
ಬೆಂಗಳೂರು: ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಭಾರತಕ್ಕೆ ಕರೆತರುವ ಪ್ರಯತ್ನ ನಡೆಯುತ್ತಿದೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪುನರುಚ್ಛರಿಸಿದರು. ಪ್ರಜ್ವಲ್ ರೇವಣ್ಣ ಪ್ರಕರಣ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ್ದು, ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿ(ಎಸ್) ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ಪ್ರಜ್ವಲ್ ಕಳೆದ ಏಪ್ರಿಲ್ 27 ರಂದು ಜರ್ಮನಿಗೆ ತೆರಳಿದ್ದು ಇನ್ನೂ ವಾಪಸ್ಸಾಗಿಲ್ಲ.
ಪ್ರಜ್ವಲ್ ರೇವಣ್ಣರನ್ನು ಕರೆತರುವ ಪ್ರಕ್ರಿಯೆಗಳು ನಡೆಯುತ್ತಿವೆ, ಕಾನೂನು ಪ್ರಕಾರ ಮುಂದುವರಿಯುತ್ತಿದ್ದವೆ ಎಂದು ಇಂಟರ್‌ಪೋಲ್‌ನ ಬ್ಲೂ ಕಾರ್ನರ್ ನೋಟಿಸ್ ಬಗ್ಗೆ ಕೇಳಿದ ಪ್ರಶ್ನೆಗೆ ಪರಮೇಶ್ವರ್ ಉತ್ತರಿಸಿದರು.
ಪ್ರಜ್ವಲ್ ದೇಶದಿಂದ ಪರಾರಿಯಾಗಲು ಸರ್ಕಾರವೇ ಹೊಣೆ ಎಂದು ಬಿಜೆಪಿ ಆರೋಪಿಸಿದ ಬಗ್ಗೆ, ವಿರೋಧ ಪಕ್ಷದವರು ಆರೋಪಿಸುವುದು ಸಹಜ. ನಮ್ಮ ಸರ್ಕಾರ ಈ ಘಟನೆಯನ್ನು ಲಘುವಾಗಿ ಪರಿಗಣಿಸಿಲ್ಲ ಎಂದರು. ಪ್ರಜ್ವಲ್‌ಗೆ ಸಂಬಂಧಿಸಿದ ಲೈಂಗಿಕ ವಿಡಿಯೋ ಹಗರಣದ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವ ಬದಲು ದೇವೇಗೌಡರ ಕುಟುಂಬದ ಪ್ರತಿಷ್ಠೆಗೆ ಮಸಿ ಬಳಿಯಲು ಕಾಂಗ್ರೆಸ್ ಸರ್ಕಾರ ಯತ್ನಿಸುತ್ತಿದೆ ಎಂಬ ಕುಮಾರಸ್ವಾಮಿಯವರ ಆರೋಪಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್, ಕುಮಾರಸ್ವಾಮಿಯವರಿಗೂ ಚೆನ್ನಾಗಿ ಗೊತ್ತಿದೆ, ಹಲವಾರು ವಿಷಯಗಳನ್ನು ನಾವು ಸಾರ್ವಜನಿಕರಿಗೆ ತರಲು ಸಾಧ್ಯವಿಲ್ಲ, ಏಕೆಂದರೆ ತನಿಖೆ ನಡೆಯುತ್ತಿದೆ. ಮಂಡ್ಯ ಶಾಸಕರಿಗೆ ಮಾಹಿತಿ ನೀಡುವುದು ಯಾರು? ಇಂತಹ ಆರೋಪ ಮಾಡುವುದು ಸುಲಭ, ನಮಗೆಲ್ಲರಿಗೂ ಜವಾಬ್ದಾರಿ ಇದೆ, ನಾವು ಜವಾಬ್ದಾರಿಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇವೆ ನಮ್ಮ ಮೇಲೆ ಯಾವುದೇ ಒತ್ತಡಗಳಿಲ್ಲ ಎಂದರು.
ಎಸ್‌ಐಟಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರಕರಣದಲ್ಲಿ ಎಸ್ ಐಟಿಯವರು ನನಗೆ ಅಥವಾ ಮುಖ್ಯಮಂತ್ರಿಗೆ ಏನನ್ನು ವಿವರಿಸಬೇಕೋ ಅದನ್ನು ತಿಳಿಸುತ್ತಿದ್ದಾರೆ., ಅದರಲ್ಲಿ ಯಾವುದೇ ಅನುಮಾನ ಬೇಡ ಎಂದರು.
Advertisement