ಮೈಸೂರಿನಲ್ಲಿ NIA ಘೋಷಿತ ಅಪರಾಧಿ ನೂರುದ್ದೀನ್ ಬಂಧನ; ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಹಣ ಹಂಚುತ್ತಿದೆ BJP ಆರೋಪ! ಇಂದಿನ ಸುದ್ದಿ ಮುಖ್ಯಾಂಶಗಳು 16-05-2024

ಮೈಸೂರಿನಲ್ಲಿ NIA ಘೋಷಿತ ಅಪರಾಧಿ ನೂರುದ್ದೀನ್ ಬಂಧನ; ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಹಣ ಹಂಚುತ್ತಿದೆ BJP ಆರೋಪ! ಇಂದಿನ ಸುದ್ದಿ ಮುಖ್ಯಾಂಶಗಳು 16-05-2024

1. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಮಧ್ಯಂತರ ಜಾಮೀನು

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ಈ ಪ್ರಕರಣದಲ್ಲಿ ಬಂಧನದ ಭೀತಿ ಎದುರಿಸುತ್ತಿರುವ ಹೆಚ್ ಡಿ ರೇವಣ್ಣ, ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ನಾಳೆ ಮಧ್ಯಾಹ್ನದವರೆಗೂ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು 5 ಲಕ್ಷ ರೂಪಾಯಿ ಬಾಂಡ್ ನೀಡಲು ಮಾಜಿ ಸಚಿವರಿಗೆ ಸೂಚನೆ ನೀಡಿದೆ. ನಾಳೆ ಮಧ್ಯಾಹ್ನ 3 ಗಂಟೆ ವೇಳೆಗೆ ಮತ್ತೆ ಅರ್ಜಿ ವಿಚಾರಣೆ ನಡೆಯಲಿದೆ.

2. ಎನ್‌ಐಎ ಘೋಷಿತ ಅಪರಾಧಿ ನೂರುದ್ದೀನ್ ಅಲಿಯಾಸ್ ರಫಿ ಬಂಧನ

ಹೈದರಾಬಾದ್ ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಘೋಷಿತ ಅಪರಾಧಿ ನೂರುದ್ದೀನ್ ಅಲಿಯಾಸ್ ರಫಿ ಎಂಬಾತನನ್ನು ಎನ್‌ಐಎ ಮೈಸೂರಿನ ರಾಜೀವ್ ನಗರದಲ್ಲಿ ಬಂಧಿಸಿದೆ. ನೂರುದ್ದೀನ್‌ ಮೇಲೆ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಬುಧವಾರ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಎನ್ಐಎ ಅಧಿಕಾರಿಗಳು ಆತನನ್ನು ಬಂಧಿಸಿದ್ದಾರೆ. 2023 ಆಗಸ್ಟ್‌ ನಲ್ಲಿ ಜಾಮೀನು ಪಡೆದಿದ್ದ ನೂರುದ್ದೀನ್ ಚೆನ್ನೈನ ಎನ್‌ಐಎ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗದೇ ತಲೆಮರೆಸಿಕೊಂಡಿದ್ದನು. ಆತನ ವಿರುದ್ಧ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. 2024 ಮೇ 7ರಂದು, ನ್ಯಾಯಾಲಯವು ಆತನನ್ನೂ ಘೋಷಿತ ಅಪರಾಧಿ ಎಂದು ಘೋಷಿಸಿತು. ಬೆಂಗಳೂರಿನ ಇಸ್ರೇಲ್ ಹಾಗೂ ಚೆನ್ನೈನ ಅಮೆರಿಕಾ ರಾಯಭಾರ ಕಚೇರಿಗಳ ಮೇಲೆ ಸ್ಫೋಟಕ್ಕೆ ಸಂಚು ರೂಪಿಸಿದ್ದ ಆರೋಪ ನೂರುದ್ದೀನ್ ಮೇಲಿದೆ.

3. ಹಾಸನದ ತಿಮ್ಮನಹಳ್ಳಿ ಗ್ರಾಮದಲ್ಲಿ ಈಜಲು ಹೋಗಿದ್ದ ನಾಲ್ವರು ಮಕ್ಕಳು ಸಾವು

ಹಾಸನದ ಆಲೂರು ತಾಲೂಕಿನ ತಿಮ್ಮನಹಳ್ಳಿ ಗ್ರಾಮದಲ್ಲಿ ಈಜಲು ಹೋಗಿದ್ದ ನಾಲ್ವರು ಮಕ್ಕಳು ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತರನ್ನು ಹಾಸನದ ಮುತ್ತಿಗೆ ಗ್ರಾಮದ ಜೀವನ್, ಸಾತ್ವಿಕ್, ವಿಶ್ವಸ್ ಮತ್ತು ಪೃಥ್ವಿ ಎಂದು ಗುರುತಿಸಲಾಗಿದೆ. ತನ್ನ ಸ್ನೇಹಿತರೊಂದಿಗೆ ಈಜಲು ಹೋಗಿದ್ದ ಚಿರಾಗ್ ದಡ ತಲುಪಿ ಜೀವ ಉಳಿಸಿಕೊಂಡಿದ್ದಾನೆ. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ನೆರವಿನಿಂದ ಮಕ್ಕಳ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಘಟನಾ ಸ್ಥಳಕ್ಕೆ ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು. ಮತ್ತೊಂದು ಪ್ರಕರಣದಲ್ಲಿ ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಪತಿ ಮೃತಪಟ್ಟಿರುವಂತಹ ಘಟನೆ ಬೆಂಗಳೂರಿನ ಬಾಗಲಗುಂಟೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತನನ್ನು ಬಿಹಾರ ಮೂಲದ ಜಿಮ್ ಟ್ರೈನರ್ ಅಮಿತ್ ಕುಮಾರ್ ಎಂದು ಗುರುತಿಸಲಾಗಿದೆ.

