
ದಾವಣಗೆರೆ: ಹುಬ್ಬಳ್ಳಿಯ ವೀರಾಪುರ ಓಣಿಯ 20 ವರ್ಷದ ಅಂಜಿಲಿ ಅಂಬಿಗೇರಯನ್ನು ಬರ್ಬರವಾಗಿ ಕೊಲೆ ಮಾಡಿದ್ದ ಆರೋಪಿ ವಿಶ್ವ ಸಿಕ್ಕಿಬಿದ್ದಿದ್ದೇ ರೋಚಕ. ದಾವಣಗೆರೆಯಲ್ಲಿ ರೈಲಿನಲ್ಲಿ ಮತ್ತೊಬ್ಬ ಮಹಿಳೆಗೆ ಚೂರಿ ಇರಿದು ಪರಾರಿಯಾಗಲು ಯತ್ನಿಸಿದಾಗ ಆರೋಪಿಯನ್ನು ಸಾರ್ವಜನಿಕರು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ರೈಲ್ವೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನು ಅಂಜಲಿ ಹತ್ಯೆ ಆರೋಪಿ ಇತನೇ ಎಂಬುದು ತಿಳಿದ ತಕ್ಷಣ ರೈಲ್ವೆ ಪೊಲೀಸರು ಹುಬ್ಬಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದು ಸದ್ಯ ಹುಬ್ಬಳ್ಳಿ ಪೊಲೀಸರು ಆರೋಪಿ ವಿಶ್ವನನ್ನು ಬಂಧಿಸಿದ್ದಾರೆ.
ರೈಲಿನಲ್ಲಿ ವಿಶ್ವ ನನ್ನನ್ನು ಮಹಿಳೆಯೊಬ್ಬರು ಕೆಟ್ಟದಾಗಿ ನೋಡುತ್ತಿದ್ದನು. ಅಲ್ಲದೆ ಆಕೆ ಶೌಚಾಲಯಕ್ಕೆ ಹೋದಾಗ ಆಕೆಯನ್ನು ಹಿಂಬಾಲಿಸಿಕೊಂಡು ಹೋಗಿದ್ದಾನೆ. ಶೌಚಕ್ಕೆ ಹೋಗಿದ್ದ ಮಹಿಳೆಯನ್ನು ಕಿಂಡಿಯಿಂದ ಇಣುಕಿ ನೋಡಲು ಯತ್ನಿಸಿದ್ದಾನೆ. ಈ ವೇಳೆ ಮಹಿಳೆ ನಿನಗೆ ಅಕ್ಕ-ತಂಗಿ ಇಲ್ಲವ ಎಂದು ದಬಾಯಿಸಿದ್ದಾರೆ. ಈ ವೇಳೆ ಮಹಿಳೆಗೆ ಚಾಕು ತೋರಿಸಿದ ವಿಶ್ವ ಆಕೆಗೆ ಹೊಟ್ಟೆಗೆ ಇರಿಯಲು ಮುಂದಾಗಿದ್ದನು. ಮಹಿಳೆ ತಕ್ಷಣ ತನ್ನ ಕೈ ಅಡ್ಡಗಟ್ಟಿದ್ದರಿಂದ ಚಾಕು ಕೈಗೆ ತಾಗಿದೆ. ಈ ವೇಳೆ ಮಹಿಳೆ ಜೋರಾಗಿ ಕೂಗಿಕೊಂಡಿದ್ದು ಪರಾರಿಯಾಗಲು ಯತ್ನಿಸಿದ ವಿಶ್ವನನ್ನು ಸಾರ್ವಜನಿಕರು ಹಿಡಿದು ಥಳಿಸಿದ್ದಾರೆ. ಚೂರಿ ಇರಿತ ಸಂಬಂಧ ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಗೆ ಗದಗ ಮೂಲದ ಲಕ್ಷ್ಮಿ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.
ಹುಬ್ಬಳ್ಳಿಯಲ್ಲಿ ಎರಡು ದಿನಗಳ ಹಿಂದೆ ಅಂಜಲಿ ಅಂಬಿಗೇರ್ ಎಂಬ ಯುವತಿಯನ್ನು ವಿಶ್ವನಾಥ್ ಸಾವಂತ್ ಎಂಬ ಯುವಕ ತನ್ನ ಪ್ರೇಮ ನಿವೇದನೆಗೆ ಸಹಕರಿಸುತ್ತಿಲ್ಲ ಎಂದು ಸಿಟ್ಟಿನಿಂದ ಬೆಳ್ಳಂಬೆಳಗ್ಗೆ ಆಕೆಯ ಮನೆಯೊಳಗೆ ನುಗ್ಗಿ ಚಾಕುವಿನಿಂದ ಮನಸೋ ಇಚ್ಛೆ ತಿವಿದು ಹತ್ಯೆ ಮಾಡಿ ಪರಾರಿಯಾಗಿದ್ದನು. ಕೊಲೆಯ ನಂತರ ವಿಶ್ವ ಹೊಸ ಬಸ್ ನಿಲ್ದಾಣಕ್ಕೆ ಬಂದು ಬಸ್ ಹತ್ತಿ ಹಾವೇರಿಗೆ ಹೋಗಿದ್ದಾನೆ. ಹಾವೇರಿಯಲ್ಲಿ ಮೈಸೂರು ರೈಲು ಹತ್ತಿದ್ದು ಮೈಸೂರಿಗೆ ತಲುಪಿದ ಬಳಿಕ ತಾನು ಕೆಲಸ ಮಾಡುತ್ತಿದ್ದ ಮಹರಾಜ್ ಹೋಟೆಲ್ನಲ್ಲಿ ರಾತ್ರಿ ಮಲಗಿದ್ದಾನೆ. ಮುಂದೆ ಏನು ಮಾಡಬೇಕು ಎಂದು ತೋಚದೆ ಪೊಲೀಸರಿಗೆ ಶರಣಾಗುವುದು ಮೇಲು ಎಂದು ಹುಬ್ಬಳ್ಳಿಗೆ ಬರಲು ನಿರ್ಧರಿಸಿದ್ದಾನೆ.
ಮೈಸೂರಿನಿಂದ ಅರಸಿಕೇರೆಗೆ ಬಂದು ವಿಶ್ವ ಅಲ್ಲಿ ವಿಶ್ವಮಾನ ಎಕ್ಸಪ್ರೆಸ್ ಜನರಲ್ ಬೋಗಿ ಹತ್ತಿದ್ದಾನೆ. ಇದೇ ರೈಲಿನಲ್ಲಿ ತುಮಕೂರಿನಿಂದ ಸಂತ್ರಸ್ತ ಮಹಿಳೆ ಲಕ್ಷ್ಮಿ ತನ್ನ ಗಂಡನೊಂದಿಗೆ ಪ್ರಯಾಣಿಸುತ್ತಿದ್ದರು. ಈ ಚೂರಿ ಇರಿತ ಘಟನೆ ನಡೆದಿದೆ. ಸದ್ಯ ಮಹಿಳೆಯನ್ನು ಚಿಗಟೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸಾರ್ವಜನಿಕರಿಂದ ತೀವ್ರ ಥಳಿತಕ್ಕೊಳಗಾಗಿರುವ ವಿಶ್ವನನ್ನು ಪೊಲೀಸರು ಹುಬ್ಬಳ್ಳಿಯ ಕಿಮ್ಸ ಆಸ್ಪತ್ರೆಗೆ ದಾಖಲಿಸಿದ್ದಾರೆ.
Advertisement