ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ, ಅಶ್ಲೀಲ ವಿಡಿಯೊ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಪ್ರತಿಕ್ರಿಯೆ ನೀಡಿದ್ದಾರೆ. 91ನೇ ಹುಟ್ಟುಹಬ್ಬದ ಪ್ರಯುಕ್ತ ದೇವಾಲಯಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಮಾಜಿ ಪ್ರಧಾನಿ, ನಮ್ಮ ಕುಟುಂಬದ ವಿರುದ್ಧ ರಾಜಕೀಯ ಕುತಂತ್ರ ನಡೆದಿದೆ. ಪ್ರಜ್ವಲ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದರ ಬಗ್ಗೆ ತಕರಾರು ಇಲ್ಲ. ಆದರೆ ರೇವಣ್ಣ ವಿರುದ್ಧ ಆರೋಪ ಮಾಡಿರುವುದರ ಸತ್ಯ ಜನರಿಗೆ ಗೊತ್ತಿದೆ. ಪ್ರಜ್ವಲ್ ಪ್ರಕರಣ ಬಗ್ಗೆ ಕುಮಾರಸ್ವಾಮಿ ಇಡೀ ಕುಟುಂಬದ ಪರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅದರ ಬಗ್ಗೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಹೆಚ್ ಡಿ ದೇವೇಗೌಡ 91ನೇ ಹುಟ್ಟುಹಬ್ಬದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ ಸೇರಿ ಹಲವು ಗಣ್ಯರು ಶುಭಾಶಯ ಕೋರಿದ್ದಾರೆ.
ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ, ಅಶ್ಲೀಲ ವಿಡಿಯೊ ಪೆನ್ ಡ್ರೈವ್ ಹಂಚಿಕೆಯ ವಿಷಯದಲ್ಲಿ ತಮ್ಮ ವಿರುದ್ಧ ಬಿಜೆಪಿ ನಾಯಕ ದೇವರಾಜೇಗೌಡ ಆರೋಪಗಳನ್ನು ಡಿಸಿಎಂ ಡಿಕೆ ಶಿವಕುಮಾರ್ ತಳ್ಳಿಹಾಕಿದ್ದಾರೆ. ನನ್ನ ವಿರುದ್ಧ ದೇವರಾಜೇಗೌಡ ಲೋಕಾಯುಕ್ತ ಅಥವಾ ಬೇರೆ ಯಾವುದೇ ತನಿಖಾ ಸಂಸ್ಥೆಗಳಿಗೆ ದೂರು ನೀಡಲಿ. ಅವರಿಗೆ ಮಾನಸಿಕ ಸಮಸ್ಯೆ ಇದೆ ಎಂದೆನಿಸುತ್ತದೆ. ಅವರ ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಪೆನ್ ಡ್ರೈವ್ ಹಂಚಿರುವುದರ ಹಿಂದೆ ಡಿಕೆ ಶಿವಕುಮಾರ್ ಹಾಗೂ ಇನ್ನೂ 4 ಸಚಿವರ ಕೈವಾಡವಿದೆ. ಪೆನ್ ಡ್ರೈವ್ ಪ್ರಕರಣದಲ್ಲಿ ತಮ್ಮ ಯೋಜನೆಯಲ್ಲಿ ಭಾಗಿಯಾದರೆ ಕೋಟ್ಯಂತರ ರೂಪಾಯಿ ನೀಡುವುದಾಗಿ ಡಿಕೆ ಶಿವಕುಮಾರ್ ಆಮಿಷವೊಡ್ಡಿದ್ದರು ಎಂದು ದೇವರಾಜೇಗೌಡ ಆರೋಪಿಸಿದ್ದಾರೆ.
175 ಪ್ರಯಾಣಿಕರಿದ್ದ ದೆಹಲಿ-ಬೆಂಗಳೂರು ನಡುವಿನ ಏರ್ ಇಂಡಿಯಾ ವಿಮಾನದ ಹವಾ ನಿಯಂತ್ರಣ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆ ವಿಮಾನ ದೆಹಲಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ದೆಹಲಿಯಿಂದ ಸಂಜೆ 5 ಗಂಟೆ 52 ನಿಮಿಷಕ್ಕೆ ಏರ್ ಇಂಡಿಯಾ AI807 ವಿಮಾನ ಟೇಕಾಫ್ ಆಗಿತ್ತು. ಸಂಜೆ 6 ಗಂಟೆ 12 ನಿಮಿಷದ ವೇಳೆ ವಿಮಾನದ ಎಸಿ ಯುನಿಟ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ವಿಮಾನದಲ್ಲಿದ್ದ ಎಲ್ಲಾ 175 ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಯ ವೇಳೆ ತಮ್ಮ ಬ್ಯಾಗ್‌ನಲ್ಲಿ ಬಾಂಬ್ ಇರುವುದಾಗಿ ಸುಳ್ಳು ಬೆದರಿಕೆಯನ್ನು ನೀಡಿ ಭೀತಿ ಸೃಷ್ಟಿಸಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಪ್ರಯಾಣಿಕನೊಬ್ಬನನ್ನು ಬಂಧಿಸಲಾಗಿದೆ.
