಎ. ಮಂಜು ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದ ಕಾಂಗ್ರೆಸ್‌ ಕಾರ್ಯಕರ್ತ ನವೀನ್‌ ಗೌಡ ವಿರುದ್ಧ ಎಸ್‌ಐಟಿಗೆ ದೂರು ನೀಡಲಾಗಿದೆ.
ಎ.ಮಂಜು
ಎ.ಮಂಜು
Updated on

ಬೆಂಗಳೂರು: ಸಂಸದ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೆನ್‌ಡ್ರೈವ್‌ ಲೀಕ್‌ ಮಾಡಿದ್ದು ಅರಕಲಗೂಡು ಜೆಡಿಎಸ್ ಶಾಸಕ ಎ.ಮಂಜು ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದ ಕಾಂಗ್ರೆಸ್‌ ಕಾರ್ಯಕರ್ತ ನವೀನ್‌ ಗೌಡ ವಿರುದ್ಧ ಎಸ್‌ಐಟಿಗೆ ದೂರು ನೀಡಲಾಗಿದೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಶಾಸಕ ಎ. ಮಂಜು ದೂರು ದಾಲಿಸಿದ್ದಾರೆ. ಸೋಮವಾರ ಎಸ್.ಐ.ಟಿ ಕಚೇರಿಗೆ ಆಗಮಿಸಿದ ಅರಕಲಗೂಡು ಜೆಡಿಎಸ್ ಶಾಸಕ ಎ. ಮಂಜು, ನವೀನ್ ಗೌಡ ವಿರುದ್ಧ ದೂರು ನೀಡಿದ್ದಾರೆ. ಪೆನ್ ಡ್ರೈವ್ ಅನ್ನು ಶಾಸಕ ಎ. ಮಂಜು ಅವರಿಗೆ ಕೊಟ್ಟಿದ್ದಾಗಿ ಭಾನುವಾರ ನವೀನ್‌ ಗೌಡ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದ. ಈ ಆರೋಪಕ್ಕೆ ಸಿಟ್ಟಾಗಿರುವ ಮಂಜು ಈಗ ದೂರು ನೀಡಿದ್ದಾರೆ.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನವೀನ್ ಗೌಡನಿಗೆ ಏಪ್ರಿಲ್‌ 20ರಂದು ಅಶ್ಲೀಲ ವಿಡಿಯೊದ ಪೆನ್‌ಡ್ರೈವ್‌ ಸಿಗುತ್ತದೆ. ಅದನ್ನು ಏಪ್ರಿಲ್‌ 21ರಂದು ನನಗೆ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ. ನನಗೆ ಪೆನ್ ಡ್ರೈವ್ ಅನ್ನು ಯಾಕೆ ಕೊಡಬೇಕು ಎಂಬುದನ್ನು ಮನಸ್ಸು ಮುಟ್ಟಿ ಹೇಳಿಕೊಳ್ಳಲಿ. ನವೀನ್ ಗೌಡ ನನಗೆ ಪರಿಚಯವೇ ಇಲ್ಲ. ನವೀನ್ ಗೌಡ ತಪ್ಪಿಸಿಕೊಳ್ಳಲು ಹಾಗೂ ಎಸ್ಐಟಿ ತನಿಖೆಯ ದಿಕ್ಕು ತಪ್ಪಿಸಲು ಈ ಹೇಳಿಕೆ ಕೊಟ್ಟಿದ್ದಾರೆ. ಸತ್ಯ ಹೊರಬರಬೇಕೆಂದು ನಾನು ಬಯಸುತ್ತೇನೆ. ಈಗ ನನ್ನನ್ನು ಏಕೆ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ನನಗೆ ತಿಳಿದಿಲ್ಲ. ಪೆನ್ ಡ್ರೈವ್‌ಗಳ ಸೋರಿಕೆ ಮಾಡುವುದರ ಹಿಂದೆ ನನ್ನ ಕೈವಾಡವಿದೆ ಎಂದು ಜನರು ಭಾವಿಸಬಾರದು ಎಂಬ ಉದ್ದೇಶದಿಂದ ನಾನು ದೂರು ದಾಖಲಿಸಿದ್ದೇನೆ. ಇದು ನನ್ನ ಮತ್ತು ಜೆಡಿಎಸ್ ನಾಯಕ ಎಚ್‌ಡಿ ದೇವೇಗೌಡರ ನಡುವೆ ಬಿರುಕು ಮೂಡಿಸುವ ಪ್ರಯತ್ನವಾಗಿರಬಹುದು ಎಂದು ಮಂಜು ತಿಳಿಸಿದರು.

