
ಬೆಂಗಳೂರು: ಮಹಿಳೆಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರ ಮಧ್ಯಂತರ ಜಾಮೀನು ಸೋಮವಾರದವರೆಗೆ ಮುಂದುವರಿಕೆಯಾಗಿದೆ.
ಕಿಡ್ನಾಪ್ ಕೇಸ್‍ನಲ್ಲಿ ಈಗಾಗಲೇ ಮಧ್ಯಂತರ ಜಾಮೀನು ಮಂಜೂರು ಆಗಿದೆ. ಇಂದು ಮುಖ್ಯ ಜಾಮೀನು ಅರ್ಜಿಯ ವಿಚಾರಣೆ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ನಡೆಯಿತು. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ಮೇ 20 ಸೋಮವಾರಕ್ಕೆ ಆದೇಶ ಕಾಯ್ದಿರಿಸಿದರು.
ಪ್ರಕರಣದ ಅರ್ಜಿ ವಿಚಾರಣೆ ಸೆಷನ್ ಕೋರ್ಟ್ ಅಲ್ಲಿ ನಡೆಯಬೇಕಾಗಿರೋದ್ರಿಂದ ಈ ಜಾಮೀನು ಅರ್ಜಿ ಇಲ್ಲಿ ನಡೆಯೋದು ಸರಿಯಲ್ಲ. ಇದೆಲ್ಲವನ್ನೂ ಕೂಡ ಓಪನ್ ಕೋರ್ಟ್ ಅಲ್ಲಿ ಹೇಳಲು ಸಾಧ್ಯವಿಲ್ಲ. ಇನ್ ಕ್ಯಾಮರಾ ಅಲ್ಲಿ ವಿವರವಾಗಿ ಹೇಳಬಹುದು ಎಂದು ಎಸ್‍ಐಟಿ ಪರ ವಕೀಲರು ತಿಳಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಸೋಮವಾರಕ್ಕೆ ಆದೇಶ ಕಾಯ್ದಿರಿಸಿದರು. ಈ ಹಿನ್ನೆಲೆಯಲ್ಲಿ ರೇವಣ್ಣ ಅವರ ಜಾಮೀನು ಭವಿಷ್ಯ ಮೇ 20 ಕ್ಕೆ ನಿರ್ಧಾರವಾಗಲಿದೆ.
ರೇವಣ್ಣ ಮತ್ತು ಅವರ ಪುತ್ರ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಹೊಳೆನರಸೀಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಏಪ್ರಿಲ್ 28 ರಂದು 47 ವರ್ಷದ ಮನೆಯ ಸಹಾಯಕಿಯು ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ. ಪ್ರಜ್ವಲ್ ರೇವಣ್ಣ ಏಪ್ರಿಲ್ 27 ರಂದು ಜರ್ಮನಿಗೆ ತೆರಳಿದ್ದಾರೆ ಮತ್ತು ಇನ್ನೂ ತಲೆಮರೆಸಿಕೊಂಡಿದ್ದಾರೆ. ಶಾಸಕರ ನಿವಾಸದಲ್ಲಿ ತಂದೆ ಮತ್ತು ಮಗ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರುದಾರರು ಹೇಳಿಕೊಂಡಿದ್ದಾರೆ. ಪ್ರಜ್ವಲ್ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಮತ್ತು ಸಂಬಂಧಿತ ಪ್ರಕರಣಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಮಾಜಿ ಸಚಿವರನ್ನು ಕಸ್ಟಡಿಗೆ ಕೋರಿತ್ತು. ಈ ಪ್ರಕರಣದಲ್ಲಿ ರೇವಣ್ಣ ಪರ ವಕೀಲರು ನಿರೀಕ್ಷಣಾ ಜಾಮೀನು ಕೋರಿದ್ದರು.
ಗುರುವಾರ ರೇವಣ್ಣ ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಇದಕ್ಕೆ ಎಸ್‌ಐಟಿ ಆಕ್ಷೇಪ ವ್ಯಕ್ತಪಡಿಸಿತ್ತು. ಇಂದು ಮತ್ತೆ ವಿಚಾರಣೆ ಆರಂಭಿಸಿದ ನ್ಯಾಯಾಲಯ, ಎರಡೂ ಕಡೆಯ ವಾದವನ್ನು ಆಲಿಸಿದ ಬಳಿಕ ಜಾಮೀನು ಅರ್ಜಿಯ ಆದೇಶವನ್ನು ಸೋಮವಾರಕ್ಕೆ ಕಾಯ್ದಿರಿಸಿದ್ದು, ಅಲ್ಲಿಯವರೆಗೆ ಮಧ್ಯಂತರ ಜಾಮೀನು ವಿಸ್ತರಿಸಿದೆ. ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾಯಿತ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ರೇವಣ್ಣ ಅವರಿಗೆ ಕಳೆದ ಸೋಮವಾರ ಜಾಮೀನು ಮಂಜೂರು ಮಾಡಿದೆ. ಮಹಿಳೆಯ ಅಪಹರಣದ ಆರೋಪದ ಪ್ರಕರಣದಲ್ಲಿ ಮೇ 4 ರಂದು ಎಸ್‌ಐಟಿ ಅವರನ್ನು ಬಂಧಿಸಿತ್ತು.
33 ವರ್ಷದ ಪ್ರಜ್ವಲ್ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಗಳನ್ನು ಎದುರಿಸುತ್ತಿದ್ದಾರೆ. ಈ ಹಗರಣ ರಾಜ್ಯ ರಾಜಕೀಯ ಬಿರುಗಾಳಿ ಎಬ್ಬಿಸಿದ್ದು, ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿ(ಎಸ್) ಜಿದ್ದಾಜಿದ್ದಿಯಲ್ಲಿ ತೊಡಗಿವೆ. ಪ್ರಜ್ವಲ್ ವಿರುದ್ಧ ಇಂಟರ್ ಪೋಲ್ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದ್ದು, ಆತನನ್ನು ವಾಪಸ್ ಕರೆತರುವ ಪ್ರಯತ್ನ ನಡೆದಿದೆ.
Advertisement