ರೇವಣ್ಣಗೆ ಜಾಮೀನು: ಖುಷಿಯ ವಿಷಯವಲ್ಲ- HDK; ಜೈಲಿನಿಂದ ರೇವಣ್ಣ ಬಿಡುಗಡೆ, ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮ; ಪ್ರೀತಂಗೌಡ ಆಪ್ತರಿಗೆ SIT ಶಾಕ್! ಇಂದಿನ ಸುದ್ದಿ ಮುಖ್ಯಾಂಶಗಳು 14-05-2024

ರೇವಣ್ಣಗೆ ಜಾಮೀನು: ಖುಷಿಯ ವಿಷಯವಲ್ಲ- HDK; ಜೈಲಿನಿಂದ ರೇವಣ್ಣ ಬಿಡುಗಡೆ, ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮ; ಪ್ರೀತಂಗೌಡ ಆಪ್ತರಿಗೆ SIT ಶಾಕ್! ಇಂದಿನ ಸುದ್ದಿ ಮುಖ್ಯಾಂಶಗಳು 14-05-2024

1. ಜೈಲಿನಿಂದ ರೇವಣ್ಣ ಬಿಡುಗಡೆ @JDS ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮ

ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ನಿನ್ನೆ ಮಾಜಿ ಸಚಿವ ಹೆಚ್ಡಿ ರೇವಣ್ಣ ಅವರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದು, ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. HD ರೇವಣ್ಣ ಅವರು ಬಿಡುಗಡೆಯಾಗುತ್ತಿದ್ದಂತೆ, ಅವರ ಅಭಿಮಾನಿಗಳು ಜಯ ಘೋಷಣೆ ಹಾಕಿ ಸಂಭ್ರಮಿಸಿದರು. ಕಾರಾಗೃಹದ ಮುಂದೆ ಸೇರಿದ್ದ ಕಾರ್ಯಕರ್ತರು ಮತ್ತು ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ಮಾಡಬೇಕಾಯಿತು. ಮೇ 4ರಂದು ತಮ್ಮ ತಂದೆ ಹೆಚ್ ಡಿ ದೇವೇಗೌಡರ ನಿವಾಸದಲ್ಲಿಯೇ ಎಸ್ ಐಟಿ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದ ರೇವಣ್ಣ ಇಂದು ಜೈಲಿಂದ ಹೊರಬಂದು ನೇರವಾಗಿ ದೇವೇಗೌಡರ ನಿವಾಸಕ್ಕೆ ಆಗಮಿಸಿ ತಂದೆ-ತಾಯಿ ಆಶೀರ್ವಾದ ಪಡೆದರು. ಈಮಧ್ಯೆ, ಅಶ್ಲೀಲ ಪೆನ್ ಡ್ರೈವ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳಾದ ಲಿಖಿತ್ ಗೌಡ, ಚೇತನ್ ಜಾಮೀನು ಅರ್ಜಿಯನ್ನು ಹಾಸನದ 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯ ವಜಾ ಮಾಡಿದೆ.

2. ರೇವಣ್ಣಗೆ ಜಾಮೀನು ಸಿಕ್ಕಿರುವುದು ಖುಷಿಯ ವಿಷಯವಲ್ಲ: HDK

ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಮತ್ತು ಅಶ್ಲೀಲ ವಿಡಿಯೋದಲ್ಲಿದ್ದ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಎಚ್ ಡಿ ರೇವಣ್ಣಗೆ ಜಾಮೀನು ಸಿಕ್ಕಿರುವುದು ನನಗೆ ಸಂತಸವಾಗಿಲ್ಲ. ರಾಜ್ಯವೇ ತಲೆ ತಗ್ಗಿಸುವ ಘಟನೆ ಇದಾಗಿದ್ದು, ಸಂತಸಪಡುವ ಸಮಯವೂ ಇದಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅತ್ಯಂತ ಹೀನಾಯ ಘಟನೆ ನಡೆದಿದೆ. ರೇವಣ್ಣಗೆ ಜಾಮೀನು ಸಿಕ್ಕಿದೆ ಎಂದು ಸಂಭ್ರಮ ಪಡುವುದು ಬೇಡ. ನಾನು ಸಂತೋಷ ಪಡುತ್ತೇನೆ ಎಂದು ಭಾವಿಸಬೇಡಿ. ಕಾರ್ಯಕರ್ತರು ಸಂಭ್ರಮಿಸುವ ಸಮಯ ಇದಲ್ಲ, ಪಟಾಕಿ ಸಿಡಿಸಬೇಡಿ ಎಂದು ಹೇಳಿದರು.

