ಹುಬ್ಬಳ್ಳಿ murder case: 3 ತಿಂಗಳಿಂದಲೇ ಅಂಜಲಿ ಹತ್ಯೆಗೆ ಪ್ಲಾನ್; ವಕೀಲರ ಬಳಿಯೂ ಮಾಹಿತಿ ಸಂಗ್ರಹ!
ಹುಬ್ಬಳ್ಳಿ: ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಹುಬ್ಬಳ್ಳಿಯ ಅಂಜಲಿ ಹತ್ಯೆಯ ಆರೋಪಿಯನ್ನು ಗುರುವಾರ ತಡರಾತ್ರಿ ಬಂಧಿಸಲಾಗಿದೆ. ಕೊಲೆ ಆರೋಪಿ ಗಿರೀಶ್ ಸಾವಂತ್ ಅನ್ನು ದಾವಣಗೆರೆ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೈಲ್ವೇ ಪೊಲೀಸರ ಸಹಾಯದಿಂದ ಗಿರೀಶ್‌ನನ್ನು ಬಂಧಿಸಲಾಗಿದೆ.
ಬಂಧಿತ ವಿಶ್ವನಾಥ್ ಅಲಿಯಾಸ್ ಗಿರೀಶ್ ಸಾವಂತ್ ಪ್ರಾಥಮಿಕ ತನಿಖೆಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ಕಳೆದ ಮೂರು ತಿಂಗಳಿನಿಂದ ಅಂಜಲಿಯನ್ನು ಕೊಲೆ ಮಾಡುವ ಯೋಜನೆ ಹಾಕಿಕೊಂಡಿದ್ದು , ಈ ವಿಷಯವನ್ನು ತನ್ನ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾಗಿ ಸಾವಂತ್ ಹೇಳಿದ್ದಾನೆ.
ನನ್ನನ್ನು ಶೀಘ್ರದಲ್ಲೇ 'ಎರಡನೇ ಫಯಾಜ್' ಎಂದು ಕರೆಯಲಾಗುವುದು, ಶೀಘ್ರದಲ್ಲೇ ಅಂಜಲಿಯನ್ನು ಕೊಲೆ ಮಾಡುವುದಾಗಿ ತನ್ನ ಕೆಲವು ಆಪ್ತರ ಬಳಿ ಸಾವಂತ್ ಹೇಳಿಕೊಂಡಿದ್ದನು ಎಂದು ತನಿಖಾ ತಂಡದ ಸದಸ್ಯರೊಬ್ಬರು ತಿಳಿಸಿದ್ದಾರೆ. ಫಯಾಜ್ ತನ್ನ ಮಾಜಿ ಸಹಪಾಠಿ ನೇಹಾ ಹಿರೇಮಠಳನ್ನು ಹುಬ್ಬಳ್ಳಿಯ ತನ್ನ ಕಾಲೇಜಿನಲ್ಲಿ ಏಪ್ರಿಲ್ 18 ರಂದು ಕೊಲೆ ಮಾಡಿದ್ದನು.
ಪೊಲೀಸರ ಪ್ರಕಾರ, ಅಂಜಲಿ ಬೇರೆಯವರೊಂದಿಗೆ ಮದುವೆಯಾಗುವುದನ್ನು ನೋಡಲು ಬಯಸದ ಸಾವಂತ್ ಕೋಪಗೊಂಡಿದ್ದ. ಮೂರು ತಿಂಗಳ ಹಿಂದೆ ಜಗಳವಾದ ನಂತರ ಅಂಜಲಿ ಮತ್ತು ಸಾವಂತ್ ನಡುವಿನ ಸಂಬಂಧ ಹಳಸಿತ್ತು. ಈ ಜೋಡಿ ದುರ್ಗದಬೈಲ್‌ನಲ್ಲಿ ಶಾಪಿಂಗ್‌ಗೆ ಹೋಗಿದ್ದರು, ಅಲ್ಲಿ ಅಂಜಲಿ ಮನೆಯವರು ತನಗಾಗಿ ವರಗಳನ್ನು ಹುಡುಕುತ್ತಿದ್ದಾರೆ ಎಂದು ಸಾವಂತ್ ಬಳಿ ಹೇಳಿದ್ದಳು. ಇದು ಪ್ರೇಮಿಗಳ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು ಮತ್ತು ಸಾವಂತ್ ಅವಳನ್ನು ಸಾರ್ವಜನಿಕವಾಗಿ ಹೊಡೆದಿದ್ದ. ದಾರಿಹೋಕರು ಆಕೆಯನ್ನು ರಕ್ಷಿಸಿ ಮನೆಗೆ ಕಳುಹಿಸಿದರು. ಅಂದಿನಿಂದ ಅವನು ಅಂಜಲಿಯನ್ನು ಕೊಲೆ ಮಾಡಲು ಯೋಜಿಸುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಒಂದು ವೇಳೆ ಕೊಲೆ ಮಾಡಿದರೆ ತನಗೆ ಸಿಗುವ ಶಿಕ್ಷೆಯ ಬಗ್ಗೆ ಮಾಹಿತಿ ಹಾಗೂ ಕಾರ್ಯ ವಿಧಾನಗಳ ಬಗ್ಗೆ ತಿಳಿದುಕೊಳ್ಳಲು ಆರೋಪಿ ಸಾವಂತ್ ವಕೀಲರನ್ನು ಸಂಪರ್ಕಿಸಿದ್ದ ಎಂದು ತಿಳಿದು ಬಂದಿದೆ. ಕೊಲೆಯಾದ ದಿನ (ಮೇ 15) ತಾನು ಅಂಜಲಿಯೊಂದಿಗೆ ಓಡಿಹೋಗುವುದಾಗಿ ಹೇಳಿ ಸಂತ್ರಸ್ತೆಯ ಮನೆಗೆ ಹೋಗಲು ಆರೋಪಿ ತನ್ನ ಸ್ನೇಹಿತನ ಸಹಾಯವನ್ನು ಪಡೆದಿದ್ದ. ಆದರೆ ಸಾವಂತ್‌ನ ಶರ್ಟ್‌ನಲ್ಲಿ ರಕ್ತದ ಕಲೆಗಳನ್ನು ನೋಡಿದಾಗ ಅವನ ಸ್ನೇಹಿತ ಆಘಾತಕ್ಕೊಳಗಾದನು. ಆರೋಪಿಯು ದಾಜಿಬಾನಪೇಟೆಯಿಂದ ಚಾಕು ಖರೀದಿಸಿದ್ದ.
ದಾಳಿಯ ಸಾಧ್ಯತೆಯ ಬಗ್ಗೆ ಪೊಲೀಸರಿಗೆ ಎಚ್ಚರಿಕೆ ನೀಡಿದ ಅಂಜಲಿಯ ಕುಟುಂಬಸ್ಥರು ಇನ್ನೂ ಆಘಾತದಲ್ಲಿದ್ದಾರೆ. ಅಂಜಲಿಯ ಕಿರಿಯ ಸಹೋದರಿ, ಆರೋಪಿಯನ್ನು ಗಲ್ಲಿಗೇರಿಸಬೇಕು. ನಮ್ಮ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