4. ಹುಬ್ಬಳ್ಳಿಯಲ್ಲಿ ಅಂಜಲಿ ಬರ್ಬರ ಹತ್ಯೆ: ಇಬ್ಬರು ಪೊಲೀಸರನ್ನು ಅಮಾನತು

ಹುಬ್ಬಳ್ಳಿಯಲ್ಲಿ ಯುವತಿ ಅಂಜಲಿ ಅಂಬಿಗೇರ ಬರ್ಬರ ಹತ್ಯೆ ಪ್ರಕರಣ ಸಂಬಂಧ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಅಂಜಲಿ ಕೊಲೆಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂದು ಕಂಡುಬಂದಿದ್ದು, ಕರ್ತವ್ಯಲೋಪ ಆರೋಪದ ಮೇಲೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್ ಅವರು ಬೆಂಡಿಗೇರಿ ಪೊಲೀಸ್ ಇನ್ಸ್‌ಪೆಕ್ಟರ್ ಸಿಬಿ ಚಿಕ್ಕೋಡಿ ಮತ್ತು ಹೆಡ್ ಕಾನ್‌ಸ್ಟೆಬಲ್ ರೇಖಾ ಹಾವರಡ್ಡಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ. ಈಮಧ್ಯೆ, ಅಂಜಲಿ ಹತ್ಯೆಯನ್ನು ಖಂಡಿಸಿರುವ ಮೃತ ನೇಹಾ ಹಿರೇಮಠ್ ತಂದೆ, ವೀರಾಪೂರ ಓಣಿಯ ಕಾಂಗ್ರೆಸ್ ಕಾರ್ಪೊರೇಟರ್‌ ನಿರಂಜನ ಹಿರೇಮಠ ಹುಬ್ಬಳ್ಳಿ ಪೊಲೀಸರು ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ನನ್ನ ಮಗಳ ಹತ್ಯೆ ನಂತರ ಮತ್ತೊಂದು ಬರ್ಬರ ಹತ್ಯೆಯಾಗಿದೆ. ಇಲ್ಲಿನ ಪೊಲೀಸ್ ಕಮೀಷನರ್ ಏನು ಮಾಡುತ್ತಿದ್ದಾರೆ. ಕರ್ನಾಟಕದಲ್ಲೂ ಉತ್ತರಪ್ರದೇಶ, ಹೈದರಾಬಾದ್‌ ಮಾದರಿಯಲ್ಲೇ ಆರೋಪಿಯ ಎನ್‌ಕೌಂಟರ್‌ ಮಾಡಬೇಕು ಎಂದು ಆಗ್ರಹಿಸಿದರು.

5. ವಿಧಾನಪರಿಷತ್ ಚುನಾವಣೆಯಲ್ಲಿ ರಾಜ್ಯ ಸರ್ಕಾರ ಹಣ ಹಂಚುತ್ತಿದೆ ಎಂದು ವಿಪಕ್ಷ ಬಿಜೆಪಿ ಆರೋಪ

ವಿಧಾನಪರಿಷತ್ ಚುನಾವಣೆಯಲ್ಲಿ ರಾಜ್ಯ ಸರ್ಕಾರ ಹಣ ಹಂಚುತ್ತಿದೆ ಎಂದು ವಿಪಕ್ಷ ಬಿಜೆಪಿ ಆರೋಪ ಮಾಡಿದೆ. ಮತದಾರರಿಗೆ ಹಂಚಲು ತಂದಿದ್ದು ಎನ್ನಲಾದ ವಸ್ತುಗಳಿದ್ದ ವೀಡಿಯೋವನ್ನು ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಕನ್ನಡಿಗರ ತೆರಿಗೆಯನ್ನು ಲೂಟಿ ಹೊಡೆದ ATMSarkara ಅದನ್ನು ಚುನಾವಣೆಗಳಲ್ಲಿ ಅಕ್ರಮವಾಗಿ ಹಂಚಲು ಹೋಗಿ ಸಿಕ್ಕಿಬಿದ್ದಿದೆ ಎಂದು ಬಿಜೆಪಿ ಟೀಕಿಸಿದೆ. ಬೆಂಗಳೂರು ಪದವೀಧರ ಕ್ಷೇತ್ರದ ಅಭ್ಯರ್ಥಿ ರಾಮೋಜಿ ಗೌಡ ಸುಮಾರು 20 ಸಾವಿರಕ್ಕೂ ಅಧಿಕ ಉಡುಗೊರೆಗಳನ್ನು ಕೊರಿಯರ್ ಮೂಲಕ ಕಳಿಸಲು ಸಂಚು ರೂಪಿಸಿದ್ದು ವಿದ್ಯಾವಂತ ಪದವೀಧರರಿಗೆ ಆಮಿಷ ಒಡ್ಡಿ ಮತ ಕೇಳುವಷ್ಟು ದಯನೀಯ ಸ್ಥಿತಿಗೆ ಕಾಂಗ್ರೆಸ್ ತಲುಪಿದೆ ಎಂದು ಬಿಜೆಪಿ ಲೇವಡಿ ಮಾಡಿದೆ. ಬೆಂಗಳೂರು ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನು ಚುನಾವಣಾ ಆಯೋಗ ಕೂಡಲೇ ಅಸಿಂಧುಗೊಳಿಸಬೇಕೆಂದು ಬಿಜೆಪಿ ಆಗ್ರಹಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com