3. ಅಶ್ಲೀಲ ವಿಡಿಯೋ ಪ್ರಕರಣ: ಪ್ರೀತಂಗೌಡ ಆಪ್ತರ ಬಾರ್, ಹೋಟೆಲ್ ಮೇಲೆ SIT ದಾಳಿ

ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಎಸ್ಐಟಿ ಅಧಿಕಾರಿಗಳು ಹಾಸನದ ಎರಡು ಕಡೆ ದಾಳಿ ನಡೆಸಿದ್ದಾರೆ. ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಅವರ ಆಪ್ತರಾದ ಶರತ್ ಹಾಗೂ ಕಿರಣ್ ಒಡೆತನದ ಹೋಟೆಲ್, ಬಾರ್ ಗಳ ಮೇಲೆ ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶರತ್ ಒಡೆತನದ ಕ್ವಾಲಿಟಿ ಬಾರ್ ಹಾಗೂ ಕಿರಣ್ ಒಡೆತನದ ಶ್ರೀಕೃಷ್ಣ ಹೋಟೆಲ್ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಮತ್ತೊಂದೆಡೆ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಅವರ ಹಾಸನದ ರವೀಂದ್ರನಗರದಲ್ಲಿರುವ ನಿವಾಸದ ಮೇಲೂ ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

4. ನಟ ಚೇತನ್ ಚಂದ್ರ ಮೇಲೆ ಹಲ್ಲೆ: ಇಬ್ಬರು ಆರೋಪಿಗಳ ಬಂಧನ

ಕನ್ನಡದ ನಟ ಚೇತನ್ ಚಂದ್ರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಭಾನುವಾರ ರಾತ್ರಿ ಆರು ಜನರ ತಂಡ ತಮ್ಮ ಮೇಲೆ ಹಲ್ಲೆ ನಡೆಸಿದೆ ಎಂದು ಚೇತನ್ ಚಂದ್ರ ಕಗ್ಗಲಿಪುರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಬೈಕ್ನೇಲ್ಲಿ ಹಿಂಬಾಲಿಸಿಕೊಂಡು ಬಂದ ಕಿಡಿಗೇಡಿಗಳು ಗಲಾಟೆ ಶುರುಮಾಡಿದ್ದು ಹಣಕ್ಕೆ ಒತ್ತಾಯಿಸಿದರು. ನಾನು ಹಣ ಕೊಡುವುದಿಲ್ಲ ಎಂದು ಹೇಳಿಕ್ಕೆ ನನ್ನ ಮೇಲೆ ಹಲ್ಲೆ ಮಾಡಿದ್ದರು ಎಂದು ಚೇತನ್ ಚಂದ್ರ ದೂರಿದ್ದರು. ಪ್ರಕರಣ ಸಂಬಂಧ ಮಾಹಿತಿ ನೀಡಿರುವ ಪೊಲೀಸರು, ಬೈಕ್ ಚಾಲಕ ಪಾನಮತ್ತನಾಗಿದ್ದು ನಟನ ಕಾರಿಗೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ್ದಾನೆ. ಈ ಬಗ್ಗೆ ನಟ ವಿಚಾರಿಸಲು ಮುಂದಾದಾಗ ಆರು ಮಂದಿ ದುಷ್ಕರ್ಮಿಗಳ ಗುಂಪು ಅವರ ಮೇಲೆ ಹಲ್ಲೆ ನಡೆಸಿದೆ ಎಂದು ಹೇಳಿದ್ದಾರೆ.

5. ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಜಿಎಸ್‌ಟಿ ಅಧಿಕಾರಿಗೆ 3 ವರ್ಷದ ಜೈಲು, 5 ಲಕ್ಷ ರೂಪಾಯಿ ದಂಡ

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಿಎಸ್‌ಟಿ ಅಧಿಕಾರಿಯೊಬ್ಬರಿಗೆ ಸಿಬಿಐ ವಿಶೇಷ ನ್ಯಾಯಾಲಯ ಮೂರು ವರ್ಷ ಸಾದಾ ಜೈಲು ಶಿಕ್ಷೆ ಹಾಗೂ 5 ಲಕ್ಷ ರೂಪಾಯಿ ದಂಡ ವಿಧಿಸಿದೆ. ಉತ್ತರ ಪ್ರದೇಶ ಮೂಲದ ಕೇಂದ್ರೀಯ ಅಬಕಾರಿ ಮತ್ತು ಕೇಂದ್ರ ತೆರಿಗೆ (GST) ಸೂಪರಿಂಟೆಂಡೆಂಟ್ ಜಿತೇಂದ್ರ ಕುಮಾರ್ ಡಾಗೂರ್ ಅವರು 2015ರಲ್ಲಿ ಆದಾಯ ತೆರಿಗೆ ವಿವರ ಸಲ್ಲಿಕೆದಾರರಿಗೆ ಸಹಾಯ ಮಾಡಿಕೊಡಲು 25 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದರು. ಆರೋಪಿಗೆ 5 ಲಕ್ಷ ರೂಪಾಯಿ ದಂಡ ವಿಧಿಸಿರುವುದಕ್ಕೆ ಕಾರಣ ನೀಡಿರುವ ನ್ಯಾಯಾಲಯ, ತನಿಖೆ ಮತ್ತು ವಿಚಾರಣೆ ನಡೆಸಲು ತೆರಿಗೆದಾರರ ಹಣದಿಂದ ಸಾಕಷ್ಟು ಖರ್ಚು ಮಾಡಲಾಗಿದೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com