ಜನಪ್ರಿಯ ನ್ಯಾಚುರಲ್ ಐಸ್‌ಕ್ರೀಂ ಸಂಸ್ಥೆಯ ಮಾಲಿಕ, 'ಐಸ್‌ಕ್ರೀಂ ಮ್ಯಾನ್' ಎಂದೇ ಖ್ಯಾತಿ ಗಳಿಸಿದ್ದ ರಘುನಂದನ್ ಶ್ರೀನಿವಾಸ್ ಕಾಮತ್ ಅನಾರೋಗ್ಯದಿಂದ ನೆನ್ನೆ ತಡರಾತ್ರಿ ನಿಧನರಾದರು. ಮೃತರು ಪತ್ನಿ, ಪುತ್ರರನ್ನು ಅಗಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ ಜನಿಸಿದ್ದ ರಘುನಂದನ್ 1984ರಲ್ಲಿ ನ್ಯಾಚುರಲ್ ಐಸ್‌ಕ್ರೀಂ ಸಂಸ್ಥೆಯನ್ನು ಹುಟ್ಟುಹಾಕಿದ್ದರು. ರಘುನಂದನ್ ಅವರು ಪ್ರಸ್ತುತ 135ಕ್ಕೂ ಹೆಚ್ಚು ನ್ಯಾಚುರಲ್ಸ್ ಮಳಿಗೆಗಳನ್ನು ಹೊಂದಿದ್ದು, ವಾರ್ಷಿಕವಾಗಿ 400 ಕೋಟಿ ರುಪಾಯಿಗೂ ಅಧಿಕ ವಹಿವಾಟು ನಡೆಸುತ್ತಿದೆ.
ಚಾಲಕನ ನಿಯಂತ್ರಣ ತಪ್ಪಿದ KSRTC ಬಸ್ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಮತ್ತು ನಿರ್ವಾಹಕ ಸೇರಿ 6 ಮಂದಿ ಗಾಯಗೊಂಡಿರುವ ಘಟನೆ ನೆಲಮಂಗಲ ಬಳಿ ಇಂದು ನಡೆದಿದೆ. ಅಡಕಮಾರನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆಯಲ್ಲಿ ಘಟನೆ ನಡೆದಿದೆ. ಅಪಘಾತದ ಪರಿಣಾಮ ರಸ್ತೆಯಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಮತ್ತೊಂದು ಪ್ರಕರಣದಲ್ಲಿ ಪ್ರತ್ಯೇಕ ಅಪಘಾತದಲ್ಲಿ ಕೊಪ್ಪಳದಲ್ಲಿ 2 ಮಹಿಳೆಯರು ಸೇರಿ 5 ಮಂದಿ ಸಾವನ್ನಪ್ಪಿದ್ದಾರೆ. ಸಾರ್ವಜನಿಕ ಶೌಚಾಲಯದ ಗೋಡೆ ಕುಸಿದುಬಿದ್ದು ಇಬ್ಬರು ಮಹಿಳೆಯರು ಮೃತಪಟ್ಟಿದ್ದರೆ, ಖಾಸಗಿ ಬಸ್ ಟ್ರಾಕ್ಟರ್ ಟ್ರಾಲಿ ಮೇಲೆ ಹರಿದು ಮೂವರು ಸಾವನ್ನಪ್ಪಿದ್ದಾರೆ.
ದೂದ್‌ಗಂಗಾ ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿ 4 ನೀರುಪಾಲಾಗಿರುವ ಘಟನೆ ಬೆಳಗಾವಿಯ ಗಡಿ ಭಾಗದ ಬಸ್ತವಾಡೆ ಗ್ರಾಮದಲ್ಲಿ ವರದಿಯಾಗಿದೆ. ಇಬ್ಬರು ಕಾಲು ಜಾರಿ ನದಿಯಲ್ಲಿ ಬಿದ್ದಿದ್ದು, ಅವರನ್ನು ರಕ್ಷಿಸಲು ಹೋದ ಇನ್ನೂ ಇಬ್ಬರು ನದಿಯಲ್ಲಿ ಮುಳುಗಿದ್ದಾರೆ. ಮೃತರು ಕಾಗಲ ತಾಲೂಕಿನ ಅನ್ನುರ ಗ್ರಾಮದ ಜಾತ್ರೆಗೆ ಬಂದಿದ್ದರು.
Advertisement