ಪ್ರಜ್ವಲ್ ರೇವಣ್ಣ ಎಲ್ಲಿದ್ದಾರೆ ಎಂಬುದು ಜೆಡಿಎಸ್‌ನಲ್ಲಿ ಯಾರಿಗೂ ಗೊತ್ತಿಲ್ಲ ಎಂದರು. ಪತ್ರಿಕೆ ವರದಿಗಳ ಮೂಲಕ ಪ್ರಜ್ವಲ್ ಅವರು ತಮ್ಮ ರಿಟರ್ನ್ ಟಿಕೆಟ್‌ಗಳನ್ನು ರದ್ದುಗೊಳಿಸಿದ್ದಾರೆ ಎಂದು ನನಗೆ ತಿಳಿದುಬಂದಿದೆ. ಇಂತಹ ಘಟನೆಗಳು ಎಲ್ಲಿಯೂ ನಡೆಯಬಾರದು. ವೀಡಿಯೋ ಸೋರಿಕೆ ಹಿಂದೆ ಇದ್ದವರಿಗೆ ಶಿಕ್ಷೆಯಾಗಬೇಕು. ರೇವಣ್ಣ ಅವರನ್ನು ಜೈಲಿನಲ್ಲಿ ಭೇಟಿ ಮಾಡಿ ಮಾತನಾಡಿದ್ದೇನೆ. ದೇವೇಗೌಡರನ್ನೂ ಭೇಟಿಯಾಗಿದ್ದೇನೆ ಎಂದು ಮಂಜು ಹೇಳಿದರು.

ಎ.ಮಂಜು
Prajwal Revanna: ಸೆಕ್ಸ್ ಹಗರಣಕ್ಕೆ ಮೇಜರ್ ಟ್ವಿಸ್ಟ್, ಪೆನ್ ಡ್ರೈವ್ ಪ್ರಕರಣದಲ್ಲಿ ಶಾಸಕ ಎ ಮಂಜು ಕೈವಾಡ ಎಂದ ನವೀನ್ ಗೌಡ!

ಏತನ್ಮಧ್ಯೆ, ಎಸ್‌ಐಟಿ ಅಧಿಕಾರಿಗಳ ತಂಡವು ಹಾಸನದಲ್ಲಿ ಮೊಕ್ಕಾಂ ಹೂಡಿದ್ದು, ಪೆನ್‌ಡ್ರೈವ್‌ ಸೋರಿಕೆ ಪ್ರಕರಣದ ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದೆ. ಎಫ್‌ಎಸ್‌ಎಲ್‌ ತಜ್ಞರ ತಂಡ ಹಾಸನದ ಆರ್‌ಸಿ ರಸ್ತೆಯಲ್ಲಿರುವ ಪ್ರಜ್ವಲ್‌ ಅವರ ಎಂಪಿ ಕ್ವಾರ್ಟರ್ಸ್‌ಗೆ ಭೇಟಿ ನೀಡಿ ಸಾಕ್ಷ್ಯ ಸಂಗ್ರಹಿಸಿದೆ.

ರೇವಣ್ಣ ಅವರಿಗೆ ಜಾಮೀನು ಮಂಜೂರಾದ ಹಿನ್ನೆಲೆಯಲ್ಲಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಜೈಲಿನ ಬಳಿ ಜಮಾಯಿಸಲು ಆರಂಭಿಸಿದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಪೊಲೀಸರೊಂದಿಗೆ ಕೆಎಸ್‌ಆರ್‌ಪಿ ತುಕಡಿಯೊಂದನ್ನು ನಿಯೋಜಿಸಲಾಗಿತ್ತು. ಜೈಲಿನ ಎಲ್ಲಾ ಪ್ರವೇಶ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಲಾಗಿತ್ತು. ಶುಕ್ರವಾರದಿಂದ ಸೋಮವಾರದವರೆಗೆ ರೇವಣ್ಣ ಅವರನ್ನು ಭೇಟಿಯಾಗಲು ಜೈಲು ಅಧಿಕಾರಿಗಳು ಯಾರಿಗೂ ಅವಕಾಶ ನೀಡಿರಲಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com